ವಿಷ್ಣು ದಶಾವತಾರ, ಹನುಮಾನ್ ನಮಸ್ಕಾರದ ಮೂಲಕ ಪೇಜಾವರ ಶ್ರೀಗಳಿಗೆ ಯೋಗ ನಮನ

Public TV
2 Min Read
UDP D

ಉಡುಪಿ: ಪೇಜಾವರ ಶ್ರೀಗಳು ಕೊನೆಯ ದಿನಗಳಲ್ಲಿ ಪಾದರಸದಂತೆ ಓಡಾಡಿದ ಯತಿಶ್ರೇಷ್ಠರು. ವಯಸ್ಸು 89 ಆದರೂ ಅವರ ಮನಸ್ಸು 29ರ ಯುವಕನಂತಿತ್ತು. ದಿನವೊಂದಕ್ಕೆ ಒಂದೂವರೆ ಸಾವಿರ ಕಿಲೋ ಮೀಟರ್ ಪ್ರಯಾಣಿಸಿದರೂ ದಣಿಯದ ದೇಹ. ಶ್ರೀಗಳು ಛಾಪು ಮೂಡಿಸದ ಕ್ಷೇತ್ರವಿಲ್ಲ. ಇಷ್ಟೆಲ್ಲದಕ್ಕೆ ಕಾರಣ ಅವರ ನಿರಂತರ ಯೋಗ. ವೃಂದಾವನಸ್ಥ ಶ್ರೀಗಳಿಗೆ ಉಡುಪಿಯಲ್ಲಿ ಕಠಿಣ ಯೋಗದ ಮೂಲಕವೇ ನಮನ ಅರ್ಪಿಸಲಾಯಿತು.

ವೃಂದಾವನಸ್ಥರಾದ ಪೇಜಾವರ ಶ್ರೀಗಳನ್ನು ಸನ್ಯಾಸಿ ಅಂತ ತಗೊಂಡರೆ ಸನ್ಯಾಸಿ. ಸಾಮಾಜಿಕ ಕ್ರಾಂತಿಕಾರಿ ಅಂತ ನೋಡಿದರೆ ಅದಕ್ಕೂ ಸಲ್ಲುತ್ತಾರೆ. ರಾಜಕೀಯ ನಾಯಕರಿಗೆ ರಾಜಗುರು. ಪೇಜಾವರ ಶ್ರೀಗಳು ಪರಿಸರ ಕಾಳಜಿಯನ್ನೂ ಹೊಂದಿದ್ದರು. ಶ್ರೀಗಳ ಬಹುಮುಖಿ ವ್ಯಕ್ತಿತ್ವಕ್ಕೆ ಕಾರಣ ಅವರು ಪ್ರಾತಃಕಾಲ 4ಗಂಟೆಗೆ ಎದ್ದು ಅಭ್ಯಾಸ ಮಾಡುತ್ತಿದ್ದ ಯೋಗಾಸನ.

UDP A 1

ಯೋಗಪಟುವಾಗಿದ್ದ ಪೇಜಾವರ ಶ್ರೀಗಳಿಗೆ ಉಡುಪಿಯಲ್ಲಿ ವಿಭಿನ್ನ ರೀತಿಯ ಯೋಗ ನುಡಿನಮನ ನಡೆಯಿತು. ಕೃಷ್ಣಮಠದ ರಾಜಾಂಗಣದಲ್ಲಿ ವೈಕುಂಠ ಏಕಾದಶಿ ಸಂದರ್ಭ ಕಠಿಣ ವಿಷ್ಣು ದಶಾವತಾರ ಯೋಗ ಮತ್ತು ಹನುಮಾನ್ ನಮಸ್ಕಾರ ಆಸನಗಳನ್ನು ಪ್ರದರ್ಶನ ಮಾಡಲಾಯಿತು. ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ನೂರಾರು ಸದಸ್ಯರು ಯೋಗ ನಮನ ಸಲ್ಲಿಸಿದರು. ವಿಷ್ಣುವಿನ ಮತ್ಸ್ಯ, ಕೂರ್ಮ, ನರಸಿಂಹ ಅವತಾರಗಳನ್ನು ಯೋಗಾಸನ ಭಂಗಿಯ ಮೂಲಕ ಮಾಡಿ ಹರಿಪಾದ ಸೇರಿದ ವಿಶ್ವೇಶತೀರ್ಥ ಸ್ವಾಮೀಜಿಗಳಿಗೆ ಗೌರವ ಅರ್ಪಣೆ ಮಾಡಲಾಯಿತು.

ವಿಶ್ವಾದ್ಯಂತ ಸಪ್ತ ನಮಸ್ಕಾರದಲ್ಲಿ ಸೂರ್ಯ ನಮಸ್ಕಾರ ಮಾತ್ರ ಪ್ರಸಿದ್ಧಿ ಪಡೆದಿದೆ. ಶಿವ ನಮಸ್ಕಾರ, ಗಣಪತಿ ನಮಸ್ಕಾರ, ಹಿಮಾಲಯ ಗಣಪತಿ ನಮಸ್ಕಾರ, ದುರ್ಗಾ ನಮಸ್ಕಾರಗಳೆಂಬ ನಾಲ್ಕು ನಮಸ್ಕಾರ ಬಹಳ ಕಠಿಣ ಆಸನಗಳಿವೆ. ಶ್ರೀ ಪತಂಜಲಿ ಯೋಗ ಸಮಿತಿ, ತಜ್ಞರಯ, ವೈದ್ಯರು ಸಮಾಲೋಚನೆ ಮಾಡಿ ಉಡುಪಿಯಲ್ಲಿ ಕಷ್ಟಕರ ಆಸನ ಪ್ರದರ್ಶಿಸಲಾಯಿತು. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ನೂರಾರು ಯೋಗಪಟುಗಳು ಪಾಲ್ಗೊಂಡರು. ಪೇಜಾವರಶ್ರೀ ಗಳೇ 15 ವರ್ಷಗಳ ಹಿಂದೆ ಎಸ್‍ಪಿವೈಎಸ್‍ಎಸ್ ಸಂಘಟನೆಯ ಯೋಗವನ್ನು ಆಶೀರ್ವದಿಸಿದ್ದರಂತೆ. ಪರ್ಯಾಯ ಸಂದರ್ಭದಲ್ಲಿ ಯೋಗಾಭ್ಯಾಸದಲ್ಲೂ ತೊಡಗಿಸಿಕೊಂಡಿದ್ದರಿಂದ ವೃಂದಾವನಸ್ಥರಾದ ಪೇಜಾವರ ಶ್ರೀಗಳಿಗೆ ಯೋಗನಮನ ಸಲ್ಲಿಸಲಾಯಿತು.

UDP B

ಸಂಘಟಕಿ ಭವಾನಿ ಮಾತನಾಡಿ, ಪೇಜಾವರ ಶ್ರೀಗಳ ಜೊತೆ ನಮ್ಮ ಸಂಸ್ಥ 15 ವರ್ಷದಿಂದ ಸಂಪರ್ಕದಲ್ಲಿದೆ. ನಮ್ಮ ಯೋಗ ತರಗತಿಗಳಿಗೆ ಆಶೀರ್ವಾದ ನೀಡಿ, ಪ್ರೋತ್ಸಾಹಿಸಿದ್ದಾರೆ. ಅವರಿಗೆ ನಾವು ಮಾಡುತ್ತಿರುವ ದೊಡ್ಡ ನುಡಿನಮನ ಅಂದರೆ ಯೋಗಾಭ್ಯಾಸ ಎಂದರು.

ವಿಭಾಗ ಮುಖ್ಯಸ್ಥ ಅಣ್ಣಾ ಲಕ್ಷ್ಮೀನಾರಾಯಣ ಮಾತನಾಡಿ, ಬಹಳ ಕಠಿಣ ಯೋಗದ ಪ್ರದರ್ಶನ ಇದು. ನಮ್ಮ ಸಮಿತಿಯೇ ಕಂಡುಕೊಂಡ ಭಂಗಿಗಳು ಇವು. ದೇವರು ಧ್ಯಾನ, ದೇಹ ದಂಡನೆ ಮೂಲಕ ಆರೋಗ್ಯ ಕಾಪಾಡುವ ವಿಧಾನ ಇದು. ಶ್ರೀಗಳು ಕೊನೆಯವರೆಗೂ ಯೋಗಾಭ್ಯಾಸ ಮಾಡಿದ್ದರಿಂದ ಚುರುಕಾಗಿ ಓಡಾಡುತ್ತಿದ್ದರು ಎಂದು ಹೇಳಿದರು.

ಯೋಗ ಪಟುಗಳು ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾಂಜಲಿ, ದೀಪನಮನವನ್ನೂ ಸಲ್ಲಿಸಿದರು. ಉಚಿತ ಯೋಗ ಶಿಕ್ಷಣ ನೀಡಿ, ಯೋಗ ಶಿಕ್ಷಕರನ್ನು ಹುಟ್ಟುಹಾಕುತ್ತಿರುವ ಈ ಸಂಸ್ಥೆ ಸಂಸ್ಕಾರ ,ಸಂಸ್ಕೃತಿ ಜೊತೆ ಉದ್ಯೋಗವನ್ನು ನೀಡುತ್ತಿದೆ.

UDP 8

Share This Article
Leave a Comment

Leave a Reply

Your email address will not be published. Required fields are marked *