ಉಡುಪಿ: ದೇಶಾದ್ಯಂತ ಕೊರೊನಾ ಲಾಕ್‍ಡೌನ್ ಆಗಿದ್ದು ಅಗತ್ಯ ವಸ್ತುಗಳ ಖರೀದಿಗೆ ಬಿಟ್ರೆ ಮತ್ಯಾವುದಕ್ಕೂ ಸರ್ಕಾರ ಅವಕಾಶ ಕೊಡುತ್ತಿಲ್ಲ. ಲಾಕ್‍ಡೌನ್ ಸಂದರ್ಭ ಎನ್‍ಸಿಸಿ ಮತ್ತು ಸೈನ್ಯದ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಒಳಗೆ ವಾಲಿಬಾಲ್ ಮತ್ತು ಕಬಡ್ಡಿ ಆಟ ಆಡುವುದರಲ್ಲಿ ತಲ್ಲೀನರಾಗಿದ್ದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಆದಿ ಉಡುಪಿಯ ಎನ್‍ಸಿಸಿ ಮೈದಾನಕ್ಕೆ ಉಡುಪಿಯ ಪೊಲೀಸರು ಪ್ರವೇಶಿಸಿ, ಕೊರೊನಾ ಲಾಕ್‍ಡೌನ್ ಸಂದರ್ಭದ ನಿಯಮಗಳನ್ನು ಪಾಲಿಸಿ ಎಂದು ತಾಕೀತು ಮಾಡಿದ್ದಾರೆ. ಈ ಸಂದರ್ಭ ಸೈನಿಕರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದೆ. ಕೊರೊನಾ ಲಾಕ್‍ಡೌನ್ ಸಮಯದಲ್ಲಿ ಸರ್ಕಾರದ ನಿಯಮಗಳನ್ನು ನೀವು ಪಾಲಿಸುತ್ತಿಲ್ಲ ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಮಂಜುನಾಥ್ ಸೈನಿಕಾಧಿಕಾರಿಗೆ ತಾಕೀತು ಮಾಡಿದ್ದಾರೆ. ರಾಜ್ಯ ಸರ್ಕಾರ ಅಧಿಕಾರಿಗಳು ಮತ್ತು ಪೊಲೀಸರು ನಮ್ಮ ವ್ಯಾಪ್ತಿಗೆ ಪ್ರವೇಶಿಸಬಾರದು ಎಂದು ಅವರು ಹೇಳಿದ್ದು ಮಾತಿಗೆ ಮಾತು ಬೆಳೆಯಲು ಕಾರಣವಾಯಿತು.
Advertisement
Advertisement
ಲಾಕ್‍ಡೌನ್ ಸಂದರ್ಭದಲ್ಲಿ ನಮಗೊಂದು ನ್ಯಾಯ, ಸೈನಿಕರಿಗೊಂದು ನ್ಯಾಯ ಎಂದು ಪೊಲೀಸರಿಗೆ ಸ್ಥಳೀಯರು ದೂರು ನೀಡಿದ್ದರು. ಪೊಲೀಸರ ಒತ್ತಡಕ್ಕೆ ಮಣಿದ ಸೈನಿಕರು ಲಾಕ್‍ಡೌನ್ ಮುಗಿಯುವ ತನಕ ನಾವು ಗೇಮ್ಸ್ ನಲ್ಲಿ ಪಾಲ್ಗೊಳ್ಳುವುದಿಲ್ಲ ಎಂದರು.