ಉಡುಪಿ: ನೀವೆಷ್ಟೇ ಊಟ ಮಾಡಿ 20 ರೂ.ಕೊಡಿ ಅಂತಿದ್ದ ಪಬ್ಲಿಕ್ ಹೀರೋ ಅಜ್ಜಮ್ಮ ಇನ್ನಿಲ್ಲ

Public TV
2 Min Read
AJJAMMA 3

ಉಡುಪಿ: ಇಲ್ಲಿನ ಎಂಜಿಎಂ ಕಾಲೇಜು ಮಕ್ಕಳ ಅನ್ನದಾತೆ ಅಜ್ಜಮ್ಮ ಸಾವನ್ನಪ್ಪಿದ್ದಾರೆ. 86 ವರ್ಷ ವಯಸ್ಸಿನ ಅಜ್ಜಮ್ಮ ವಯೋ ಸಹಜ ಆರೋಗ್ಯ ಸಮಸ್ಯೆಯಿಂದ ಮೃತಪಟ್ಟಿದ್ದಾರೆ. ಅಜ್ಜಮ್ಮ ಕೆಫೆಯ ಮೂಲಕ ಎಲ್ಲರಿಗೆ ಆತ್ಮೀಯರಾಗಿದ್ದ ಅವರ ಪ್ರೀತಿ ಇನ್ನಿಲ್ಲವಾಗಿದೆ.

ಉಡುಪಿಯ ಎಂಜಿಎಂ ಕಾಲೇಜು ಸಮೀಪದಲ್ಲಿ ಪುಟ್ಟ ಕ್ಯಾಂಟೀನ್ ಇಟ್ಟು ಕಡಿಮೆ ದರದಲ್ಲಿ ಮಕ್ಕಳಿಗೆ ಊಟ ಕೊಡುತ್ತಿದ್ದ ಅಜ್ಜಮ್ಮ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಎರಡು ವರ್ಷದ ಹಿಂದೆ ಪಬ್ಲಿಕ್ ಟಿವಿಯ `ಪಬ್ಲಿಕ್ ಹೀರೋ’ ಕಾರ್ಯಕ್ರಮದಲ್ಲಿ ಅಜ್ಜಮ್ಮ `ಪಬ್ಲಿಕ್ ಹೀರೋ’ ಆಗಿದ್ದರು. ಇವ್ರಿಗೆ ಎಂಬತ್ತಾರು ವರ್ಷವಾಗಿದ್ದು ಕೊನೆಯ ಕ್ಷಣದವರೆಗೂ ಲವಲವಿಕೆಯಿಂದ ಓಡಾಡುತ್ತಿದ್ದರು. ಉತ್ಸಾಹ ನೋಡಿದ್ರೆ ನಲ್ವತ್ತೋ- ಐವತ್ತೋ ಆಗಿರ್ಬಹುದು ಅಂತ ಎಲ್ಲರೂ ಅಂದುಕೊಂಡಿದ್ದರು. ಕಾಲೇಜಿನ ಮಕ್ಕಳಿಗೆ- ಸ್ಥಳೀಯರಿಗೆ ಇವರು ಪ್ರೀತಿಯ ಅಜ್ಜಿಯಾಗಿದ್ದರು. ದೊಡ್ಡವರಿಗೆ ಅಕ್ಕರೆಯ ಅಮ್ಮನಾಗಿದ್ದರು. ಇಳಿವಯಸ್ಸಿನಲ್ಲೂ ಇವರು ಸ್ವಾವಲಂಬಿ ಜೀವನ ನಡೆಸುತ್ತಿದ್ದರು. ಮಧ್ಯಾಹ್ನದಷ್ಟೊತ್ತಿಗೆ ತಮ್ಮ ಕ್ಯಾಂಟೀನ್‍ನಲ್ಲಿ ತಾವೇ ಅಡುಗೆ ತಯಾರಿಸುತ್ತಿದ್ದರು. ಕಾಲೇಜು ಬಿಟ್ಟ ಕೂಡಲೇ ಮಕ್ಕಳಿಗೆ ಬಿಸಿ-ಬಿಸಿ ಊಟ ಬಡಿಸ್ತಾಯಿದ್ದರು.

AJJAMMA 2

ಊಟಕ್ಕೆ ದೇಶದಲ್ಲೊಂದು ರೇಟ್ ಫಿಕ್ಸಾಗಿದ್ದರೆ ಅಜ್ಜಮ್ಮ ತನ್ನದೇ ಒಂದು ರೇಟಲ್ಲಿ ಫುಲ್ ಮೀಲ್ಸ್ ಕೊಡ್ತಾಯಿದ್ದರು. ನೀವೆಷ್ಟೇ ಊಟ ಮಾಡಿ ಮಕ್ಕಳೇ 20 ರುಪಾಯಿ ಕೊಡಿ ಅಂತ ಹೇಳಿ ಕೆನ್ನೆ ಸವರುತ್ತಿದ್ದರು. ಇದೇ ಅಜ್ಜಮ್ಮನ ಕೆಫೆಯ ಸ್ಪೆಷಾಲಿಟಿಯಾಗಿತ್ತು.

ಲಾಭ ಮಾಡುವ ಉದ್ದೇಶದಿಂದ ಇವರು ಕ್ಯಾಂಟೀನ್ ಇಟ್ಟಿರಲಿಲ್ಲ. ಮಧ್ಯಾಹ್ನ ಮಕ್ಕಳಿಗೆ- ಊರಿಗೆ ಬರುವವರಿಗೆ ರುಚಿಕರ ಊಟ ಕೊಡಬೇಕು ಅನ್ನೋ ಕಾಳಜಿಯಿಂದ ಕ್ಯಾಂಟೀನ್ ತೆರೆದಿದ್ದರು. ಬಾಳೆ ಎಲೆಯಲ್ಲಿ ಉಪ್ಪಿನಕಾಯಿ, ಸಾಂಬಾರು, ರಸಂ, ಪಲ್ಯ, ಹಪ್ಪಳ ಸೇರಿ ಫುಲ್ ಮೀಲ್ಸ್‍ಗೆ ಇಲ್ಲಾಗೋ ಬಿಲ್ ಬರೀ ಇಪ್ಪತ್ತು. ಹೆಚ್ಚು ಲಾಭ ಮಾಡದೆ. ನಷ್ಟವಾಗದಂತೆ ಕ್ಯಾಂಟೀನನ್ನು ಅಜ್ಜಮ್ಮ ನಡೆಸಿಕೊಂಡು ಹೋಗುತ್ತಿದ್ದರು.

ಆಮ್ಲೆಟ್ ಅಜ್ಜಮ್ಮ: ಕಳೆದ 55 ವರ್ಷಗಳಿಂದ ಅಜ್ಜಮ್ಮ ಕ್ಯಾಂಟೀನ್ ನಡೆಸಿಕೊಂಡು ಬಂದಿದ್ದರು. ಅಜ್ಜಮ್ಮನ ಆಮ್ಲೆಟ್ ಅಂದ್ರೆ ವಿದ್ಯಾರ್ಥಿಗಳು ಬಾಯಿ ಚಪ್ಪರಿಸಿಕೊಂಡು ತಿಂತಾರೆ. ಎಂಜಿ ಎಂ ಕಾಲೇಜಿನ ಎದುರುಗಡೆ ಇರುವ ಅಜ್ಜಮ್ಮ ಕೆಫೆಯಲ್ಲಿ ತವಾಕ್ಕೆ ಆಮ್ಲೆಟ್ ಬಿತ್ತು ಅಂದ್ರೆ ಕ್ಲಾಸಲ್ಲಿ ಮಕ್ಕಳ ಬಾಯಲ್ಲಿ ನೀರು ಬರುತ್ತಿತ್ತು. ಬಂದವರಿಗೆ ಅಲ್ಲಿ ಬರೀ ಊಟದ ಜೊತೆ ಅಜ್ಜಿಯ ಪ್ರೀತಿಯೂ ಗಿರಾಕಿಗಳಿಗೆ ಸಿಗುತ್ತಿತ್ತು. ಇದೀಗ ನಾವು ಬರೀ ಅಜ್ಜಮ್ಮನನ್ನು ಕಳೆದುಕೊಂಡದ್ದಲ್ಲ- ಅಜ್ಜಿಯ ಪ್ರೀತಿಯನ್ನು ಕಳೆದುಕೊಂಡಿರುವುದಾಗಿ ಹೇಳುತ್ತಾರೆ ವಿದ್ಯಾರ್ಥಿ ಸುನೀಲ್.

unnamed

ಅಜ್ಜಮ್ಮನ ಬೀಡವೂ ಅಷ್ಟೇ ಸಿಕ್ಕಾಪಟ್ಟೆ ಫೇಮಸ್ಸು. ಹಸಿ ಎಲೆ- ಹೊಗೆಸೊಪ್ಪು- ಖಡಕ್ ಅಡಿಕೆ ಹಾಕಿ ಬೀಡ ಕಟ್ಟುತ್ತಾರೆ. ಈ ಹಿಂದೆ ಸಣ್ಣ ಕ್ಯಾಂಟೀನ್ ಇದ್ದು ಮೂರು ವರ್ಷದ ಹಿಂದೆ ಎಂಜಿಎಂನ ಹಳೇ ವಿದ್ಯಾರ್ಥಿಗಳು ಕ್ಯಾಂಟೀನ್‍ಗೆ ಮಾಡರ್ನ್ ಟಚ್ ಕೊಡಿಸಿದ್ದಾರೆ. ಗ್ಲಾಸ್ ಡೋರ್- ಫ್ಯಾನ್-ಟೈಲ್ಸ್- ಡಿಜಿಟಲ್ ಬೋರ್ಡ್ ಅಳವಡಿಸಿ ಅಜ್ಜಮ್ಮ ಕೆಫೆಯನ್ನು ಮೇಲ್ದರ್ಜೆಗೆ ಏರಿಸಿದ್ದರು. ದೇಹದಿಂದ ಜೀವ ಹೋಗುವ ತನಕ ನಾನು ನನ್ನ ಕಾಲಮೇಲೆಯೇ ನಿಂತಿರಬೇಕು. ಯಾರಿಗೂ ಭಾರವಾಗಬಾರದು. ನನ್ನ ಸಂಪಾದನೆಯನ್ನು ನಾನೇ ಮಾಡಬೇಕು ಅಂತ ಸದಾ ಹೇಳುತ್ತಿದ್ದ ಅಜ್ಜಮ್ಮ ಸಾರ್ಥಕ ಜೀವನವನ್ನು ಮುಗಿಸಿದ್ದಾರೆ. ಸಮಾಜಕ್ಕೆ ಆದರ್ಶಮಯ ಉಡುಪಿಯ ಅಜ್ಜಮ್ಮ.

Share This Article
Leave a Comment

Leave a Reply

Your email address will not be published. Required fields are marked *