ಉಡುಪಿ: ವಿದೇಶದಿಂದ ಮಂಗಳೂರು ಏರ್ ಪೋರ್ಟಿಗೆ ದಿನಂಪ್ರತಿ ಎಂಬಂತೆ ಚಿನ್ನಾಭರಣ ಅಕ್ರಮ ಆಮದಾಗುತ್ತಿದೆ. ಕಸ್ಟಮ್ಸ್ ಅಧಿಕಾರಿಗಳು ಹಲವಾರು ಪ್ರಕರಣ ಬಯಲಿಗೆ ಎಳೆಯುತ್ತಿದ್ದಾರೆ. ಅಲ್ಲಿಂದ ಕೇರಳ ಮೂಲಕ ದೇಶದೆಲ್ಲೆಡೆ ಚಿನ್ನದ ಹಂಚಿಕೆಯಾಗುತ್ತದೆ ಎಂಬ ಮಾಹಿತಿ ಇದೀಗ ಬಹಿರಂಗವಾಗಿದೆ.
ಉಡುಪಿ ಜಿಲ್ಲೆ ಬೈಂದೂರು-ಉತ್ತರ ಕನ್ನಡದ ಭಟ್ಕಳ ಭಾಗದಲ್ಲಿ ಪೊಲೀಸರು ನಡೆಸಿದ ದಾಳಿಯಿಂದ ಇದು ಗೊತ್ತಾಗಿದೆ. ಕೇರಳದ ಎರ್ನಾಕುಲಂನಿಂದ ಭಟ್ಕಳಕ್ಕೆ ಚಿನ್ನ ಸಾಗಿಸುವ ಮೂವರು ಸಿಕ್ಕಿಬಿದ್ದಿದ್ದು ಅವರ ವಿಚಾರಣೆಯಿಂದ ಚಿನ್ನಾಭರಣ ಅಕ್ರಮ ಸಾಗಾಟ ಮತ್ತು ಮಾರಾಟದ ಬಗ್ಗೆ ಮತ್ತಷ್ಟು ಮಾಹಿತಿಗಳು ಹೊರಬೀಳುವ ಸಾಧ್ಯತೆಯಿದೆ.
ಉಡುಪಿ ಜಿಲ್ಲಾ ಎಸ್ಪಿ ನಿಶಾ ಜೇಮ್ಸ್ ಅವರ ಮಾರ್ಗದರ್ಶನದಲ್ಲಿ ಮಂಗಳವಾರ ರಾತ್ರಿ ಕುಂದಾಪುರ ಹಾಗೂ ಭಟ್ಕಳ ಉಪವಿಭಾಗದ ಪೊಲೀಸರು ಕಾರ್ಯಾಚರಣೆ ನಡೆಸಿ ರೈಲಿನಲ್ಲಿ ಅಕ್ರಮವಾಗಿ ಚಿನ್ನ ಕಳ್ಳ ಸಾಗಾಣಿಕೆ ಮಾಡುತ್ತಿದ್ದ ಮೂವರನ್ನು ಬಂಧಿಸಿದ್ದರು. ಭಟ್ಕಳ ಮೂಲದ ಮೊಹಮ್ಮದ್ ಇಸ್ಮಾಯಿಲ್, ರಾಹೀಫ್, ಸಯ್ಯದ್ ಉಮ್ಮರ್ ಬಂಧಿತರು. ಬಂಧಿತರಿಂದ ಒಟ್ಟು 61.47 ಲಕ್ಷ ರೂ. ಬೆಲೆಯ 1.633 ಕೆಜಿ ತೂಕದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿತ್ತು. ಕುಂದಾಪುರ ಹಾಗೂ ಭಟ್ಕಳ ಎಎಸ್‍ಪಿಗಳ ತಂಡ ಈ ಭರ್ಜರಿ ಕಾರ್ಯಾಚರಣೆ ನಡೆಸಿತ್ತು.
ಆರೋಪಿಗಳನ್ನು ತೀವ್ರ ವಿಚಾರಣೆ ನಡೆಸಿದಾಗ, ದಾಖಲೆಗಳಿಲ್ಲದೆ ಎರ್ನಾಕುಲಂನಿಂದ ಭಟ್ಕಳಕ್ಕೆ ಚಿನ್ನ ಸಾಗಿಸುತ್ತಿರುವುದನ್ನು ಹಾಗೂ ಇದರ ಹಿಂದೆ ಬೇರೆ ಬೇರೆ ಲಿಂಕ್ ಗಳು ಇರುವುದನ್ನು ಬಂಧಿತರು ಒಪ್ಪಿಕೊಂಡಿದ್ದಾರೆ. ಜಾಲದಲ್ಲಿ ಮತ್ತಷ್ಟು ಮಂದಿ ಇರುವ ಸಾಧ್ಯತೆಯಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆಪರೇಷನ್ ನಡೆದದ್ದು ಹೇಗೆ?
ಕುಂದಾಪುರ ಎಎಸ್‍ಪಿ ಹರಿರಾಮ್ ಶಂಕರ್ ಗೆ ಚಿನ್ನ ಸಾಗಾಟದ ಬಗ್ಗೆ ಮಾಹಿತಿ ಸಿಕ್ಕ ಕೂಡಲೇ, ಕಾರ್ಯೋನ್ಮುಖರಾಗಿದ್ದಾರೆ. ಕುಂದಾಪುರ, ಬೈಂದೂರು, ಭಟ್ಕಳ ರೈಲು ನಿಲ್ದಾಣಗಳಲ್ಲಿ ಪೊಲೀಸರನ್ನು ನಿಯೋಜನೆ ಮಾಡಿದ್ದರು. ಉಡುಪಿ ಕುಂದಾಪುರ ಉದ್ದಕ್ಕೂ ಪೊಲೀಸರನ್ನು ನಿಯೋಜನೆ ಮಾಡಿದ್ದರು. ಬೈಂದೂರು ರೈಲು ನಿಲ್ದಾಣದಲ್ಲಿ ಮೊಹಮ್ಮದ್ ಇಸ್ಮಾಯಿಲ್ ಭಟ್ಕಳ ಎಂಬಾತನಿಂದ 253 ಗ್ರಾಂ ಚಿನ್ನದ ನಾಣ್ಯ ಹಾಗೂ ಆಭರಣಗಳನ್ನು ಮೊದಲು ವಶಪಡಿಸಿಕೊಳ್ಳಲಾಯ್ತು.
ತಂಡದ ಸದಸ್ಯರು ಬೇರೆ ಬೇರೆ ಕಡೆ ಚದುರಿದ್ದರು. ಭಟ್ಕಳದಲ್ಲಿ ರಾಹೀಫ್ ಎಂಬಾತನಿಂದ 1.166 ಕೆಜಿ ಚಿನ್ನಾಭರಣ ಮತ್ತು ಸಯ್ಯದ್ ಉಮ್ಮರ್ ಎಂಬಾತನಿಂದ 213 ಗ್ರಾಂ ತೂಕದ ಚಿನ್ನ ವಶಪಡಿಸಿಕೊಳ್ಳಲಾಯಿತು. ಮೂವರನ್ನು ಕುಂದಾಪುರಕ್ಕೆ ಕರೆದುಕೊಂಡು ಬಂದು ವಿಚಾರಣೆ ನಡೆಸಿದಾಗ ಜಾಲದ ಬಗ್ಗೆ ಪೊಲೀಸರಿಗೆ ಇನ್ನಷ್ಟು ಮಾಹಿತಿ ಸಿಕ್ಕಿದೆ.
ಭಟ್ಕಳ ಎಎಸ್‍ಪಿ ನಿಖಿಲ್, ಕುಂದಾಪುರ ಎಎಸ್‍ಪಿ ಹರಿರಾಮ್ ಶಂಕರ್, ಬೈಂದೂರು ಸಿಪಿಐ ಸುರೇಶ್ ನಾಯಕ್, ಉಡುಪಿ ಸಿಪಿಐ ಮಂಜುನಾಥ, ಕುಂದಾಪುರ ಎಸ್‍ಐ ಹರೀಶ್ ಆರ್.ನಾಯ್ಕ್, ಭಟ್ಕಳ, ಕುಮಟಾ ಪಿಸ್‍ಐಗಳು, ಪ್ರೊಬೇಶನರಿ ಪಿಎಸ್‍ಐ ಸುದರ್ಶನ್, ಕುಂದಾಪುರ ಎಎಸ್‍ಪಿ ತಂಡದ ಮೋಹನ್, ಸಂತೋಷ್ ಕೊರವಡಿ, ಸಂತೋಷ್ ಹೊನ್ನಾಳ, ಮಂಜುನಾಥ, ಕೃಷ್ಣ, ಪ್ರಿನ್ಸ್, ಚಂದ್ರಶೇಖರ, ವಿಜಯ ಕುಮಾರ್, ಸಲೀಂವುಲ್ಲಾ ಕಾರ್ಯಾಚರಣೆ ನಡೆಸಿದ್ದರು. ಪೊಲೀಸರ ಈ ತಂಡಕ್ಕೆ ಉಡುಪಿ ಎಸ್ ಪಿಯಿಂದ ಶ್ಲಾಘನೆ ವ್ಯಕ್ತವಾಗಿದೆ.