ಉಡುಪಿ: “ನಿಮ್ಮ ಆಚರಣೆ ಆಡಂಬರ ಎಲ್ಲ ಬಂದ್ ಮಾಡಿಬಿಡ್ತೇನೆ” ನಟ ಕಿಶೋರ್ ಅರಣ್ಯ ಅಧಿಕಾರಿಯಾಗಿ ಕಾಂತಾರ ಸಿನಿಮಾದಲ್ಲಿ ಗುಡುಗಿದ ನಂತರ ಚಿತ್ರದ ಕಥಾವಸ್ತು ಹಲವು ತಿರುವು ಪಡೆದುಕೊಳ್ಳುತ್ತದೆ. ಈಗ ಉಡುಪಿ ಜಿಲ್ಲೆಯ ಕಾರ್ಕಳ (Karkala) ತಾಲೂಕಿನ ಮುಂಡ್ಲಿಯಲ್ಲಿ ಸತ್ಯನಾರಾಯಣ ಪೂಜೆ ಮತ್ತು ಯಕ್ಷಗಾನದ (Yakshagana) ಟೆಂಟ್ ಗೆ ಮೂರು ಬಾರಿ ನುಗ್ಗಿದ ಪೊಲೀಸರು ಮಾಡಿದ್ದು ಇದನ್ನೇ ಎಂದು ಶಿರ್ಲಾಲು (Shirlalu) ಗ್ರಾಮಸ್ಥರು ದೂರಿದ್ದಾರೆ.
ಕಾರ್ಕಳ ತಾಲೂಕಿನಲ್ಲಿ ಯಕ್ಷಗಾನ ಮಂಡಳಿಯ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ ವಿಚಾರದಲ್ಲಿ ಹೊಸ ತಿರುವು ಪಡೆದಿದೆ. ಕಾಂಗ್ರೆಸ್ ಬಿಜೆಪಿ ರಾಜಕೀಯ ಜಟಾಪಟಿಗೆ ಕಾರಣವಾಗಿದೆ. ಶಿರ್ಲಾಲು ಪಂಚಾಯತ್ ವ್ಯಾಪ್ತಿಯ ಮುಂಡ್ಲಿಯಲ್ಲಿ ಸಾರ್ವಜನಿಕರು ಸತ್ಯನಾರಾಯಣ ಪೂಜೆಯನ್ನು ಆಯೋಜಿಸಿದ್ದರು. ರಾತ್ರಿ ಲವಕುಶ ಮತ್ತು ಜಾಂಬವತಿ ಕಲ್ಯಾಣ ಎಂಬ ಕಥಾಭಾಗದ ಯಕ್ಷಗಾನ ಆಯೋಜಿಸಲಾಗಿತ್ತು. ಇದಕ್ಕೆ ಸ್ಥಳೀಯ ಕಾಂಗ್ರೆಸ್ ಗ್ರಾಮ ಪಂಚಾಯತ್ ಸದಸ್ಯ ಅಡ್ಡಿಪಡಿಸಿದ್ದಾರೆ ಗ್ರಾಮಸ್ಥರು ದೂರಿದ್ದರು. ನಂತರ ಪೊಲೀಸರು, ಗ್ರಾಮಸ್ಥರು, ಪೂಜಾ ಸಮಿತಿಯ ಭಕ್ತರ ನಡುವೆ ಜಟಾಪಟಿ ಏರ್ಪಟ್ಟಿತ್ತು.
20ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ತಂಡ ಕಳೆದ ಒಂದು ವರ್ಷದಿಂದ ಯಕ್ಷಗಾನದ ಹೆಜ್ಜೆ, ಪ್ರಸಂಗದ ತಯಾರಿಯನ್ನು ಮಾಡಿಕೊಂಡಿದ್ದರು. ಕಾರ್ಯಕ್ರಮಕ್ಕೆ ಪರವಾನಿಗೆ ಪಡೆಯಲು ಹೋದಾಗ ಪಿಡಿಒ ಮೂರು ದಿನ ರಜೆಯಲ್ಲಿದ್ದರು. ಪೊಲೀಸರು ಪಂಚಾಯತ್ ಪರವಾಗಿಗೆ ಇಲ್ಲದೆ ಮೈಕ್ ಹಾಕಲು ನಿರಾಕರಿಸಿದ್ದರು. ಇದರ ಹಿಂದೆ ರಾಜಕೀಯ ಕುತಂತ್ರ ಇದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಮಂಡಳಿಯ ಅಧ್ಯಕ್ಷರು ಸೌಂಡ್ಸ್ ಮಾಲೀಕ ಅಪ್ಪು ಮೇಲೆ ದಾಖಲಿಸಿರುವ ಕೇಸ್ ವಾಪಸ್ ಪಡೆಯದಿದ್ದರೆ ಅಜೆಕಾರು ಪೊಲೀಸ್ ಠಾಣೆಯ ಮುಂದೆ ಯಕ್ಷಗಾನ ಪ್ರದರ್ಶನ ಮತ್ತು ಭಜನೆಯ ಮೂಲಕ ಪ್ರತಿಭಟನೆ ಮಾಡುವುದಾಗಿ ಹಿಂದೂ ಜಾಗರಣ ವೇದಿಕೆ ಈಗ ಎಚ್ಚರಿಕೆ ನೀಡಿದೆ.
ಆದರೆ ಕಾಂಗ್ರೆಸ್ ನಾಯಕ ದೂರು ಕೊಟ್ಟ ಎಂಬ ಕಾರಣಕ್ಕೆ ಎಸ್ಪಿಯೇ ಯಕ್ಷಗಾನ ನಿಲ್ಲಿಸಲು ಪೊಲೀಸರನ್ನು ಕಳುಹಿಸಿದ್ದು ಎಷ್ಟು ಸರಿ ?ಸಾಲದಕ್ಕೆ ಮರುದಿನ ಯಕ್ಷಗಾನ ಆಯೋಜಕರ ಮೇಲೆ ಮೊಕದ್ದಮೆ ದಾಖಲಿಸುವ ಮೂಲಕ ನಿಮ್ಮ ಪೊಲೀಸರು ಎಫ್ ಐಆರ್ ಸರ್ಕಾರ ನಡೆಸಲು ಹೊರಟಿದ್ದಾರಾ ? 4/5
— Sunil Kumar Karkala (@karkalasunil) January 15, 2025
ಈ ಪ್ರಕರಣದ ಬಗ್ಗೆ ಕ್ಷೇತ್ರದ ಶಾಸಕ ಸುನಿಲ್ ಕುಮಾರ್ ಖಂಡನೆ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ರೇಸ್ ನಲ್ಲಿರುವ ಗೃಹ ಸಚಿವ ಜಿ ಪರಮೇಶ್ವರ್ ಗೆ ಕುಟುಕಿದ್ದಾರೆ. ಯಕ್ಷಗಾನದಿಂದ ಕಾನೂನು ಸುವ್ಯವಸ್ಥೆ ಹದಗೆಡುತ್ತದೆಯೇ? ಗೃಹ ಸಚಿವರೇ ನೀವು ಸಭ್ಯ ಸುಸಂಸ್ಕೃತ ಸಚಿವರು ಎಂದು ಭಾವಿಸಿದ್ದೆವು. ಪದೇ ಪದೇ ಪೊಲೀಸ್ ಇಲಾಖೆಯನ್ನು ಅಭಿವ್ಯಕ್ತಿ ಸ್ವಾತಂತ್ರ‍್ಯದ ದಮನಕ್ಕೆ ಬಳಸುತ್ತಿದ್ದೀರಿ. ಎಸ್‌ಪಿ ಅವರು ಪೊಲೀಸರನ್ನು ಕಳುಹಿಸಿ ಯಕ್ಷಗಾನ ನಿಲ್ಲಿಸಿದ್ದಾರೆ. ಆಯೋಜಕರ ಮೇಲೆ ಕೇಸು ದಾಖಲಿಸಿದ್ದೀರಿ. ನೀವು ಎಫ್‌ಐಆರ್ ಸರ್ಕಾರ ನಡೆಸಲು ಹೊರಟಿದ್ದೀರಾ? ಇಂದು ಯಕ್ಷಗಾನ.. ನಾಳೆ ಕೋಲ.. ಕಂಬಳ… ಕರಾವಳಿಯ ಧಾರ್ಮಿಕ ಆಚರಣೆಗಳನ್ನು ನಿಲ್ಲಿಸುತ್ತೀರಾ? ನಿಮಗೆ ಇಲಾಖೆ ಮೇಲೆ ಹಿಡಿತ ಇಲ್ಲವೇ? ಎಂದು ಮಾಜಿ ಸಚಿವ ಶಾಸಕ ಸುನಿಲ್ ಕುಮಾರ್ ಪ್ರಶ್ನೆ ಮಾಡಿದ್ದಾರೆ.
ಯಕ್ಷಗಾನಕ್ಕೆ ಆರಾಧನಾ ಕಲೆಯೆಂದು ಕರಾವಳಿಯಲ್ಲಿ ಮಾನ್ಯತೆಯಿದೆ. ಪರವಾನಿಗೆ ನೆಪದಲ್ಲಿ ಗ್ರಾಮಸ್ಥರನ್ನು ಒಡೆದು ಆಳುವುದು. ಕೆಟ್ಟ ರಾಜಕೀಯ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ ಅಲ್ಲ.