Bengaluru CityDistrictsKarnatakaLatestMain Post

ಸಕಲ ಸಂತ ಸಮುದಾಯಕ್ಕೆ ಸಿಕ್ಕ ಪದ್ಮ ವಿಭೂಷಣ: ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

ಉಡುಪಿ: ಉಡುಪಿ ಪೇಜಾವರ ಮಠಾಧೀಶ ವಿಶ್ವೇಶ ತೀರ್ಥ ಸ್ವಾಮೀಜಿಗೆ ಮರಣೋತ್ತರ ಪದ್ಮ ವಿಭೂಷಣ ಪ್ರಶಸ್ತಿ ಪ್ರಕಟವಾಗಿದ್ದು, ಇದು ಸಕಲ ಸಂತ ಸಮುದಾಯಕ್ಕೆ ಸಿಕ್ಕ ಮನ್ನಣೆ, ಗೌರವ ಅಂತ ಪೇಜಾವರ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಬಣ್ಣಿಸಿದ್ದಾರೆ.

ಪ್ರಶಸ್ತಿ ಘೋಷಣೆಯಾದ ಹಿನ್ನೆಲೆಯಲ್ಲಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥರು ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ್ದು, ಗುರುಗಳಿಗೆ ಪ್ರಶಸ್ತಿ ಬಂದ ವಿಚಾರ ಕೇಳಿ ಸಂತೋಷವಾಗಿದೆ. ಗುರುಗಳು ಯಾವುದೇ ಬಗೆಯ ವಿಭೂಷಣವನ್ನು ಬದುಕಿನಲ್ಲಿ ಧರಿಸಿದವರಲ್ಲ. ಆದರೆ ಸರ್ಕಾರ ಇಂದು ವಿಭೂಷಣವನ್ನು ಸಮರ್ಪಿಸಿದೆ. ನಮಗೆ ತುಂಬಾ ಸಂತೋಷವಾಗಿದೆ ಎಂದು ಹೇಳಿದರು.

ಗುರುಗಳ ಜೀವಿತಾವಧಿಯಲ್ಲೇ ಈ ಸುಯೋಗ ಬಂದಿದ್ದರೆ ಮತ್ತಷ್ಟು ಸಂತೋಷ ಆಗುತ್ತಿತ್ತು. ಶ್ರೀ ಮಠ ಈ ಪ್ರಶಸ್ತಿಯನ್ನು ಸ್ವಾಗತಿಸುತ್ತದೆ. ಇದು ಸಂತ ಸಮಾಜಕ್ಕೆ ದೊರಕಿದ ಗೌರವ. ಈ ಪುರಸ್ಕಾರ ಸಂತ ಸಮಾಜದ ಜವಾಬ್ದಾರಿ ಹೆಚ್ಚಿಸಿದೆ ಎಂದರು.

ಪ್ರಶಸ್ತಿ ಘೋಷಣೆಯಾಗುವಾಗ ಪೇಜಾವರ ಶ್ರೀಗಳು ಮುಳುಬಾಗಿಲಿನಲ್ಲಿ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಸಭೆಯಲ್ಲಿದ್ದ ನೂರಾರು ಜನ ಜಯಘೋಷ ಕೂಗಿದರು.

ಗಣತಂತ್ರದ ಮುನ್ನಾ ದಿನವಾದ ಶನಿವಾರ ಪದ್ಮ ಪ್ರಶಸ್ತಿ ಪುರಸ್ಕೃತರ ಪಟ್ಟಿ ಪ್ರಕಟವಾಗಿದ್ದು, ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್, ಜಾರ್ಜ್ ಫರ್ನಾಂಡೀಸ್ ಮತ್ತು ಇತ್ತೀಚಿಗಷ್ಟೇ ಕೃಷ್ಣೈಕ್ಯರಾದ ಪೇಜಾವರ ಶ್ರೀಗಳಿಗೆ ಎರಡನೇ ಅತ್ಯುಚ್ಛ ಪುರಸ್ಕಾರ ಪದ್ಮವಿಭೂಷಣ (ಮರಣೋತ್ತರ) ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಬಾಕ್ಸಿಂಗ್ ತಾರೆ ಮೇರಿಕೂಮ್‍ಗೂ ಪದ್ಮವಿಭೂಷಣ ಪ್ರಶಸ್ತಿ ಪ್ರಕಟವಾಗಿದೆ. ಗೋವಾದ ಮಾಜಿ ಮುಖ್ಯಮಂತ್ರಿ, ಮಾಜಿ ರಕ್ಷಣಾ ಸಚಿವರಾಗಿದ್ದ ಮನೋಹರ್ ಪರಿಕ್ಕರ್, ಪಿವಿ ಸಿಂಧೂಗೆ ಪದ್ಮಭೂಷಣ ಘೋಷಣೆಯಾಗಿದೆ.

ಪಬ್ಲಿಕ್ ಟಿವಿಯ `ಪಬ್ಲಿಕ್ ಹೀರೋ’ ಆಗಿದ್ದ ಉತ್ತರ ಕನ್ನಡ ಜಿಲ್ಲೆ ಆಂಕೋಲ ತಾಲೂಕಿನ ಹೊನ್ನಳ್ಳಿಯ ಅರಣ್ಯ ಪ್ರೇಮಿ ಹಾಲಕ್ಕಿ ಸಮುದಾಯದ ತುಳಸಿ ಗೌಡ, ಅಕ್ಷರ ಸಂತ ದಕ್ಷಿಣ ಕನ್ನಡದ ಅಕ್ಷರ ಸಂತ, ಕಿತ್ತಳೆ ಹಣ್ಣು ಮಾರಿ ಹರೇಕಳದ ನ್ಯೂಪಡ್ಪು ಗ್ರಾಮದಲ್ಲಿ ಶಾಲೆ ಕಟ್ಟಿಸಿದ ಹಾಜಬ್ಬ, ವಿಜಯ ಸಂಕೇಶ್ವರ್, ಕೆ ವಿ ಸಂಪತ್ ಕುಮಾರ್, ಕ್ರೀಡಾಪಟು ಎಂಪಿ ಗಣೇಶ್ ಸೇರಿ 118 ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿ ಪ್ರಕಟಿಸಲಾಗಿದೆ.

Leave a Reply

Your email address will not be published.

Back to top button