ಉಡುಪಿ: ಇಲ್ಲಿನ ಹಿರಿಯ ಪತ್ರಕರ್ತ, ಪರಿಸರದ ಬಗ್ಗೆ ಕಾಳಜಿಯಿದ್ದ, ಬರಹದ ಮೂಲಕ ತೀವ್ರ ಹೋರಾಟ ನೀಡುತ್ತಿದ್ದ, ಸೃಜನಶೀಲ ಲೇಖಕ ಜಯಂತ್ ಪಡುಬಿದ್ರಿ (58) ನಿಧನರಾಗಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಅನಾರೋಗ್ಯಪೀಡಿತರಾಗಿದ್ದ ಜಯಂತ್ ಪಡುಬಿದ್ರಿ ಇಲ್ಲಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಉದಯವಾಣಿ ದೈನಿಕದ ಮೂಲಕ ತಮ್ಮ ಪತ್ರಕರ್ತ ವೃತ್ತಿ ಜೀವನ ಆರಂಭಿಸಿದ್ದ ಜಯಂತ್ ಪಡುಬಿದ್ರಿ ಹನ್ನೆರಡು ವರ್ಷಗಳ ಕಾಲ ಅದೇ ಸಂಸ್ಥೆಯಲ್ಲಿ ಕೆಲಸ ಮಾಡಿದ್ದರು. ಪರಿಸರ ಹೋರಾಟಕ್ಕೆ ಇಳಿದ ಬಳಿಕ ಉದಯವಾಣಿ ಪತ್ರಿಕೆಯ ಜೊತೆಗಿನ ಅವರ ವೃತ್ತಿಜೀವನ ಕೊನೆಗೊಂಡಿತ್ತು. ಬಳಿಕ ಜಯಂತ್ ಪಡುಬಿದ್ರೆ ಜನವಾಹಿನಿ, ಜಯಕಿರಣ ಪತ್ರಿಕೆಗಳಿಗಾಗಿ ವರದಿಗಾರನಾಗಿ ಸೇವೆ ಸಲ್ಲಿಸಿದ್ದರು.
ವಸ್ತುನಿಷ್ಟ ಮತ್ತು ನಿಷ್ಟೂರ ವರದಿಗಳಿಗೆ ಪ್ರಸಿದ್ದರಾಗಿದ್ದ ಜಯಂತ್ ಪಡುಬಿದ್ರಿ ತಮ್ಮ ವರದಿಗಳು, ಲೇಖನಗಳು ಮತ್ತು ಅಂಕಣಗಳ ಮೂಲಕ ಕರಾವಳಿ ಭಾಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದರು. ತುಳು ಭಾಷೆ, ತುಳುನಾಡ್ನ ಸಂಸ್ಕೃತಿಗಳ ಬಗ್ಗೆ ವಿಶೇಷ ಆಸಕ್ತಿ ಇಟ್ಟುಕೊಂಡಿದ್ದ ಜಯಂತ್ ಈ ಕುರಿತು ಅಧ್ಯಯನ ನಡೆಸಿದ್ದರು.
ಪತ್ರಕರ್ತನಾಗಿ ಉದಯವಾಣಿಯಲ್ಲಿ ಕೆಲಸ ಮಡುತ್ತಿರುವಾಗಲೆ ಜಯಂತ್ ಪರಿಸರ ಹೋರಾಟಗಳಲ್ಲಿ ತೊಡಗಿಸಿಕೊಂಡು ಕರಾವಳಿಗೆ ಲಗ್ಗೆ ಇಡುತ್ತಿದ್ದ ಕೈಗಾರಿಕೆಗಳ ವಿರುದ್ಧ ಹೋರಾಟ ರೂಪಿಸಿ ಸಕ್ರಿಯವಾಗಿ ಹೋರಾಟದಲ್ಲಿ ತೊಡಗಿಸಿಕೊಂಡಿದ್ದರು.
ಮೂಲ್ಕಿ-ಮೂಡಬಿದಿರೆ ಪ್ರದೇಶದಲ್ಲಿ ಎಂಜಲ್ ಹಾರ್ಡ್ ಪೈಂಟ್ಸ್ ಕಾರ್ಖಾನೆ ಅಸ್ಥಿತ್ವಕ್ಕೆ ಬರುತ್ತದೆ ಎಂಬ ಸುದ್ದಿ ತಿಳಿದಾಗ ರೂಪುಗೊಂಡ ಜಯಂತ್ ಅವರ ಪರಿಸರವಾದಿ ಹೋರಾಟ ಬಳಿಕ ಇಂತಹ ಅನೇಕ ಬೃಹತ್ ಕೈಗಾರಿಕೆಗಳ ವಿರುದ್ಧವೂ ಮುಂದುವರಿಯಿತು. ಎಂಆರ್‍ಪಿಲ್, ಕೊಜೆಂಟ್ರಿಕ್ಸ್ ಯುಪಿಸಿಎಲ್ ಮುಂತಾದ ಪರಿಸರ ವಿರೋಧಿ ಕಂಪನಿ ವಿರುದ್ಧವೂ ಜಯಂತ್ ಹೋರಾಟ ಮಾಡಿದ್ದರು.
ಜಯಂತ್ ಪಡುಬಿದ್ರೆ ಒಡನಾಡಿ, ಹಿರಿಯ ಪತ್ರಕರ್ತ ಸುಭಾಸ್ ಚಂದ್ರ ವಾಗ್ಳೆ ಕಂಬನಿ ಮಿಡಿದಿದ್ದು, 55ರ ಅಸುಪಾಸಿನ ಜಯಂತ್ ಅವರಿಗೆ ಇದು ಸಾಯುವ ವಯಸ್ಸಲ್ಲ. ಪತ್ರಕರ್ತರಲ್ಲಿ ಇರಬೇಕಾದ, ಅಗಾಧ ಅಧ್ಯಯನಶೀಲತೆ ಮತ್ತು ಅದ್ಭುತ ನೆನಪಿ ಶಕ್ತಿ ಇವು ಜಯಂತ್ ಅವರ ಹೆಗ್ಗಳಿಕೆಯಾಗಿತ್ತು. ತುಳುನಾಡಿನ ಬಗ್ಗೆ ಅಧಿಕಾರಯುತವಾಗಿ ಮಾತನಾಡುತ್ತಿದ್ದ ಅವರು ಭೂತಾರಾಧನೆ ಮತ್ತು ತುಳು ಸಂಸ್ಕೃತಿ-ಆಚರಣೆಗಳ ಬಗ್ಗೆ ಒಬ್ಬ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಕೆಲಕಾಲ ಲಂಕೇಶ್ ಪತ್ರಿಕೆಗೂ ವರದಿಗಳನ್ನು ಬರೆಯುತ್ತಿದ್ದರು. ಒಂದೆರಡು ಸಂಜೆ ಪತ್ರಿಕೆಗಳಿಗೆ ಅಂಕಣ ಬರಹಗಳನ್ನೂ ಬರೆದಿದ್ದರು. ಪರಿಸರಪರ ಹೋರಾಟಗಾರರೂ ಅಗಿದ್ದ ಅವರು ಅದೇ ಕಾರಣಕ್ಕೆ ಉದ್ಯೋಗ ಕಳೆದುಕೊಂಡಿದ್ದರು. ಆದರ್ಶ, ವೃತ್ತಿಪರತೆ, ಅಧ್ಯಯನ ಎಲ್ಲವೂ ಹೆಚ್ಚಾಗಿದ್ದ ಅವರಲ್ಲಿ ಸ್ವಾಭಿಮಾನವೂ ಸ್ವಲ್ವ ಹೆಚ್ಚೆ ಇತ್ತು,ಕಿರಿಯ ಪತ್ರಕರ್ತರಿಗೆ ಕಾಳಜಿಯಿಂದ ಮಾರ್ಗದರ್ಶನ ಮಾಡುತ್ತಿದ್ದ ಅವರು ಅನೇಕ ಬಾರಿ ಸಹಪತ್ರಕರ್ತರನ್ನು ಟೀಕಿಸುವುದಕ್ಕೂ ಹಿಂಜರಿಯುತ್ತಿರಲಿಲ್ಲ. ನೇರ ನಿಷ್ಟುರವಾದಿಯಾಗಿದ್ದರು, ಎಂದು ಹೇಳಿದ್ದಾರೆ.
ಕ್ರೈಮ್, ಪೊಲೀಸ್, ರೌಡಿಸಂ, ಮಾಫಿಯಾ, ಅಂಡರ್ ವರ್ಲ್ಡ್, ರಾಜಕೀಯಗಳ ಬಗ್ಗೆ ಅಘಾದ ಜ್ಞಾಪಕ ಶಕ್ತಿ ಮತ್ತು ಆಸಕ್ತಿ ಇತ್ತು ಎಂದು ಹೇಳಿದರು.
ಜಯಂತ್ ಪಡುಬಿದ್ರಿ ಅವರ ವೃತ್ತಿ ಮತ್ತು ಹೋರಾಟಗಳಿಂದ ಅನೇಕ ಮಂದಿ ಪ್ರಭಾವಿತರಾಗಿದ್ದರು. ಅವಿವಾಹಿತರಾಗಿರುವ ಜಯಂತ್ ಪಡುಬಿದ್ರಿ ತಮ್ಮ 58ನೆಯ ವಯಸ್ಸಿನಲ್ಲಿಯೇ ನಿಧನ ಹೊಂದಿದ್ದು ಕರಾವಳಿಯ ಮಟ್ಟಿಗೆ ತುಂಬಲಾರದ ನಷ್ಟವಾಗಿದೆ.