ಉಡುಪಿ: ಮರಳು ಮಾಫಿಯಾ ಗ್ಯಾಂಗ್ ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಅವರ ಕೊಲೆಗೆ ಯತ್ನ ನಡೆಸಿದ್ದಾರೆ.
ಕುಂದಾಪುರ ತಾಲೂಕಿನ ಕಂಡ್ಲೂರು ಗ್ರಾಮದಲ್ಲಿ ರಾತ್ರೋ ರಾತ್ರಿ ಭಾರೀ ಮರಳು ಕಳ್ಳಸಾಗಣೆ ನಡೆಯುತ್ತಿದೆ ಎಂಬ ಮಾಹಿತಿ ಜಿಲ್ಲಾಧಿಕಾರಿಗಳಿಗೆ ಸಿಕ್ಕಿತ್ತು. ರಾತ್ರಿ 10 ಗಂಟೆ ಸುಮಾರಿಗೆ ಕಾರ್ಯಾಚರಣೆಗೆ ಹೊರಟ ಜಿಲ್ಲಾಧಿಕಾರಿ ಪ್ರಿಯಾಂಕ, ತಮ್ಮ ಗನ್ ಮ್ಯಾನ್ ಜೊತೆ ಜಿಲ್ಲಾ ಪಂಚಾಯತ್‍ನ ಕಾರನ್ನು ತೆಗೆದುಕೊಂಡು ತೆರಳಿದ್ದರು. ಅಕ್ರಮ ಮರಳುಗಾರಿಕೆ ದಾಳಿಗೆ ಕುಂದಾಪುರ ಎಸಿ ಶಿಲ್ಪಾ ನಾಗ್, ಸ್ಥಳೀಯ ಅಂಪಾರು ಗ್ರಾಮದ ಲೆಕ್ಕಾಧಿಕಾರಿ ಜೊತೆಯಾಗಿ ತೆರಳಿದ್ದರು. ಅಕ್ರಮ ನಡೆಯುತ್ತಿದ್ದ ಸ್ಥಳಕ್ಕೆ ತೆರಳಿ ಮರಳು ಕದಿಯುತ್ತಿದ್ದ ಕಳ್ಳರನ್ನು ಬಂಧಿಸಲು ಯತ್ನಿಸಿದಾಗ ಸ್ಥಳದಲ್ಲಿದ್ದ ಸುಮಾರು 40 ಜನ ಒಟ್ಟಾಗಿದ್ದಾರೆ. ಜಿಲ್ಲಾಧಿಕಾರಿ ಹಾಗೂ ಎಸಿಯವರನ್ನು ಸುತ್ತುವರೆದಿದ್ದಾರೆ. ಈ ಸಂದರ್ಭ ಮಾತಿನ ಚಕಮಕಿ ನಡೆದಿದೆ.
Advertisement
Advertisement
ಮರಳುಗಾರಿಕೆ ನಡೆಸಲು ಯತ್ನಿಸುತ್ತಿದ್ದವರು ಸ್ಥಳೀಯ ಮನೆಗಳಲ್ಲಿ ತಲೆಮರೆಸಿಕೊಳ್ಳಲು ಯತ್ನಿಸಿದ್ದಾರೆ. ಅವರನ್ನು ಬೆನ್ನತ್ತಿದ ಜಿಲ್ಲಾಧಿಕಾರಿ ಹಾಗು ಗನ್‍ಮ್ಯಾನ್ ಮೇಲೆ ಹಲ್ಲೆ ನಡೆದಿದೆ. ಮನೆಯೊಳಗೆ ಜಿಲ್ಲಾಧಿಕಾರಿ ಮತ್ತು ಎಸಿ ಹೋಗಿದ್ದಾಗ ಅವರನ್ನ ಕೂಡಿಹಾಕಿ ಸ್ಥಳೀಯ ಮಹಿಳೆಯರು ಹಲ್ಲೆಗೆ ಯತ್ನ ಮಾಡಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿದ ಮರಳು ಕಳ್ಳರು, ಈ ಕಡೆ ಬಂದ್ರೆ ಕೊಂದು ಮುಗಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
Advertisement
Advertisement
ಇಬ್ಬರು ಮಹಿಳಾ ಅಧಿಕಾರಿಗಳು, ಗನ್ ಮ್ಯಾನ್, ಗ್ರಾಮ ಲೆಕ್ಕಾಧಿಕಾರಿ ಹಾಗೂ ವಾಹನ ಚಾಲಕರು ತಪ್ಪಿಸಿಕೊಂಡು ಬಂದಿದ್ದಾರೆ. ಈ ಸಂದರ್ಭ ಸ್ಥಳೀಯರು ಅಂಪಾರು ಗ್ರಾಮ ಲೆಕ್ಕಾಧಿಕಾರಿ ಕಾಂತರಾಜುಗೆ ಥಳಿಸಿದ್ದಾರೆ. ಕಾರನ್ನು ಬೆನ್ನತ್ತಿ ಪೆಟ್ರೋಲ್ ಹಾಕಿ ಸುಡಲು ಪ್ರಯತ್ನಿಸಿದ್ದಾರೆ. ಸುಮಾರು 20 ಬೈಕ್‍ಗಳಲ್ಲಿ ದುಷ್ಕರ್ಮಿಗಳು ಕುಂದಾಪುರ ಸಿಟಿಯವರೆಗೆ ಬೆನ್ನತ್ತಿದ್ದಾರೆ.
ಉಡುಪಿ ನಗರ ಠಾಣೆಗೆ ಬಂದ ಜಿಲ್ಲಾಧಿಕಾರಿಗಳು ಮತ್ತು ಎಸಿ, ಕೊಲೆ ಯತ್ನ, ಕರ್ತವ್ಯಕ್ಕೆ ಅಡ್ಡಿ, ಅವಾಚ್ಯ ಶಬ್ದಗಳಿಂದ ನಿಂದನೆ, ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ- ಈ ಎಲ್ಲಾ ಆರೋಪದ ಮೇಲೆ ದುಷ್ಕರ್ಮಿಗಳ ವಿರುದ್ಧ ದೂರು ನೀಡಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆಯಾಗುವವರೆಗೆ ಸುಮ್ಮನಿರುವುದಿಲ್ಲ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಗುಡುಗಿದ್ದಾರೆ.