ಉಡುಪಿ: ಜಿಲ್ಲೆಯ ಕಾರ್ಕಳದಲ್ಲಿ ರಾದ್ಧಾಂತ ಎಬ್ಬಿಸಿದ್ದ ಸುಂಟರಗಾಳಿ ಏಳು ಮನೆಗಳನ್ನು ಹಾರಿಸಿತ್ತು. ನೂರಾರು ಎಕ್ರೆ ಕೃಷಿಯನ್ನು ಹಿಚುಕಿ ಹಾಕಿತ್ತು. ಕೆರೆ ಗದ್ದೆಯ ನೀರನ್ನು ಇನ್ನೂರು ಮೀಟರ್ ಎತ್ತರಕ್ಕೆ ಹಾರಿಸಿತ್ತು. ಇಷ್ಟೆಲ್ಲಾ ಅಲ್ಲೋಲ ಕಲ್ಲೋಲಕ್ಕೆ ಕಾರಣ ಏನು ಎಂದು ಹುಡುಕಿದ ಪಬ್ಲಿಕ್ ಟಿವಿಗೆ ಇದೀಗ ಕಾರಣ ಸಿಕ್ಕಿದೆ.
ಆಗಸ್ಟ್ 1 ರಂದು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಪೆರ್ವಾಜೆ ಗ್ರಾಮದಲ್ಲಿ ಸಿಡಿಲು ಬಡಿದಂತೆ, ಭೂಮಿ ಕಂಪಿಸಿದಂತೆ ಅನುಭವವಾಗಿತ್ತು. ಆ ಮಧ್ಯಾಹ್ನ ಬೀಸಿದ್ದ ಸುಂಟರಗಾಳಿಗೆ ಇದೀಗ ಕಾರಣ ಸಿಕ್ಕಿದೆ. ಉಡುಪಿಯ ಭೌತ ಶಾಸ್ತ್ರಜ್ಞ ಡಾ. ಎ.ಪಿ ಭಟ್ ಸಂಶೋಧನೆ ನಡೆಸಿ, ಸ್ಥಳ ವಿಮರ್ಶೆ ಮಾಡಿದ್ದಾರೆ. ಭೂಮಿಯ ಮೇಲೆ ನಿರ್ವಾತ ಪ್ರದೇಶ ಸೃಷ್ಟಿಯಾಗುವುದೇ ಸುಂಟರಗಾಳಿಯ ಜನ್ಮಕ್ಕೆ ಕಾರಣ ಎಂದು ತಿಳಿಸಿದ್ದಾರೆ.
Advertisement
Advertisement
ಈ ವಿಚಾರದ ಬಗ್ಗೆ ಮಾತನಾಡಿರುವ ಡಾ. ಎ.ಪಿ ಭಟ್, ಕಾರ್ಕಳ ಎನ್ನುವ ತಾಲೂಕಿನ ಹೆಸರಿನ ಅರ್ಥ ಕಪ್ಪು ಕಲ್ಲುಗಳ ಊರು ಎಂದು. ಕಾರ್ಕಳದಲ್ಲಿ ಯಾವ ಭಾಗಕ್ಕೆ ಹೋದರೂ ಅಲ್ಲಿ ಕರಿ ಕಲ್ಲುಗಳೇ ಕಾಣಸಿಗುತ್ತವೆ. ಕಳೆದ ಐದಾರು ದಿನದಿಂದ ಕಾರ್ಕಳದಲ್ಲಿ ನಿರಂತರವಾಗಿ ಮಳೆ ಬೀಳುತ್ತಿದೆ. ಮಳೆ ನಿಂತು ಎರಡು ದಿನ ವಿಪರೀತ ಬಿಸಿಲು. ಬಿಸಿಲಿಗೆ ಬಂಡೆಗಳೆಲ್ಲಾ ಕಾದು ಕೆಂಡವಾಗಿದೆ. ಸುತ್ತಮುತ್ತ ಕಾಡಿನ ವಾತಾವರಣ ತಂಪಿತ್ತು. ಅದ್ದರಿಂದ ಬಿಸಿಗಾಳಿಯ ಜೊತೆ ತಂಗಾಳಿ ಸೇರಿ ಖಾಲಿ ಜಾಗ ಅಂದ್ರೆ ನಿರ್ವಾತ ಪ್ರದೇಶ ಸೃಷ್ಟಿಯಾಗಿತ್ತು. ಈ ಸಂದರ್ಭ ಸುಂಟರಗಾಳಿ ಹುಟ್ಟಿ ಸುರುಳಿಯಾಗುತ್ತದೆ. ಗಾಳಿ ಶಕ್ತಿ ಪಡೆದು ಸುತ್ತೆಲ್ಲಾ ಬೀಸುತ್ತದೆ. ಸಿಕ್ಕ ಸಿಕ್ಕ ವಸ್ತುಗಳನ್ನು ಸುತ್ತಿ ಬಿಸಾಕುತ್ತದೆ. ಕಾರ್ಕಳ ನಕ್ರೆಕಲ್ಲು ಎಂಬಲ್ಲಿ ಸುಂಟರಗಾಳಿ ಹುಟ್ಟಿದೆ. ಮುಂದೆ ಅದು ಕಾರ್ಕಳ, ಪೆರ್ವಾಜೆಯಾಗಿ ಮಾಳ ಗ್ರಾಮದ ಕಡೆ ಹಾರಿದೆ. ಗದ್ದೆ, ನದಿ, ಕೆರೆಯ ನೀರನ್ನು ಬಾನಿಗೆ ಚಿಮ್ಮಿಸಿದೆ ಎಂದು ಹೇಳಿದ್ದಾರೆ.
Advertisement
Advertisement
ಸಮುದ್ರದಲ್ಲಿ ಸುಂಟರಗಾಳಿ ಸಾಮಾನ್ಯ. ಮೈದಾನಗಳಲ್ಲಿ ಬೇಸಿಗೆ ಸುಳಿಗಾಳಿ ನೋಡಿದ್ದೇವೆ. ಆದರೆ ಇಲ್ಲಿ ಮಳೆಗಾಲದ ಸುಂಟರಗಾಳಿ ಅಲ್ಲೋಲ ಕಲ್ಲೋಲ ಮಾಡಿದೆ. ಕಾಡು ನಾಶದಿಂದ ಇಷ್ಟೆಲ್ಲಾ ಅವಾಂತರ ಆಗಿರೋದು ಸತ್ಯ. ಗಿಡ ನೆಟ್ಟು ಕಾಡನ್ನು ವೃದ್ಧಿಮಾಡದಿದ್ದರೆ. ಈಗ ಕಾರ್ಕಳಕ್ಕಾದ ಗತಿ ಮುಂದೊಂದು ದಿನ ನಮ್ಮ ನಿಮ್ಮ ಊರಿಗೆ ಬಂದರೂ ಆಶ್ಚರ್ಯವಿಲ್ಲ ಎಂದು ಎ.ಪಿ. ಭಟ್ ಹೇಳಿದ್ದಾರೆ.