ಉಡುಪಿ: ಜಿಲ್ಲೆಯ ಕಾಪು ತಾಲೂಕಿನ ಶಿರ್ವದ ಧರ್ಮಗುರು, ಡಾನ್ ಬಾಸ್ಕೊ ಶಾಲೆಯ ಪ್ರಾಂಶುಪಾಲ ಮಹೇಶ್ ಡಿಸೋಜಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಾಲೆಯ ಕ್ಯಾಬಿನ್ ಒಳಗೆ ಶುಕ್ರವಾರ ರಾತ್ರಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಉಡುಪಿ ಧರ್ಮಪ್ರಾಂತ್ಯ ಘೋಷಣೆಯಾದ ಬಳಿಕ ಮೊದಲ ಧರ್ಮಗುರು ಎಂಬ ಹೆಗ್ಗಳಿಕೆ ಮಹೇಶ್ ಮೇಲಿತ್ತು. ಮೂಲತಃ ಶಿರ್ವ ಸಮೀಪದ ಮೂಡಬೆಳ್ಳೆಯವರಾಗಿದ್ದ ಮಹೇಶ್, 2013ರಲ್ಲಿ ಗುರು ದೀಕ್ಷೆ ಪಡೆದಿದ್ದರು. ಚರ್ಚ್ ಗೆ ಒಳಪಟ್ಟ ಡಾನ್ ಬಾಸ್ಕೊ ಶಾಲೆಯನ್ನು ಸಿಬಿಎಸ್ ಸಿ ಪಠ್ಯಕ್ರಮಕ್ಕೆ ಪರಿವರ್ತಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಶಿಕ್ಷಣ ಮತ್ತು ಶಿಸ್ತಿಗೆ ಹೆಸರುವಾಸಿಯಾಗಿದ್ದ ಅವರು, ಭಾರೀ ಜನಮನ್ನಣೆ ಕೂಡ ಪಡೆದಿದ್ದರು.
Advertisement
Advertisement
ಮಹೇಶ್ ಕಳೆದ ಕೆಲದಿನಗಳಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಆದರೆ ಯಾವ ವಿಚಾರಕ್ಕೆ ಸಂಬಂಧಿಸಿದಂತೆ ಖಿನ್ನತೆಗೆ ಒಳಗಾಗಿದ್ದರು ಎಂಬ ಬಗ್ಗೆ ಸಹವರ್ತಿಗಳ ಬಳಿಯೂ ಹೇಳಿಕೊಂಡಿರಲಿಲ್ಲ. ಡಾನ್ ಬಾಸ್ಕೊ ಶಾಲೆ ಶಿರ್ವ ಆರೋಗ್ಯ ಮಾತಾ ಇಗರ್ಜಿ ಆಡಳಿತಕ್ಕೆ ಒಳಪಟ್ಟಿದ್ದು, ಮಹೇಶ್ ಡಿಸೊಜಾ ಪ್ರಾಂಶುಪಾಲರಾದ ಮೇಲೆ ಸಂಸ್ಥೆಗೆ ಅಡ್ಮೀಶನ್ ಜಾಸ್ತಿಯಾಗಿತ್ತು. ಪ್ರಾಂಶುಪಾಲರ ಈ ನಿರ್ಧಾರ ಊರಿನ ಜನರಲ್ಲಿ, ಶಾಲಾ ವಿದ್ಯಾರ್ಥಿಗಳು, ಪೋಷಕರ ತೀವ್ರ ನೋವಿಗೆ ಕಾರಣವಾಗಿದೆ.
Advertisement
ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.