ಉಡುಪಿ: ನಗರದ ಹೃದಯ ಭಾಗದ ಹೋಲ್‍ಸೇಲ್ ಅಂಗಡಿಯೊಂದಕ್ಕೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ನಗದು ದೋಚಿದ್ದಾರೆ.
ಉಡುಪಿ ಬಸ್ ನಿಲ್ದಾಣ ಸಮೀಪದ ಮೈತ್ರಿ ಕಾಂಪ್ಲೆಕ್ಸ್‍ನ ತಳಮಹಡಿಯಲ್ಲಿ ಗುಟ್ಕಾ, ಸಿಗರೇಟ್ ಮಾರಾಟ ಮಾಡುವ ಹೋಲ್ ಸೇಲ್ ಅಂಗಡಿಯ ಶಟರ್ ಮುರಿದು ಡ್ರಾವರ್ ನಲ್ಲಿದ್ದ 12 ಲಕ್ಷ ನಗದು ದೋಚಿ ಪರಾರಿಯಾಗಿದ್ದಾರೆ.
ಕಳೆದ ಮೂರು ದಿನದಿಂದ ಬ್ಯಾಂಕ್ ರಜೆ ಇದ್ದ ಕಾರಣ ನಗದನ್ನು ಮಾಲೀಕ ರವೀಂದ್ರ ನಾಯಕ್ ಅವರು ಅಂಗಡಿಯಲ್ಲೇ ಇಟ್ಟಿದ್ದರು. ಕಳವಿಗಾಗಿ ಕಬ್ಬಿಣದ ಸರಳುಗಳನ್ನು ತಂದು, ಅಂಗಡಿಯ ಶಟರನ್ನು ಮುರಿದು ಕಳ್ಳರು ಒಳ ನುಸುಳಿದ್ದಾರೆ. ಹಣವಿದ್ದ ಡ್ರಾವರನ್ನು ಮಾತ್ರ ತೆಗೆದು ಹಣದೊಂದಿಗೆ ಪರಾರಿಯಾಗಿದ್ದಾರೆ. ಇದನ್ನು ನೋಡಿದರೆ ವಿಷಯ ತಿಳಿದವರೇ ಈ ಕೃತ್ಯ ನಡೆಸಿರುವ ಸಾಧ್ಯತೆಯಿದೆ ಎಂದು ಅಂಗಡಿ ಮಾಲೀಕರು ಆರೋಪಿಸಿದ್ದಾರೆ.
ಅಂಗಡಿಯಲ್ಲಿ 2 ಸಿಸಿ ಕ್ಯಾಮೆರಾ ಇದ್ದರೂ ಅವು ಕೆಟ್ಟು ಹೋಗಿತ್ತು. ಇದನ್ನು ಗಮನಿಸಿದ ಕಳ್ಳರು ಅಂಗಡಿಗೆ ಕನ್ನ ಹಾಕಿದ್ದಾರೆ. ಸ್ಥಳಕ್ಕೆ ಉಡುಪಿ ಎಸ್ಪಿ ನಿಶಾ ಜೆಮ್ಸ್, ವೃತ್ತ ನಿರೀಕ್ಷಕ ಮಂಜುನಾಥ್ ಮತ್ತು ಬೆರಳಚ್ಚು ತಜ್ಞರು ಆಗಮಿಸಿದ್ದು ಪರೀಶಿಲನೆ ನಡೆಸಿದ್ದಾರೆ.