ಉಡುಪಿ: ಪ್ರಧಾನಿ ನರೇಂದ್ರ ಮೋದಿಗೆ ಅಖಂಡ ಸಾಮ್ರಾಜ್ಯ ಯೋಗ ಇದೆ. ನರೇಂದ್ರ ಮೋದಿ ಛಲವಾದಿ ಮತ್ತು ಹಠವಾದಿ. ಅವರನ್ನು ಯಾವುದೇ ಹುದ್ದೆಯಿಂದ ಇಳಿಸಲು ಸಾಧ್ಯವಿಲ್ಲದಂತಹ ಯೋಗ ಅವರಿಗಿದೆ ಎಂದು ಉಡುಪಿ ಜಿಲ್ಲೆ ಕಾಪುವಿನ ಜ್ಯೋತಿರ್ವಿಜ್ಞಾನಿ ಪ್ರಕಾಶ್ ಅಮ್ಮಣ್ಣಾಯ ಹೇಳಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಮೋದಿ ಸ್ವ-ಇಚ್ಛೆಯಿಂದ ನಿವೃತ್ತಿ ಆದ್ರೆ ಮಾತ್ರ ಅವರು ಅಧಿಕಾರ ಬಿಡಬಹುದು. ಅವರು ಅಧಿಕಾರ ಬಿಡಬಹುದೇ ಹೊರತು ಅಧಿಕಾರ ಅವರನ್ನು ಬಿಡಲ್ಲ ಎಂದು ಹೇಳಿದರು.
ಚಾಂದ್ರಮಾನ ಯುಗಾಧಿಯ ಫಲ ಹೇಳಿದ ಅವರು, ಮುಂದಿನ ಯುಗಾದಿಯ ಒಳಗೆ ಎರಡು ಪ್ರಮುಖ ಗ್ರಹಣಗಳು ಬರುತ್ತದೆ. 2019ರ ಜುಲೈ 26ಕ್ಕೆ ಖಂಡಗ್ರಾಸ ಚಂದ್ರಗ್ರಹಣ ನಡೆಯುತ್ತದೆ. ಡಿಸೆಂಬರ್, 26ಕ್ಕೆ ಸೂರ್ಯಗ್ರಹಣ ಬರುತ್ತದೆ, ಅಂದು ಸೂರ್ಯ ಸ್ವಲ್ಪವೇ ಕಾಣಿಸಿಕೊಂಡು ಸುತ್ತಲೂ ಕತ್ತಲಾಗುವಷ್ಟು ಈ ಗ್ರಹಣ ಪ್ರಬಲವಾಗಿರುತ್ತದೆ. ಈ ವಿಕಾರಿ ಸಂವತ್ಸರದ ಗ್ರಹಸ್ಥಿತಿಯನ್ನು ನೋಡಿದಾಗ 72 ವರ್ಷಕ್ಕೊಮ್ಮೆ ನಡೆಯುವ ಮಹಾ ದುರಂತ ನಡೆಯುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದಾರೆ.
ಧನುರಾಶಿಯಲ್ಲಿ ಶನಿಕೇತು ಯೋಗ, ಸಪ್ತಮದಲ್ಲಿ ರಾಹು, ಕುಜನು ಶನಿಯನ್ನು ಎಂಟನೇ ದೃಷ್ಟಿಯಲ್ಲಿ ನೋಡುವುದರಿಂದ ಏಳು ದಶಕದಲ್ಲಿ ಒಮ್ಮೆ ಸಂಭವಿಸುವ ದುರಂತಕ್ಕೆ ಕಾರಣವಾಗಬಹುದು. ಈ ಹಿಂದೆ 1945-46 ಹಾಗೂ 1800 ರಲ್ಲಿ ಇಂತಹ ದುರಂತ ನಡೆದು ಜನಾಂಗ ನಾಶವಾಗಿದ್ದನ್ನೂ ನೆನಪಿಸಿದ್ದಾರೆ. ಜನರು ಮನುಷ್ಯತ್ವ, ಸೌಹಾರ್ದತೆ ಪಾಲಿಸಬೇಕೆಂದು ಸೂಚನೆ ನೀಡಿದ್ದಾರೆ.
ಮೋದಿಗೆ ಅಖಂಡ ಸಾಮ್ರಾಜ್ಯ:
2019 ರ ಚುನಾವಣೆಯಲ್ಲಿ ಮೋದಿ ನೇತೃತ್ವದಲ್ಲಿ ಬಿಜೆಪಿ ಪಕ್ಷವು ಸರ್ಕಾರ ಮಾಡೋದು ಖಚಿತ ಎಂದು ಪ್ರಕಾಶ್ ಅಮ್ಮಣ್ಣಾಯ ಹೇಳಿದ್ದಾರೆ. ಮೋದಿ ಜಾತಕದಲ್ಲಿ ಅಖಂಡ ಸಾಮ್ರಾಜ್ಯ ಯೋಗ ಇದೆ. ಜೊತೆಗೆ ಪರ್ವತ ಯೋಗ, ಗಜಕೇಸರಿಯೋಗದ ಭಾಗ್ಯವೂ ಇದೆ. ಹಾಗಾಗಿ ಎರಡನೇ ಬಾರಿಗೆ ಮೋದಿ ಪ್ರಧಾನಿಯಾಗೋದನ್ನ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದಕ್ಕೆ ಪ್ರತಿಯಾಗಿ ಮಹಾ ಘಟ್ ಬಂಧನದಲ್ಲಿ ಪ್ರಧಾನಿಯಾಗುವ ಯೋಗ ಯಾರಿಗೂ ಇದ್ದಂತಿಲ್ಲ. ಮೊದಲಾಗಿ ಅವರಲ್ಲಿ ಪ್ರಧಾನಿ ಅಭ್ಯರ್ಥಿಯಾಗಲು ಹಲವರು ಆಕಾಂಕ್ಷಿಗಳಿದ್ದಾರೆ. ಘಟಬಂಧನದಲ್ಲಿ ಸ್ಪಷ್ಟತೆ ಇಲ್ಲದ ಕಾರಣ ಜಾತಕಫಲ ಹಾಗೂ ರಾಜಕೀಯ ವಾತಾವರಣ ಮೋದಿಗೆ ಅನುಕೂಲಕರವಾಗಿದೆ. ಈ ಚುನಾವಣೆಯಲ್ಲಿ ಮೋದಿಯನ್ನು ಏನೂ ಮಾಡಲು ಸಾಧ್ಯವಿಲ್ಲ. ನ್ಯಾಯಯುತವಾದ ಹಠ ಸಾಧನೆ ಮಾಡುವ ಗುಣ ಪ್ರಧಾನಿ ಮೋದಿಯಲ್ಲಿದೆ. ಮೋದಿಯವರಂತ ಜಾತಕ, ಘಟಬಂಧನದಲ್ಲಿ ಯಾರಲ್ಲೂ ಇಲ್ಲ. ನರೇಂದ್ರ ಮೋದಿಯವರದ್ದು ರಾಜ ಸನ್ಯಾಸ. ಸ್ವಾರ್ಥ ಇಲ್ಲದ, ದೇಶದ ಅಭಿವೃದ್ಧಿಗೆ ಹಠ ಸಾಧಿಸುವ ಗುಣ ಕಾಣಬಹುದು.
ಕಳೆದ ನಾಲ್ಕು ದಶಕಗಳಿಂದ ದೇಶೋದ್ಧಾರದ ಹಠ ಸಾಧನೆಯ ಗುಣ ಕಾಪಾಡಿಕೊಂಡು ಬಂದಿರುವುದನ್ನು ಅವರ ಜಾತಕದಿಂದ ತಿಳಿಯಬಹುದು. ಚಾಣಕ್ಯ, ಕೃಷ್ಣರಂತೆ ತಾವೇ ಇಚ್ಛಿಸಿ ನಿರ್ಗಮಿಸುವವರೆಗೂ ಮೋದಿ ಆಡಳಿತ ಅಭಾದಿತ ಎಂದಿದ್ದಾರೆ. ವಿಪಕ್ಷಗಳ ಮುಖಂಡರು ಪುಲ್ವಾಮ ಘಟನೆ ಮತ್ತು ಪಾಕಿಸ್ತಾನದ ಕುರಿತಾಗಿ ಆಡುತ್ತಿರುವ ಮಾತುಗಳಿಂದಲೂ ಮೋದಿಗೆ ಅನುಕೂಲವಾಗಿದೆ. ಇದು ಪ್ರಕೃತಿ ಮೋದಿಗೆ ಕಲ್ಪಿಸಿದ ಅನುಕೂಲ ಎಂದು ಅಮ್ಮಣ್ಣಾಯ ಅಭಿಪ್ರಾಯಪಟ್ಟಿದ್ದಾರೆ.
ಅವಮಾನವನ್ನು ಸಹಿಸಿ ಬೆಳೆಯುವ ಗುಣ ಮೋದಿಯವರ ಜಾತಕದಲ್ಲಿದೆ, ಆದರೆ ಮಹಾಘಟಬಂಧನದಲ್ಲಿ ಅಂತಹ ನಾಯಕರು ಯಾರೂ ಇಲ್ಲ. ಪ್ರಣವ್ ಮುಖರ್ಜಿ ಇದ್ದಿದ್ದರೆ ಘಟಬಂಧನ ಒಂದಿಷ್ಟು ಗಟ್ಟಿಯಾಗಿರುತ್ತಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ. ಮೋದಿಯರಿಗೆ ಕೇತುಭುಕ್ತಿಯೂ ನಡೆಯುತ್ತಿದೆ. ಹಾಗಾಗಿ ಇನ್ನಷ್ಟು ವಿಪತ್ತುಗಳನ್ನು ಎದುರಿಸಬೇಕಾದೀತು. ಪಾಕಿಸ್ತಾನದ ದಾಳಿಯನ್ನು ತಳ್ಳಿಹಾಕುವಂತಿಲ್ಲ. ಅಣುವಿಕೋಪಕ್ಕೆ ಹೋದರೂ ಅಚ್ಚರಿಯಿಲ್ಲ. ಇದು ವಿಕಾರಿ ಸಂವತ್ಸರ, ವಿಪರೀತ ಕಲಹದಿಂದ ಜನಾಂಗೀಯ ಕಲಹ ಆಗುವ ಸಾಧ್ಯೆತೆಯೂ ಇದೆ ಎಂದಿದ್ದಾರೆ.
ಮಹಾ ಘಟಬಂಧನದಲ್ಲೇ ಗೊಂದಲ:
ಈ ಘಟಬಂಧನಕ್ಕೆ ಆಯುಷ್ಯ ಖಂಡಿತವಾಗಿಯೂ ಇಲ್ಲ. ದೇಶದ ರಕ್ಷಣೆ ನೆಮ್ಮದಿಯ ಬದುಕು ಬಯಸುವವರಿಗೆ ಘಟ್ ಬಂಧನ್ ಬೇಕಾಗಿಲ್ಲ. ರಾಹುಲ್ ಗಾಂಧಿ ಈಗಾಗಲೇ 72 ಸಾವಿರ ಕೊಡೋದಾಗಿ ಹೇಳಿದ್ದಾರೆ. ಇಂತಹ ಸೌಕರ್ಯಗಳ ಆಸೆ ಪಡುವ ಜನರಿಗೆ ಘಟಬಂಧನದ ಮೇಲೆ ನಿರೀಕ್ಷೆಗಳಿರಬಹುದು. ಎಣ್ಣೆ ಸೀಗೆ ಒಟ್ಟಾಗುವುದಿಲ್ಲ. ಹಾಗೆಯೇ ಘಟಬಂಧನದಲ್ಲಿ ಸೇರಿದವರಲ್ಲಿ ಒಮ್ಮತ ಕಾಣುವುದಿಲ್ಲ. ಎಲ್ಲರಿಗೂ ಉನ್ನತ ಹುದ್ದೆಯ ಆಸೆ ಇದೆ. ಘಟಬಂಧನ ಚೂರುಚೂರಾಗುತ್ತೆ. ಯುಪಿಎ ಘಟಬಂಧನದಲ್ಲಿ ಸರಿಯಾದ ಸಂಖ್ಯೆ ಇತ್ತು. ಆದರೆ ಅವರು ಅದನ್ನು ಉಳಿಸಿಕೊಂಡಿಲ್ಲ. ಜಾಗೃತ ಪ್ರಜೆಗಳಿಗೆ ರಾಜಕೀಯ ಪ್ರಜ್ಞೆ ಇದೆ. ಉತ್ತಮ ಘಟಬಂಧನ ಈ ದೇಶದ ಅಗತ್ಯ. ಆದರೆ ಭಾರತೀಯ ಪರಂಪರೆಯನ್ನು ಸೋಲಿಸುವ ಘಟಬಂಧನದಿಂದ ಪ್ರಯೋಜನವಿಲ್ಲ. ಈ ದೇಶದಲ್ಲಿ ಹಿಂದೂ ಧರ್ಮ ಮಾತ್ರ ಇರಬೇಕು ಅಂತಲ್ಲ, ಆದರೆ ಹಿಂದೂ ಧರ್ಮಕ್ಕೆ ಅಪಾಯ ಮತ್ತು ಧರ್ಮಬೇಧ ಹುಟ್ಟು ಹಾಕುವ ಗುಣವೇ ಘಟಬಂಧನದಲ್ಲಿ ಹೆಚ್ಚು ಕಾಣಿಸುತ್ತಿದೆ ಎಂದು ಅಮ್ಮಣ್ಣಾಯ ಅಭಿಪ್ರಾಯಪಟ್ಟಿದ್ದಾರೆ.