– ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್
ಉಡುಪಿ: ಜಿಲ್ಲೆಯಲ್ಲಿ ತುಂತುರು ಮಳೆ ಅವಾಂತರ ಸೃಷ್ಟಿಸಿದೆ. ಅಂಗಡಿಯ ನೇಮ್ ಬೋರ್ಡ್ ನಲ್ಲಿ ಕಾಣಿಸಿಕೊಂಡ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಮೂರು ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಅವಘಢ ಸಂಭವಿಸಿದೆ.
ಉಡುಪಿಯ ಇಂದ್ರಾಳಿ ರೈಲ್ವೇ ಸೇತುವೆ ಬಳಿ ಇರುವ ದ್ವಿಚಕ್ರ ವಾಹನಗಳ ಶೋರೂಂ ಜಯದೇವ ಮೋಟಾರ್ಸ್ ನಲ್ಲಿ ಭಾನುವಾರ ರಾತ್ರಿ 9.45ರ ಸುಮಾರಿಗೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ಶೋರೂಂ ನ ನೇಮ್ ಬೋರ್ಡ್ ನಲ್ಲಿ ಕಾಣಿಸಿಕೊಂಡ ಬೆಂಕಿ, ಮೂರು ಮಹಡಿಗಳ ಕಟ್ಟಡಕ್ಕೆ ಆವರಿಸಿದೆ. ಎರಡನೇ ಮಹಡಿಯಲ್ಲಿ ದ್ವಿಚಕ್ರ ವಾಹನಗಳ ಶೋರೂಂ ಇದೆ. ಶೋರೂಂನಲ್ಲಿದ್ದ ಹೊಸ ವಾಹನಗಳು, ಸರ್ವಿಸ್ ಗೆ ಬಂದಿದ್ದ ಗಾಡಿಗಳೆಲ್ಲ ಸುಟ್ಟಿದೆ. ಈ ಕಟ್ಟಡದ ಪಕ್ಕದಲ್ಲೇ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಸಹ ಇದ್ದು ಸ್ಥಳೀಯರಲ್ಲಿ ಅಪಾಯದ ಭೀತಿ ಎದುರಾಗಿತ್ತು. ಪೆಟ್ರೋಲ್ ಪಂಪ್ ಪಕ್ಕದ ಅಪಾರ್ಟ್ ಮೆಂಟ್ ಜನ ಜೀವ ಕೈಯಲ್ಲಿ ಹಿಡಿದುಕೊಂಡು ರಸ್ತೆಗೆ ಬಂದಿದ್ದಾರೆ.
ಈ ಬಗ್ಗೆ ಸ್ಥಳೀಯ ಸುರೇಂದ್ರನಾಥ ಶೆಟ್ಟಿ ಮಾತನಾಡಿ, ಪೆಟ್ರೋಲ್ ಪಂಪ್ ಗೆ ಬೆಂಕಿ ಬಿದ್ದಿದೆ ಎಂದು ಮೊದಲು ಮಾಹಿತಿ ಬಂತು. ಪಂಪ್ ಹಿಂದಿನ ಅಪಾರ್ಟ್ ಮೆಂಟ್ ನಲ್ಲಿ ನಾವಿರೋದು. ಜೀವ ಕೈಯಲ್ಲಿ ಹಿಡಿದು ಕೆಳಗೆ ಓಡಿದೆವು. ನಗರಸಭೆಯಂತಹ ಕಟ್ಟಡಕ್ಕೆ ಪರವಾನಿಗೆ ಕೊಡುವಾಗ ಸರಿಯಾಗಿ ಪರಿಶೀಲಿಸಬೇಕು ಎಂದರು.
ಶೋರೂಂ ನ ಪಕ್ಕದಲ್ಲೇ ಬಿಡಿಭಾಗಗಳ ವಿಭಾಗ ಇದೆ. ಕೆಳಗೆ ವಾಷಿಂಗ್ ಏರಿಯಾ ಇದೆ. ಕಟ್ಟಡದ ನೆಲ ಅಂತಸ್ತಲ್ಲಿ ಕ್ಲಿನಿಕ್, ಬಟ್ಟೆಯಂಗಡಿಯಿದ್ದು ಅಲ್ಲಿಗೂ ಬೆಂಕಿ ಆವರಿಸಿತ್ತು. ಬಟ್ಟೆಗಳನ್ನು ಅಂಗಡಿ ಮಾಲೀಕರು ಹೊರಗೆ ಸಾಗಿಸಿ ಭಾರೀ ನಷ್ಟವನ್ನು ತಡೆದಿದ್ದಾರೆ. ಟಾಪ್ ಫ್ಲೋರ್ ನಲ್ಲಿ ಇದ್ದ ಜಿಮ್ ಗೂ ಬೆಂಕಿ ಆವರಿಸಿದೆ. ಉಡುಪಿ, ಮಲ್ಪೆ, ಮಣಿಪಾಲ್ ಅಗ್ನಿಶಾಮಕ ದಳ ಸುಮಾರು ಎರಡು ಗಂಟೆ ಹರಸಾಹಸ ಪಟ್ಟು ಬೆಂಕಿ ನಂದಿಸಿದೆ. ಶೋರೂಮಲ್ಲಿ ಟೈಯರ್ ಸೆಕ್ಷನ್ ಇರುವುದರಿಂದ ಬೆಂಕಿ ಅಷ್ಟು ಸುಲಭದಲ್ಲಿ ನಂದಿರಲಿಲ್ಲ.
ಅಗ್ನಿಶಾಮಕ ದಳದ ಅಧಿಕಾರಿ ನಿಜಗುಣಾನಂದ ಮಾತನಾಡಿ, ಘಟನೆ ನಡೆದ ಒಂದು ಗಂಟೆಯಲ್ಲಿ ಬೆಂಕಿ ತಹಬದಿಗೆ ಬಂದಿದೆ. ಎರಡೂವರೆ ಗಂಟೆಗಳ ಕಾಲ ಅಲ್ಲಲ್ಲಿ ಬೆಂಕಿ ಕಾಣಿಸುತ್ತಿತ್ತು. ಶೋರೂಂ ಒಳಗೆ ಟೈಯರ್, ಡೀಸೆಲ್ ಇರೋದ್ರಿಂದ ಬೆಂಕಿ ನಂದಿಸೋದು ಸವಾಲಾಯ್ತು. ಪೆಟ್ರೋಲ್ ಪಂಪ್ ಗೆ ಬೆಂಕಿ ಆವರಿಸದಂತೆ ತಡೆಯುವುದು ನಮ್ಮ ಮೊದಲ ಪ್ರಾಶಸ್ತ್ಯ ಆಗಿತ್ತು ಎಂದು ಹೇಳಿದರು.
ಬೆಂಕಿ ಅವಘಡ ನೋಡಲು ಸಾವಿರಾರು ಜನ ಸ್ಥಳದಲ್ಲಿ ಜಮಾಯಿಸಿದ್ದರು. ಜನರನ್ನು ಚದುರಿಸಲು ಮಣಿಪಾಲ ಪೊಲೀಸರು ಹರ ಸಾಹಸಪಟ್ಟರು. ಹೀರೋ ಮತ್ತು ವೆಸ್ಪಾ ಕಂಪನಿಯ ನೂರಾರು ವಾಹನ ಶೋರೂಮಲ್ಲಿದ್ದವು. ಬೆಂಕಿ ಅವಘಡದಿಂದ ಕೋಟ್ಯಂತರ ರೂಪಾಯಿಯ ವಾಹನಗಳು, ಜಯದೇವ ಮೋಟಾರಿನ ನ ಕಡತಗಳು ನಾಶವಾಗಿರುವ ಸಾಧ್ಯತೆ ಇದೆ. ಒಟ್ಟು ಎಷ್ಟು ನಷ್ಟವಾಗಿದೆ ಎಂದು ಇಂದು ಲೆಕ್ಕಾಚಾರ ನಡೆಯಲಿದೆ.