ಉಡುಪಿ: ಈಗಾಗಲೇ ಎಲ್ಲರೂ ಮತದಾನ ಮಾಡುವಂತೆ ಕರೆ ಕೊಟ್ಟಿದ್ದೇನೆ. ಮತದಾನ ಮಾಡದೇ ಹೋದರೆ ನಾವು ಕರ್ತವ್ಯ ಭ್ರಷ್ಟರು ಆಗುತ್ತೇವೆ. ಅಲ್ಲದೆ ಮುಂದಿನ ದಿನಗಳಲ್ಲಿ ಸರ್ಕಾರವನ್ನು ಟೀಕಿಸುವ ಹಕ್ಕು ಕಳೆದುಕೊಳ್ಳುತ್ತೇವೆ ಎಂದು ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಮತದಾನ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವ ಸರ್ಕಾರದ ಬಗ್ಗೆಯೂ ಹೊಗಳಿಕೆ ತೆಗಳುವಿಕೆ ಮಾಡುವುದಿಲ್ಲ. ಎಲ್ಲರೂ ವಿಚಾರ ಮಾಡಿ ಮತದಾನ ಮಾಡಬೇಕು ಎಂದು ಹೇಳಿದರು.
ಭಾರತ ರಾಷ್ಟ್ರದ ಪ್ರಜೆ ನಾನು. ಹೆಮ್ಮೆಯಿಂದ ಮತ ಚಲಾಯಿಸಿದ್ದೇನೆ. ದೇಶದಲ್ಲಿ ಉತ್ತಮ ಸರ್ಕಾರ ಬರಬೇಕು. ಪ್ರತಿಯೊಬ್ಬರು ಮತದಾನ ಮಾಡಬೇಕು. ಚುನಾವಣೆ ಸಂದರ್ಭ ವೈಯಕ್ತಿಕ ನಿಂದನೆ ಬೇಡ. ಇನ್ನಾದರೂ ವೈಯಕ್ತಿಕ ನಿಂದನೆ ಮಾಡುವುದು ಬಿಡಿ. ವೈಯಕ್ತಿಕ ನಿಂದನೆಯೆಲ್ಲ ನಿಷ್ಪ್ರಯೋಜಕ ಎಂದು ಕಿವಿಮಾತು ಹೇಳಿದರು. ಇದನ್ನೂ ಓದಿ: ಪ್ರತಿಯೊಬ್ಬರೂ ಆತ್ಮಸಾಕ್ಷಿಯಾಗಿ ಮತದಾನ ಮಾಡಿ – ಸಿದ್ದಗಂಗಾ ಶ್ರೀ
ಚುನಾವಣಾ ಪ್ರಚಾರ ಅತ್ಯಂತ ಕೆಳಮಟ್ಟಕ್ಕೆ ಬಂದಿದೆ. ವೈಯಕ್ತಿಕ ನಿಂದನೆ ಮಾಡಿದರೆ ಎದುರಾಳಿಗೆ ಸಿಂಪತಿ ಸಿಗುತ್ತದೆ. ದೇಶದಲ್ಲಿ ಸಭ್ಯತೆಯಿಂದ ಚುನಾವಣೆ ನಡೆಯಬೇಕು. ಬಲಿಷ್ಠವಾದ, ಅಭಿವೃದ್ಧಿ ಶೀಲ ಭಾರತ ಆಗಬೇಕು. ಕೃಷಿ, ಉದ್ಯಮ, ನಿರುದ್ಯೋಗ ಸಮಸ್ಯೆ ಪರಿಹಾರ ಆಗಬೇಕು. ಅದಕ್ಕಾಗಿ ನೀವು ತಪ್ಪದೇ ನಿಮ್ಮ ಹಕ್ಕನ್ನು ಚಲಾಯಿಸಿ ಎಂದು ತಿಳಿಸಿದ್ದಾರೆ.