ಉಡುಪಿ: ಟೇಕನ್ ಫಾರ್ ಗ್ರ್ಯಾಂಟೆಡ್ ಅನ್ನೋ ಗಾದೆ ಉಡುಪಿ ಜಿಲ್ಲೆಯ ಬಿಲ್ಲವ ಸಮುದಾಯಕ್ಕೆ ಹೇಳಿ ಮಾಡಿಸಿದಂತಿದೆ. ವೋಟಿಗಾಗಿ ಬಿಲ್ಲವರನ್ನು ಉಪಯೋಗಿಸೋ ಬಿಜೆಪಿ- ಕಾಂಗ್ರೆಸ್ ನಂತರ ಅವರ ಭಾವನೆಗೆ ಬೆಲೆ ಕೊಡೋದಿಲ್ಲ. ಮುಜರಾಯಿ, ಮೀನುಗಾರಿಕೆ ಸಚಿವರ ವಿಚಾರದಲ್ಲೂ ಮತ್ತೆ ಹೀಗೆ ಆಗಿದೆ.
ಕೋಟ ಶ್ರೀನಿವಾಸ ಪೂಜಾರಿಯವರು ಗ್ರಾಮ ಪಂಚಾಯತ್ ಸದಸ್ಯನಿಂದ ಆರಂಭವಾಗಿ ಕ್ಯಾಬಿನೆಟ್ ದರ್ಜೆಯವರೆಗೆ ಏರಿದ ನಾಯಕ. ಸರಳ ಸಜ್ಜನಿಕೆಗೆ ರಾಜ್ಯದಲ್ಲೇ ಹೆಸರು ಮಾಡಿದವರು. ಕರಾವಳಿಯ ಮೂರು ಜಿಲ್ಲೆಗಳ ಮಟ್ಟಿಗೆ ಪ್ರಭಾವಿ ನಾಯಕ ಎನಿಸಿಕೊಂಡಿದ್ದಾರೆ. ಇದೀಗ ಏಕಾಏಕಿ ಉಡುಪಿಯಿಂದ ಕೋಟ ಶ್ರೀನಿವಾಸ ಪೂಜಾರಿಯನ್ನು ದಕ್ಷಿಣ ಕನ್ನಡ ಜಿಲ್ಲೆಗೆ ಉಸ್ತುವಾರಿಯನ್ನಾಗಿ ಕಳುಹಿಸಲಾಗಿದೆ. ಈ ವಿಚಾರ ಪ್ರಬಲ ಬಿಲ್ಲವ ಸಮುದಾಯ ಕಿಡಿಕಾರುವಂತೆ ಮಾಡಿದೆ. ಉಡುಪಿಯ ಬಿಜೆಪಿಯ ಐವರು ಶಾಸಕರೇ ಶ್ರೀನಿವಾಸ ಪೂಜಾರಿಯನ್ನು ಪಕ್ಕದ ಜಿಲ್ಲೆಗೆ ದಾಟಿಸಿದ್ದಾರೆ. ಅವರ ಕೈವಾಡದಿಂದ ಇಷ್ಟೆಲ್ಲ ಬೆಳವಣಿಗೆ ಆಗಿದೆ ಎಂಬ ಸುದ್ದಿ ಸದ್ಯ ಭಾರೀ ಅಸಮಾಧಾನಕ್ಕೆ ಕಾರಣವಾಗಿದೆ.
Advertisement
Advertisement
ಈ ಕುರಿತು ಬಿಜೆಪಿ ನಾಯಕ, ಬಿಲ್ಲವ ಮುಖಂಡ ಕಿರಣ್ ಕುಮಾರ್ ಪಬ್ಲಿಕ್ ಟಿವಿ ಜೊತೆ ಮಾತನಾಡಿ ಅಸಮಾಧಾನ ಹೊರಹಾಕಿದರು. ನಮ್ಮ ಜಿಲ್ಲೆಯ ನಾಯಕನನ್ನು ನಮ್ಮಲ್ಲಿ ಉಳಿಸಿಕೊಳ್ಳುವ ಅಗತ್ಯವಿದೆ. ಶಾಸಕರು ಕೋಟ ಶ್ರೀನಿವಾಸ ಪೂಜಾರಿ ವಿರುದ್ಧ ಸಹಿ ಸಂಗ್ರಹ ಮಾಡಿ ಮುಖ್ಯಮಂತ್ರಿಗಳಿಗೆ ಕೊಟ್ಟ ಬಗ್ಗೆ ನಮಗೆ ಮಾಹಿತಿಯಿದೆ. ಇದು ಹೌದಾದರೆ ಅವರು ಒಪ್ಪಿಕೊಳ್ಳಲಿ. ಮುಂದಿನ ತೀರ್ಮಾನಗಳನ್ನು ನಾವು ಮಾಡುತ್ತೇವೆ. 19ಕ್ಕೆ ಮತ್ತೆ ಸಭೆ ಸೇರಿ ಬಿಲ್ಲವ ಮುಖಂಡರ ನೇತೃತ್ವದಲ್ಲಿ ಒಂದು ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು.
Advertisement
ಕೋಟ ಶ್ರೀನಿವಾಸ ಪೂಜಾರಿ ಮೂರು ಬಾರಿ ವಿಧಾನ ಪರಿಷತ್ ಸದಸ್ಯರಾಗಿದ್ದಾರೆ. ಜನರಿಂದ ಗೆದ್ದ ಐವರು ಶಾಸಕರ ಪೈಕಿ ಒಬ್ಬರಿಗೂ ಸಚಿವ ಸ್ಥಾನ ನೀಡದ್ದಕ್ಕೆ, ಉಡುಪಿಯ ಎಲ್ಲಾ ಶಾಸಕರು ಅಸಮಾಧಾನಗೊಂಡಿದ್ದಾರಂತೆ. ಹಾಲಾಡಿ ಶ್ರೀನಿವಾಸ ಶೆಟ್ಟಿ, ಸುನಿಲ್ ಕುಮಾರ್, ರಘುಪತಿ ಭಟ್, ಲಾಲಾಜಿ ಮೆಂಡನ್, ಸುಕುಮಾರ ಶೆಟ್ಟಿ ಸಹಿ ಹಾಕಿ ಪೂಜಾರಿಯನ್ನು ಗಡಿಪಾರು ಮಾಡಿದ್ದಾರಂತೆ. ಬಿಲ್ಲವ ನಾಯಕನೊಬ್ಬ ಪ್ರಭಾವಿಯಾಗಿ ಬೆಳೆಯುತ್ತಿರೋದೇ ಇದಕ್ಕೆ ಕಾರಣ ಅಂತ ಜಿಲ್ಲೆಯ ಬಿಲ್ಲವ ಸಮಾಜ ಕೋಪಗೊಂಡಿದೆ. ಕಟಪಾಡಿ ವಿಶ್ವನಾಥ ಕ್ಷೇತ್ರದಲ್ಲಿ ತುರ್ತು ಸಭೆ ಸೇರಿ ಬೆಳವಣಿಗೆಯ ವಿರುದ್ಧ ಸಂಘಟಿತರಾಗಿದ್ದಾರೆ.
Advertisement
ಬಿಲ್ಲವ ಮುಖಂಡ- ಹಿಂದೂಪರ ಸಂಘಟನೆಗಳ ನಾಯಕ, ಅಚ್ಯುತ್ ಅಮೀನ್ ಮಾತನಾಡಿ, ಕಳೆದ ಸರ್ಕಾರದಲ್ಲಿ ವಿನಯಕುಮಾರ್ ಸೊರಕೆಯನ್ನು ಅರ್ಧಕ್ಕೆ ಸಚಿವ ಸ್ಥಾನದಿಂದ ಇಳಿಸಲಾಯ್ತು. ಈ ಮೂಲಕ ಕಾಂಗ್ರೆಸ್ ಬಿಲ್ಲವರಿಗೆ ಮೋಸ ಮಾಡಿದೆ. ಇದೀಗ ಶ್ರೀನಿವಾಸ ಪೂಜಾರಿಯನ್ನು ಜಿಲ್ಲೆಯ ಸಂಬಂಧದಿಂದ ದೂರ ಮಾಡಿರುವುದು ಬಿಲ್ಲವ ವಿರೋಧಿ ನೀತಿಯಾಗಿದೆ. ಎಲ್ಲವನ್ನೂ ನೋಡುತ್ತಾ ಬಿಲ್ಲವರು ಸುಮ್ಮನಿರಲ್ಲ. ನಮ್ಮ ಸಮುದಾಯದ ಶಕ್ತಿ ಏನೆಂಬುದನ್ನು ಸೂಕ್ತ ಕಾಲದಲ್ಲಿ ತೋರಿಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೋಟ ಶ್ರೀನಿವಾಸ ಪೂಜಾರಿಗೆ ಸಚಿವ ಸ್ಥಾನ ಕೊಡಬಾರದೆಂದು ಐವರು ಶಾಸಕರು ಸಿಎಂ ಯಡಿಯೂರಪ್ಪಗೆ ಒತ್ತಡ ಹೇರಿದ್ದರು ಎಂಬ ಮಾಹಿತಿ ಸಂಪುಟ ವಿಸ್ತರಣೆ ಸಂದರ್ಭದಲ್ಲೇ ಕೇಳಿ ಬಂದಿತ್ತು. ಮೇಲ್ಮನೆ ಹಿರಿಯ, ಆರ್ ಎಸ್ ಎಸ್ ಬೆಂಬಲದಿಂದ ಕೋಟಗೆ ಕ್ಯಾಬಿನೆಟ್ ದರ್ಜೆ ಒಲಿದಿತ್ತು. ಇದೀಗ ಉಸ್ತುವಾರಿ ಸಚಿವ ಸ್ಥಾನ ತಪ್ಪಿಸಿಯಾದರೂ ತಮ್ಮ ಪ್ರಭಾವ ತೋರಿಸುವಲ್ಲಿ ಶಾಸಕರು ಗೆದ್ದಿದ್ದಾರೆ ಎಂಬ ಗುಸುಗುಸು ಕೇಳಿಬರುತ್ತಿದೆ.