ಉಡುಪಿ: ಮಕ್ಕಳಲ್ಲಿ ತುಳು ಸಂಸ್ಕತಿ ಬೆಳೆಸಬೇಕು. ತುಳು ಶಿವಳ್ಳಿ ಬ್ರಾಹ್ಮಣ ಭಾಷೆಯನ್ನು ಮಕ್ಕಳು ಮಾತನಾಡಿದರೆ ಮಾತ್ರ ಭಾಷೆ ಉಳಿಯಲು ಸಾಧ್ಯ ಎಂದು ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಶ್ರೀ ಕರೆ ಕೊಟ್ಟಿದ್ದಾರೆ.
ಉಡುಪಿಯಲ್ಲಿ ನಡೆಯುತ್ತುರುವ ತುಳು ಶಿವಳ್ಳಿ ಬ್ರಾಹ್ಮಣರ ಪ್ರಥಮ ವಿಶ್ವ ಸಮ್ಮೇಳನದಲ್ಲಿ ಮಾತನಾಡಿದ ಶ್ರೀಗಳು, ಮಧ್ವಾಚಾರ್ಯರು ತೌಳವರಾಗಿರುವುದು ನಮ್ಮ ಹೆಮ್ಮೆ. ಆಚಾರ ವಿಚಾರ, ದಾನ, ಸಂಪ್ರದಾಯ, ಧರ್ಮಪಾಲನೆ ಮೋಕ್ಷಕ್ಕೆ ಸಾಧನ ಎಂದು ಈ ಸಂದರ್ಭದಲ್ಲಿ ಹೇಳಿದರು.
ಕಾರ್ಯಕ್ರಮದ ರೂವಾರಿ ಪರ್ಯಾಯ ಪಲಿಮಾರು ಸ್ವಾಮೀಜಿ ಮಾತನಾಡಿ, ತುಳು ಶಿವಳ್ಳಿ ಬ್ರಾಹ್ಮಣ ಸಮಾಜದಲ್ಲಿ ಒಗ್ಗಟ್ಟಿನ ಸಮಸ್ಯೆಯಿದೆ. ಸಮಾಜದಲ್ಲಿ ಮಾಧ್ವ ಸಂಪ್ರದಾಯದ ಅರಿವಿನ ಕೊರತೆಯಿದೆ. ಈ ಕೆಲಸ ಆಗಬೇಕಿದೆ. ರಾಜಕೀಯ ಶಕ್ತಿಯನ್ನು ಕೂಡ ನಮ್ಮ ಸಮಾಜ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಮೂರು ದಿನಗಳ ಕಾಲ ನಡೆಯುವ ವಿಶ್ವ ತುಳು ಶಿವಳ್ಳಿ ಬ್ರಾಹ್ಮಣರ ಪ್ರಥಮ ಸಮ್ಮೇಳನ ಶನಿವಾರ ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಉದ್ಘಾಟನೆಗೊಂಡಿತು. ತುಳು ಶಿವಳ್ಳಿ ಬ್ರಾಹ್ಮಣರ ಸಮ್ಮೇಳನವನ್ನು ಪಲಿಮಾರು ಪರ್ಯಾಯ ಮಠಾಧೀಶ ವಿದ್ಯಾಧೀಶ ತೀರ್ಥ ಶ್ರೀಪಾದರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಸಮಾರಂಭದಲ್ಲಿ ಕೃಷ್ಣಾಪುರ ಮಠಾಧೀಶ ವಿದ್ಯಾಸಾಗರ ತೀರ್ಥ ಶ್ರೀ, ಪೇಜಾವರ ಮಠದ ಕಿರಿಯ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು, ಸುಬ್ರಹ್ಮಣ್ಯ ಮಠದ ವಿದ್ಯಾ ಪ್ರಸನ್ನ ತೀರ್ಥ ಶ್ರೀಪಾದರು, ಪಲಿಮಾರು ಮಠದ ಕಿರಿಯ ಶ್ರೀ ವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರು, ಸಮ್ಮೇಳನದ ಪ್ರಧಾನ ಸಂಚಾಲಕ ಎಂ.ಬಿ ಪುರಾಣಿಕ್ ಮುಂತಾದವರು ಉಪಸ್ಥಿತರಿದ್ದರು.