ಉಡುಪಿ: ದನದ ಕೊಟ್ಟಿಗೆಯಲ್ಲಿ ಹಾಲು ಕರೆಯುತ್ತಿದ್ದ ವೇಳೆ ಮಣ್ಣಿನ ಗೋಡೆ ಕುಸಿದು ಮೈಮೇಲೆ ಬಿದ್ದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ಉಡುಪಿಯ ಚೇರ್ಕಾಡಿ ಗ್ರಾಮದ ಬೆನಗಲ್ ಎಂಬಲ್ಲಿ ನಡೆದಿದೆ.
ಕೊರಗ ಮರಕಾಲ ಎಂಬವರ ಪತ್ನಿ 52 ವರ್ಷದ ಗಂಗಾ ಮರಕಾಲ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ನಿರಂತರ ಮಳೆಯಿಂದ ಕೊಟ್ಟಿಗೆಯ ಗೋಡೆ ತೊಯ್ದುಹೋಗಿದ್ದು ಕುಸಿದು ಬಿದ್ದಿದೆ. ಈ ವೇಳೆ ದನದ ಹಾಲು ಕರೆಯುತ್ತಿದ್ದ ಗಂಗಾ ಅವರು ಗೋಡೆಯ ಅವಶೇಷಗಳಡಿ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದರು.
ಕೂಡಲೇ ಅವರನ್ನು ಪೇತ್ರಿಯ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಅಷ್ಟರಲ್ಲಿ ಅವರು ಕೊನೆಯುಸಿರೆಳೆದಿದ್ದರು. ಸ್ಥಳಕ್ಕೆ ಉಡುಪಿ ಡಿ.ಸಿ ಹೆಪ್ಸಿಬಾರಾಣಿ ಕೊರ್ಲಪಾಟಿ, ಎಸ್ ಪಿ ನಿಶಾ ಜೇಮ್ಸ್ ಮತ್ತು ಜಿಲ್ಲಾ ಪಂಚಾಯತ್ ಸಿಇಒ ಸಿಂಧೂ ರೂಪೇಶ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಸಾಂತ್ವಾನ ಹೇಳಿದರು.
ಬ್ರಹ್ಮಾವರ ತಹಶೀಲ್ದಾರ್ ಕಿರಣ್ ಗೌರಯ್ಯ ಹಾಗೂ ಗ್ರಾಪಂ ಅಧ್ಯಕ್ಷ ಹರೀಶ್ ಶೆಟ್ಟಿ ಭೇಟಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ವಿವರ ಪಡೆದ ಜಿಲ್ಲಾಧಿಕಾರಿಗಳು ಮೃತರ ಕುಟುಂಬಕ್ಕೆ ಶೀಘ್ರ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ.