– ಶ್ರೀಗಳ ಶೀಘ್ರ ಗುಣಮುಖಕ್ಕೆ ಪೂಜೆ, ಪುನಸ್ಕಾರ
ಉಡುಪಿ: ವಿಶ್ವಸಂತ ಶ್ರೀ ಪೇಜಾವರ ತೀರ್ಥರ ಆರೋಗ್ಯ ಪರಿಸ್ಥಿತಿಯಲ್ಲಿ ಸ್ವಲ್ಪ ಚೇತರಿಕೆ ಕಂಡುಬಂದಿದೆ. ಆಸ್ಪತ್ರೆಗೆ ಭೇಟಿ ನೀಡುವ ಗಣ್ಯರ ಸಂಖ್ಯೆ ಹೆಚ್ಚುತ್ತಲೇ ಇದೆ. ಸ್ವಾಮೀಜಿಯ ಚೇತರಿಕೆ ಕೋರಿ ರಾಜ್ಯದ ಹಲವೆಡೆ ಪೂಜೆ, ಪುನಸ್ಕಾರ, ಹೋಮ-ಹವನಗಳು ನಡೆಯುತ್ತಿವೆ.
Advertisement
ಹೌದು. ಉಸಿರಾಟದ ತೊಂದರೆಯಿಂದ ಶುಕ್ರವಾರ ಮುಂಜಾನೆ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಾಗಿರುವ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಸ್ವಾಮೀಜಿಗಳ ಆರೋಗ್ಯ ಸ್ಥಿತಿ ಕೊಂಚಮಟ್ಟಿಗೆ ಸುಧಾರಿಸಿದೆ. ತಜ್ಞ ವೈದ್ಯರ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ವೆಂಟಿಲೇಟರ್ ನಲ್ಲಿ ಶ್ರೀಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆದರೂ ಶ್ರೀಗಳ ಆರೋಗ್ಯ ಸ್ಥಿತಿ ಸ್ವಲ್ಪ ಗಂಭಿರವಾಗಿಯೇ ಇದೆ ಎಂದು ಆಸ್ಪತ್ರೆ ಹೆಲ್ತ್ ಬುಲೆಟಿನ್‍ನಲ್ಲಿ ತಿಳಿಸಲಾಗಿದೆ. ಶ್ರೀಗಳು ಆದಷ್ಟು ಬೇಗ ಗುಣಮುಖರಾಗಲಿದ್ದು, ಯಾವುದೇ ಆತಂಕ ಬೇಡ. ದೂರದಿಂದಲೇ ಪ್ರಾರ್ಥನೆ ಮಾಡಿ ಎಂದು ಪೇಜಾವರ ಮಠದ ಕಿರಿಯ ಶ್ರೀಗಳು ಭಕ್ತರಲ್ಲಿ ಮನವಿ ಮಾಡಿದ್ದಾರೆ.
Advertisement
Advertisement
ಶ್ರೀಗಳ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ಗಣ್ಯರ ದಂಡೇ ಹರಿದುಬರುತ್ತಿದೆ. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಆಸ್ಪತ್ರೆಗೆ ಕರೆ ಮಾಡಿದ್ದರು. ಯಾವುದೇ ತುರ್ತು ನೆರವು ಅಗತ್ಯವಿದ್ದಲ್ಲಿ ತಿಳಿಸುವಂತೆ ಸೂಚನೆ ನೀಡಿದ್ದರು. ಸಿಎಂ ಯಡಿಯೂರಪ್ಪ, ಸಚಿವರಾದ ಬಸವರಾಜ ಬೊಮ್ಮಾಯಿ ಈಶ್ವರಪ್ಪ, ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ಉತ್ತರಾಧಿ ಮಠದ ಸತ್ಯಾರ್ಥ ಸ್ವಾಮೀಜೀ, ಉದ್ಯಮಿ ನೀರಾ ರಾಡಿಯಾ ಸೇರಿ ಹಲವರು ಭೇಟಿ ಮಾಡಿ ಶ್ರೀಗಳ ಆರೋಗ್ಯ ವಿಚಾರಿಸಿದ್ದಾರೆ. ಶ್ರೀಗಳ ಆರೋಗ್ಯ ವಿಚಾರಿಸಿದ ಬಳಿಕ ಸಿಎಂ ಯಡಿಯೂರಪ್ಪ, ಪೇಜಾವರ ಶ್ರೀಗಳು ಕಣ್ಣು ಬಿಡುತ್ತಿದ್ದಾರೆ. ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದೆ. ಸೋಂಕು ತಗುಲದಂತೆ ವೈದ್ಯರು ಕಟ್ಟೆಚ್ಚರ ವಹಿಸಿದ್ದಾರೆ ಎಂದರು. ವೀರೇಂದ್ರ ಹೆಗ್ಗಡೆ ಮಾತನಾಡಿ, ಸ್ವಾಮೀಜಿ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಅಂತ ಹೇಳಿದ್ದಾರೆ.
Advertisement
ಗಣ್ಯರ ಭೇಟಿ ಸಂಖ್ಯೆ ಹೆಚ್ಚಳ ಆಗಿರುವುದರಿಂದ ಆಸ್ಪತ್ರೆಗೆ ಬಿಗಿ ಭದ್ರತೆ ಕಲ್ಪಿಸಲಾಗಿದೆ. ವಿಶ್ವಸಂತನ ಶೀಘ್ರ ಚೇತರಿಕೆಗೆ ಕೋರಿ ಧಾರವಾಡ ದತ್ತ ಮಂದಿರದಲ್ಲಿ ಸ್ಥಳೀಯರು ವಿಶೇಷ ಪೂಜೆ ನಡೆಸಿದ್ದಾರೆ.