ಉಡುಪಿ: ಕಾರ್ಕಳ ಯುವತಿ ಅತ್ಯಾಚಾರ ಪ್ರಕರಣಕ್ಕೆ (Karkala Rape) ಸಂಬಂಧಿಸಿದಂತೆ ಪೊಲೀಸರ ತನಿಖೆ ಮುಂದುವರೆದಿದೆ. ಕೇಸ್ ಸಂಬಂಧ ಈಗಾಗಲೇ ಆರು ಮಂದಿ ಆರೋಪಿಗಳು ಜೈಲು ಕಂಬಿ ಎಣಿಸುತ್ತಿದ್ದು, ತನಿಖಾಧಿಕಾರಿಗಳು ಮಾದಕ ಜಾಲದ ಬೆನ್ನು ಬಿದ್ದಿದ್ದಾರೆ. ಡ್ರಗ್ಸ್ (Drugs) ಜಾಲದ ಸರಪಳಿ ಕಾರ್ಕಳದಿಂದ ಬೆಂಗಳೂರು, ಬೆಂಗಳೂರಿಂದ ಆಂಧ್ರಪ್ರದೇಶಕ್ಕೆ ಲಿಂಕ್ ಆಗಿರುವುದು ಬಯಲಾಗಿದೆ. ಹಾಗಾಗಿ ಹಣ ವರ್ಗಾವಣೆ ಆಗಿರುವ ಬ್ಯಾಂಕ್ ಖಾತೆಗಳ ಮೇಲೆ ಪೊಲೀಸರು ನಿಗಾ ಇಟ್ಟು ತನಿಖೆ ಮುಂದುವರಿಸಿದ್ದಾರೆ.
ಆರೋಪಿ ಅಲ್ತಾಫ್‌ನ ಬೆನ್ನತ್ತಿದ್ದ ಪೊಲೀಸರಿಗೆ ಡ್ರಗ್ಸ್ ಜಾಲದ ನಿಜ ದರ್ಶನವಾಗಿದೆ. ಪ್ರಕರಣದ ಆಳ ಬಗೆದಷ್ಟು ಹೊಸ ಹೊಸ ಹೆಸರುಗಳು, ಅಮಲು ಪದಾರ್ಥಗಳು ಪತ್ತೆಯಾಗುತ್ತಿವೆ. ಆರೋಪಿಗೆ ಡ್ರಗ್ಸ್ ಎಲ್ಲಿಂದ ಬಂತು? ಅಮಲು ಪದಾರ್ಥಗಳನ್ನು ಕೊಟ್ಟವರು ಯಾರು? ಎಂಬ ಪ್ರಶ್ನೆಗಳನ್ನಿಟ್ಟುಕೊಂಡೇ ಪೊಲೀಸರು ತನಿಖೆ ಆರಂಭಿಸಿದ್ದರು. ಇದೀಗ ಪೊಲೀಸರು ಬೆಂಗಳೂರಿಗೆ ಎಂಟ್ರಿಯಾಗಿದ್ದು, ಮತ್ತೋರ್ವ ಆರೋಪಿ ಮೂಲದ ಬಗ್ಗೆ ತನಿಖೆ ಮಾಡುತ್ತಿದ್ದಾರೆ. ಇದನ್ನೂ ಓದಿ: Apple iPhone 16 series launched – ಭಾರತದಲ್ಲಿ ಎಷ್ಟು ದರ? ಬೇರೆ ದೇಶಗಳಲ್ಲಿ ಎಷ್ಟು ದರ?
ಅಲ್ತಾಫ್‌ಗೆ ಡ್ರಗ್ಸ್ ನೀಡಿದ್ದ ವ್ಯಕ್ತಿ ಅಭಯ್. ಈತನ ಜೊತೆ ಡ್ರಗ್ಸ್ ದಂಧೆಯಲ್ಲಿದ್ದವರು ಗಿರಿರಾಜ್, ಜಾನ್ ಶಂಕರಪುರ ಹಾಗೂ ಕಾರ್ಕಳದ ಶಾಹಿದ್. ಈಗಾಗಲೇ ಪೊಲೀಸರು ಐವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಇದರ ನಡುವೆ ಕೃತ್ಯಕ್ಕೆ ಬಳಸಿದ್ದ ಕಾರಿನಲ್ಲಿ ಹಾಗೂ ಆರೋಪಿಗಳನ್ನು ಸೆರೆ ಹಿಡಿಯುವಾಗ ಸಿಕ್ಕ ಮಾದಕ ವಸ್ತುಗಳು ನಿಷೇಧಿತ ಎಂಡಿಎಂಎ ಎಂಬುದು ದೃಢಪಟ್ಟಿದೆ. ಬೆಂಗಳೂರಿನ ಆ ವ್ಯಕ್ತಿಯಿಂದಲೇ ಆರೋಪಿಗಳು ಡ್ರಗ್ಸ್ ಖರೀದಿಸಿದರು ಎಂಬುದು ತನಿಖೆ ವೇಳೆ ಬಯಲಾಗಿದೆ. ಜೊತೆಗೆ ಎಂಡಿಎಂಎ ಮಾದಕ ದ್ರವ್ಯಕ್ಕೆ ಕರಾವಳಿಯಲ್ಲಿ ಭಾರೀ ಬೇಡಿಕೆ ಇರುವುದೂ ಬಹಿರಂಗವಾಗಿದೆ. ಹೀಗಾಗಿ ಬೆಂಗಳೂರು ಮೂಲದ ಡ್ರಗ್ ಪೆಡ್ಲರ್ ಬೆನ್ನು ಹತ್ತಿದ್ದ ಪೊಲೀಸರು ಆತನನ್ನು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ. ಇದನ್ನೂ ಓದಿ: ದರ್ಶನ್ ಜೊತೆಗೆ ಸಂಪರ್ಕ ಬೆಳೆದಿದ್ದು ಹೇಗೆ? – ಎಳೆಎಳೆಯಾಗಿ ಬಿಚ್ಚಿಟ್ಟ ಪವಿತ್ರಾಗೌಡ
ಬೆಂಗಳೂರಿನ ಡ್ರಗ್ ಪೆಡ್ಲರ್‌ನನ್ನು ವಶಕ್ಕೆ ಪಡೆದ ಬೆನ್ನಲ್ಲೇ ಮಾದಕ ಜಾಲದ ಮೂಲಕ್ಕೆ ಪೊಲೀಸರು ಕೈ ಹಾಕಿದ್ದಾರೆ. ಆರು ಮಂದಿ ಆರೋಪಿಗಳ ಬಂಧನ ಆಗುತ್ತಿದ್ದಂತೆ ಅವರ ಲಿಂಕ್‌ನಲ್ಲಿರುವ ಮತ್ತಷ್ಟು ಪೆಡ್ಲರ್‌ಗಳು, ಗ್ರಾಹಕರ ಫೋನ್‌ಗಳು ಸ್ವಿಚ್ ಆಫ್ ಆಗಿವೆ. ಪೊಲೀಸರ ತನಿಖೆಗೆ ಈ ಬೆಳವಣಿಗೆ ಕೊಂಚ ಹಿನ್ನಡೆಯಾಗಿದ್ದು, ಕೇಸ್ ಸಂಬಂಧ ಕೆಲವು ವರದಿಗಳಿಗಾಗಿ ಪೊಲೀಸರು ಕಾದು ಕುಳಿತಿದ್ದಾರೆ.