ಉಡುಪಿ: ಸುಮಲತಾ ಅಂಬರೀಶ್ ಗೆಲುವು ಸಾಮಾನ್ಯ ಎಂದು ಭಾವಿಸಿಲ್ಲ. ಬಿಜೆಪಿ ಸುಮಲತಾರಿಗೆ ಬೇಷರತ್ ಬೆಂಬಲ ನೀಡಿತ್ತು. ಅವರಾಗಿಯೇ ಎನ್‍ಡಿಎ ಗೆ ಬೆಂಬಲ ನೀಡಿದರೆ ಎಲ್ಲರಿಗೂ ಒಂದು ಗೌರವ ಬರುತ್ತದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಇಡೀ ಕರ್ನಾಟಕ ಸರ್ಕಾರವನ್ನು ಎದುರಿಸಿ ಸುಮಲತಾ ಗೆದ್ದಿದ್ದಾರೆ. ಮಂಡ್ಯ ಸಾಭಿಮಾನದ ಜಿಲ್ಲೆ ಎಂದು ಸಾಬೀತಾಗಿದೆ. ಮೈತ್ರಿ ಸರ್ಕಾರಕ್ಕೆ ಕಪಾಳ ಮೋಕ್ಷವಾಗಿದೆ ಎಂದು ಹೇಳಿದರು.
ಸುಮಲತಾಗೆ ಬೆಂಬಲ ಕೊಡುವಾಗ ಯಾವುದೇ ಷರತ್ತು ಹಾಕಿಲ್ಲ. ನಮ್ಮ ಅಪೇಕ್ಷೆಯಿಲ್ಲ, ಯಾವ ಕರಾರು ಮಾಡಿಕೊಂಡಿಲ್ಲ. ಈಗಲೂ ಈ ನಿಲುವಿಗೆ ಬದ್ಧವಾಗಿದ್ದೇವೆ. ಅವರಾಗಿಯೇ ಎನ್ ಡಿ ಎಗೆ ಬೆಂಬಲ ಕೊಟ್ಟರೆ ಎಲ್ಲರಿಗೂ ಗೌರವ ಬರುತ್ತದೆ ಎಂದರು.
ರಾಜ್ಯ ಸರ್ಕಾರದ ವಿರುದ್ಧ ಗುಡುಗಿದ ಕೋಟ, ಜಂಟಿ ಸರ್ಕಾರವನ್ನು ಬೀಳಿಸುವುದು ಬೇಡ. ಅದೇ ಬೀಳುತ್ತದೆ. ಕುಮಾರಸ್ವಾಮಿಯವರು ಮತ್ತು ಸಿದ್ದರಾಮಯ್ಯನವರು ಪ್ರಮಾದವಾಗಿದೆ ಎಂದು ಈಗ ಹೇಳುತ್ತಾರೆ. ಇವರ ಹೊಂದಾಣಿಕೆ ಅಧಿಕಾರ ದಾಹಕ್ಕಾಗಿ ಕುರ್ಚಿಗಾಗಿ ಎಂದು ಜನ ಅರಿತುಕೊಂಡು ಇವರನ್ನು ಜನರೇ ಮನೆಗೆ ಕಳುಹಿಸಿದ್ದಾರೆ. ಘಟನಾನುಘಟಿಗಳು ಸೋಲಲು ಇದೂ ಒಂದು ಕಾರಣ ಎಂದು ಹೇಳಿದರು.