– ದೈತ್ಯ ಚಿರತೆ ಕೊಲ್ಲೂರು ಅಭಯಾರಣ್ಯಕ್ಕೆ ಶಿಫ್ಟ್
ಉಡುಪಿ: ಉಡುಪಿ ಜಿಲ್ಲೆಯ ಕೋಟ ಜನರಲ್ಲಿ ಕಳೆದ ಆರು ತಿಂಗಳಿನಿಂದ ಆತಂಕ ಸೃಷ್ಟಿಸಿದ್ದ ದೈತ್ಯ ಚಿರತೆಯನ್ನು ಗ್ರಾಮಸ್ಥರು ಹಾಗೂ ಅರಣ್ಯಾಧಿಕಾರಿಗಳ ಹಿಡಿದಿದ್ದಾರೆ.
ಕೋಟ ಸಮೀಪದ ಊರುಗಳಾದ ಬನ್ನಾಡಿ, ವಡ್ಡರ್ಸೆ ಹಾಗೂ ಅಚ್ಲಾಡಿ ಎಂಬಲ್ಲಿ ಕಳೆದ ನಾಲ್ಕೈದು ತಿಂಗಳಿನಿಂದ ಚಿರತೆಯೊಂದು ಅಡ್ಡಾಡುತ್ತಿರುವು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿತ್ತು. ಚಿರತೆಯನ್ನು ಹಿಡಿಯುವ ಸಲುವಾಗಿ ಅರಣ್ಯಾಧಿಕಾರಿಗಳು ಬೋನಿಟ್ಟಿದ್ದರೂ ಚಿರತೆ ಬೋನಿಗೆ ಬಿದ್ದಿರಲಿಲ್ಲ.
Advertisement
Advertisement
ಬೋನು ಇಟ್ಟ ಬಳಿಕ ಹತ್ತು ಹದಿನೈದು ದಿನಗಳ ಕಾಲ ಚಿರತೆ ಆ ಪ್ರದೇಶಕ್ಕೆ ಸುಳಿಯುತ್ತಿರಲಿಲ್ಲ. ಅರಣ್ಯಾಧಿಕಾರಿಗಳ ಜೊತೆ ಸ್ಥಳೀಯರೂ ಕಾರ್ಯಾಚರಣೆಗೆ ಇಳಿದಿದ್ದರು. ಕೆಲ ಆಯಕಟ್ಟಿನ ಜಾಗದಲ್ಲಿ ತಂತಿಯ ಉರುಳು ಅಳವಡಿಸಿದ್ದರು. ಕಾಡಿನಿಂದ ನಾಡಿಗೆ ಆಹಾರ ಅರಸಿ ಬಂದಿದ್ದ ಚಿರತೆಯ ಸೊಂಟಕ್ಕೆ ಉರುಳು ಸಿಕ್ಕಿಹಾಕಿಕೊಂಡಿದೆ.
Advertisement
ಚಿರತೆ ಕಂಡ ಗ್ರಾಮಸ್ಥರು ಅರಣ್ಯ ಇಲಾಖೆಗೆ ವಿಷಯ ಮುಟ್ಟಿಸಿದ್ದರು. ಅರಣ್ಯ ಇಲಾಖೆಯ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ, ತೋಡಿನ ಒಂದು ಬದಿಯಲ್ಲಿ ಬೋನನ್ನು ಇಟ್ಟು, ಮತ್ತೊಂದು ಬದಿಯನ್ನು ಮುಚ್ಚಿ ಆರು ವರ್ಷದ ಗಂಡು ಚಿರತೆಯನ್ನು ಬೋನಿನೊಳಗೆ ಸೆರೆಯಾಗಿಸಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ವರ್ಷಕ್ಕೆ ಹತ್ತಾರು ಚಿರತೆಗಳ ರಕ್ಷಣೆಯಾಗುತ್ತದೆ. ಆದರೆ ಇಷ್ಟು ದೈತ್ಯ ಚಿರತೆ ಸೆರೆಯಾಗಿರುವುದು ಇದೇ ಮೊದಲು ಅಂತ ಅರಣ್ಯಾಧಿಕಾರಿಗಳು ಹೇಳಿದ್ದಾರೆ. ಜಿಲ್ಲೆಯ ಪಶು ವೈದ್ಯರ ನೇತೃತ್ವದಲ್ಲಿ ಚಿರತೆಯ ಆರೋಗ್ಯ ತಪಾಸಣೆ ನಡೆಸಿ, ಕೊಲ್ಲೂರು ಮೂಕಾಂಬಿಕ ಅಭಯಾರಣ್ಯಕ್ಕೆ ಬಿಡಲಾಗಿದೆ.