ಉಡುಪಿ: ಬೈಂದೂರು ಕ್ಷೇತ್ರದ ವ್ಯಾಪ್ತಿಯಲ್ಲಿ ಗಾಂಜಾ ಬೆಳೆ, ಮಟ್ಕಾ ದಂಧೆ ಜಾಸ್ತಿಯಾಗುತ್ತಿದೆ ಎಂದು ಬಿಜೆಪಿ ಶಾಸಕ ಸುಕುಮಾರ ಶೆಟ್ಟಿ ಹೇಳಿದ್ದಾರೆ.
ಕುಂದಾಪುರದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡಿರುವ ಶಾಸಕರು, ಎರಡು ಅಕ್ರಮ ನಿಲ್ಲಿಸಬೇಕು ಎಂದು ಅಸಹಾಯಕತೆ ತೋಡಿಕೊಂಡು ಅಧಿಕಾರಿಗಳ ವಿರುದ್ಧ ಗರಂ ಆಗಿದ್ದಾರೆ.
ಬೈಂದೂರು ಠಾಣಾ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಮಟ್ಕಾ ದಂಧೆ ಸಂಪೂರ್ಣವಾಗಿ ನಿಲ್ಲಿಸಬೇಕು. ಈ ವಿಚಾರವಾಗಿ ಡಿವೈಎಸ್‍ಪಿ ಮತ್ತು ಜಿಲ್ಲಾ ಎಸ್‍ಪಿ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಅಲ್ಲದೆ ಪಶ್ಚಿಮ ಘಟ್ಟ ಭಾಗದ ಅರಣ್ಯ ಪ್ರದೇಶದಲ್ಲಿ ಗಾಂಜಾ ಬೆಳೆಯುತ್ತಿರುವ ಬಗ್ಗೆ ನಮಗೆ ಖಚಿತ ಮಾಹಿತಿ ಇದೆ. ಕೂಡಲೇ ಅದನ್ನು ಪತ್ತೆ ಹಚ್ಚಿ ನಾಶ ಮಾಡುವ ಕೆಲಸ ಮಾಡಿ ಎಂದು ಪೊಲೀಸ್ ಇಲಾಖೆ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದರು.
ನಮಗೆ ಆ ಬಗ್ಗೆ ಖಚಿತ ಮಾಹಿತಿ ಇಲ್ಲ ಎಂಬ ಅಭಯಾರಣ್ಯ ಅಧಿಕಾರಿಗಳ ಮಾತಿಗೆ ಕೆರಳಿದ ಶಾಸಕರು, ನಿಮ್ಮ ವನಪಾಲಕರು, ವಾಚರ್‍ಗಳು ಏನು ಮಾಡುತ್ತಿದ್ದಾರೆ? ಅವರಿಂದ ತಿಳಿದುಕೊಳ್ಳಿ. ನಮಗೆ ಮಾಹಿತಿ ಇದೆ ನಿಮಗೆ ಅಕ್ರಮ ಗೊತ್ತಾಗಲ್ವಾ ಎಂದು ಪ್ರಶ್ನಿಸಿ ಶಾಸಕರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.