ಉಡುಪಿ: ಸ್ಲೋ ಪಾಯ್ಸನ್ ನೀಡಿ ಪತಿ ಕೊಲೆಗೆ ಯತ್ನಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಎಸ್‌ಎಲ್ ವರದಿಗಾಗಿ ಉಡುಪಿ ಪೊಲೀಸರು ಕಾಯುತ್ತಿದ್ದಾರೆ.
ಪತ್ನಿ ಪ್ರತಿಮಾ ಹಾಗೂ ಆಕೆಯ ಪ್ರಿಯಕರ ದಿಲೀಪ್‌ನಿಂದ ಬಾಲಕೃಷ್ಣ ಪೂಜಾರಿ ಎಂಬವರು ಈಚೆಗೆ ಕೊಲೆಯಾಗಿದ್ದರು. ಪ್ರಕರಣ ಸಂಚಲನ ಮೂಡಿಸಿತ್ತು. ಈ ಕುರಿತು ಮಾತನಾಡಿರುವ ಉಡುಪಿ ಎಸ್‌ಪಿ ಡಾ. ಅರುಣ್ ಕುಮಾರ್, ಸ್ಲೋ ಪಾಯ್ಸನ್ ನೀಡಿರುವ ಬಗ್ಗೆ ಖಾತ್ರಿಪಡಿಸಲು ಎಫ್‌ಎಸ್‌ಎಲ್ ವರದಿ ಅಗತ್ಯವಿದೆ ಎಂದು ತಿಳಿಸಿದ್ದಾರೆ.
ಮೃತದೇಹದ ಅಂಶಗಳನ್ನು ಮಣಿಪಾಲ ಕೆಎಂಸಿಗೆ ಅಜೆಕಾರು ಪೊಲೀಸರು ರವಾನಿಸಿದ್ದಾರೆ. ಎಫ್‌ಎಸ್‌ಎಲ್ ವರದಿ ಬಂದ ನಂತರ ವಿಷಕಾರಿ ಪದಾರ್ಥಗಳ ಬಗ್ಗೆ ಅಧಿಕೃತ ಮಾಹಿತಿ ಸಿಗಲಿದೆ. ತಜ್ಞ ವೈದ್ಯರ ಎಫ್‌ಎಸ್‌ಎಲ್ ವರದಿಗಾಗಿ ಕಾಯುತ್ತಿದ್ದೇವೆ ಎಂದು ಎಸ್‌ಪಿ ಹೇಳಿದ್ದಾರೆ.
ಕಸ್ಟಡಿಯಲ್ಲಿ ಆರೋಪಿ ದಿಲೀಪ್ ವಿಚಾರಣೆ ಮುಂದುವರಿದಿದೆ. ಅಜೆಕಾರು ಪೊಲೀಸರು ಪ್ರಕರಣದ ಮಹಜರು ಪ್ರಕ್ರಿಯೆ ಮಾಡುತ್ತಿದ್ದಾರೆ. ಅನ್ನಕ್ಕೆ ಆರ್ಸೆನಿಕ್ ಎಂಬ ವಿಷ ಬೆರೆಸಿ ಕೊಲೆಗೆ ಯತ್ನ ನಡೆದಿದೆ ಎಂಬ ಮಾಹಿತಿ ವಿಚಾರಣೆ ವೇಳೆ ಪೊಲೀಸರಿಗೆ ಸಿಕ್ಕಿದೆ.
ಉಡುಪಿಯ ಲ್ಯಾಬ್‌ವೊಂದರಿಂದ ದಿಲೀಪ್ ಹೆಗ್ಡೆ ಪಾಯ್ಸನ್ ಖರೀಸಿದ್ದ ಎನ್ನಲಾಗಿದೆ. ಕಾಲೇಜು ಲ್ಯಾಬ್‌ಗಳ ಪ್ರಯೋಗಾಲಯದಲ್ಲಿ ಬಳಸುವ ವಿಷಕಾರಿ ಲಿಕ್ವಿಡ್ ಇದಾಗಿದೆ ಎಂದು ಎಸ್‌ಪಿ ತಿಳಿಸಿದ್ದಾರೆ. ಪ್ರಕರಣದಲ್ಲಿ ಒಟ್ಟು ನಾಲ್ಕು ಮೊಬೈಲ್, ಕಾರು, ಸ್ಕೂಟಿ ವಶಕ್ಕೆ ಪಡೆಯಲಾಗಿದೆ.