-ಹೆಣ್ಮಕ್ಕಳ ಮೇಲೆ ಸ್ವಲ್ಪ ಕಾಳಜಿ ಮಾಡ್ರೀ
ಉಡುಪಿ: ಮಾಧ್ಯಮಗಳು ಸರ್ಕಾರದ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ, ಸರ್ಕಾರ ಐದು ವರ್ಷ ಸುಭದ್ರವಾಗಿದೆ ಎಂದು ಕಂದಾಯ ಸಚಿವ ಆರ್.ವಿ ದೇಶಪಾಂಡೆ ಹೇಳಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಡೆಲ್ಲಿಗೆ ಹೋಗಿರುವುದರ ಬಗ್ಗೆ ಕೇಳಿದಾಗ, ಅವರು ಡೆಲ್ಲಿಗೆ ಹೋಗಬಾರದಾ.!? ರಾಹುಲ್ ಗಾಂಧಿಯವರನ್ನು ಭೇಟಿ ಮಾಡಬಾರದಾ ಎಂದು ವಾಪಾಸ್ ಮಾಧ್ಯಮಗಳನ್ನು ಪ್ರಶ್ನೆ ಮಾಡಿದ್ದಾರೆ.
ಸಿದ್ದರಾಮಯ್ಯನವರು ರಾಹುಲ್ ಗಾಂಧಿಯನ್ನು ಭೇಟಿಯಾದರೆ ಆಶ್ಚರ್ಯ ಯಾಕೆ? ಯಾರ ವಿರುದ್ಧ ಯಾರು ದೂರು ಕೊಡುತ್ತಾರೆ? ಮಾಧ್ಯಮಗಳು ಏನೇನೋ ಮಾತನಾಡೋದಕ್ಕೆ ಹೋಗಬೇಡಿ. ನೀವು ಏಕೆ ತಲೆ ಕೆಡಿಸ್ಕೋತೀರಿ? ಎಂದು ಮಾಧ್ಯಮ ಮಂದಿಗೆ ಪ್ರಶ್ನೆ ಕೇಳಿದರು. ಮುಖ್ಯಮಂತ್ರಿಗಳ ನಾಯಕತ್ವದಲ್ಲಿ ಸರ್ಕಾರ ಸುಭದ್ರವಾಗಿದೆ. ಮಾಧ್ಯಮಗಳು ಸರ್ಕಾರಕ್ಕೆ ಸಹಕರಿಸಿ ನಮ್ಮ ತಪ್ಪಿದರೆ ಅದನ್ನು ಎತ್ತಿ ತೋರಿಸಿ ಎಂದು ಆರ್.ವಿ ಡಿ ಹೇಳಿದರು.
ಜಯಮಾಲಾ ಬಗ್ಗೆ ಕಾಳಜಿ ಮಾಡ್ರೀ..!
ಉಡುಪಿಯಲ್ಲಿ ನಡೆದ ಪ್ರಗತಿ ಪರಿಶೀಲನೆ ಸಭೆಗೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲ ಅವರೇ ಗೈರಾಗಿದ್ದರು. ಉಸ್ತುವಾರಿ ಸಚಿವರ ಅನುಪಸ್ಥಿತಿಯಲ್ಲಿಯೇ ಪ್ರವಾಹ ನಿರ್ವಹಣಾ ಸಭೆ ನಡೆಯಿತು. ಕಂದಾಯ ಸಚಿವರೇ ಜಿಲ್ಲೆಗೆ ಬಂದರೂ ಉಡುಪಿ ಉಸ್ತುವಾರಿ ಸಚಿವರು ಮಾತ್ರ ಗೈರಾಗಿದ್ದರು. ಆದರೆ ಜಯಮಾಲಾ ಗೈರನ್ನು ಸಚಿವ ದೇಶಪಾಂಡೆ ಸಮರ್ಥಿಸಿಕೊಂಡರು. ಜಯಮಾಲಾ ಅವರು ಬೆಂಗಳೂರಿನಲ್ಲಿ 30 ಜಿಲ್ಲಾಧಿಕಾರಿಗಳ ಸಭೆ ಕರೆದಿದ್ದಾರೆ, ಹೀಗಾಗಿ ಗೈರಾಗಿದ್ದಾರೆ, ಹೆಣ್ಣು ಮಕ್ಕಳ ಮೇಲೆ ಸ್ವಲ್ಪ ಕಾಳಜಿ ಮಾಡ್ರೀ ಎಂದು ನಗುತ್ತಲೇ ನುಣುಚಿಕೊಂಡರು.
ಡಿಕೆಶಿ ಕೆಪಿಸಿಸಿ ಸಾರಥಿ..!
ಸಚಿವ ಡಿಕೆ ಶಿವಕುಮಾರ್ ಕಾಂಗ್ರೆಸ್‍ನ ಮುಂದಿನ ಸಾರಥಿ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಡಿ.ಕೆ.ಶಿ ಯಾವಾಗ ಪಕ್ಷದ ಅಧ್ಯಕ್ಷರಾಗುತ್ತಾರೆ ನನಗೆ ಗೊತ್ತಿಲ್ಲ. ಅಧ್ಯಕ್ಷರ ನೇಮಕ ಪಕ್ಷಕ್ಕೆ ಬಿಟ್ಟದ್ದು ಎಂದರು. ಪಕ್ಷ ಮಾಡುವ ತೀರ್ಮಾನಕ್ಕೆ ನಾವು ಬದ್ಧರಿದ್ದೇವೆ ಎಂದು ಹೇಳಿದರು.