– ಮುಂದಿನ ಶೈಕ್ಷಣಿಕ ವರ್ಷದಿಂದ ಬ್ಯಾಗ್ ಲೆಸ್ ಡೇ
ಉಡುಪಿ: ಜಿಲ್ಲೆ ಕುಂದಾಪುರ ತಾಲೂಕಿನ ಮಣೂರು ಸರಕಾರಿ ಶಾಲೆಯ ನೂತನ ಕಟ್ಟಡ ಮತ್ತು ಸಭಾಂಗಣವನ್ನು ಉದ್ಘಾಟಿಸಲು ಶಿಕ್ಷಣ ಸಚಿವ ಸುರೇಶ್ ಕುಮಾರ್ ಬೆಂಗಳೂರಿಂದ ಬಂದಿದ್ದರು. ರಾಜಧಾನಿಯಿಂದ ಬಂದರೂ ಕಾರ್ಯಕ್ರಮ ಉದ್ಘಾಟನೆ ಮಾಡಿದ್ದು ಮಾತ್ರ ಸರಕಾರಿ ಶಾಲೆಯ ಮಕ್ಕಳು.
ಸಚಿವರು ಸರಕಾರಿ ಶಾಲೆಯ ಮಕ್ಕಳ ಕೈಯಲ್ಲೇ ಪ್ರಮುಖ ಕಾರ್ಯಕ್ರಮ, ಕೊಠಡಿಗಳು, ಸಭಾಂಗಣವನ್ನು ಉದ್ಘಾಟನೆ ಮಾಡಿಸಿದರು. ಮಕ್ಕಳಿಗಾಗಿರುವ ಶಾಲೆಯನ್ನು ಮಕ್ಕಳೇ ಉದ್ಘಾಟಿಸಿದ್ದಾರೆ ಎಂದು ಸುರೇಶ್ ಕುಮಾರ್ ಹೇಳಿದರು. ಸಚಿವರ ಕ್ರಮಕ್ಕೆ ಪೋಷಕರು, ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Advertisement
Advertisement
ಮುಂದಿನ ಶೈಕ್ಷಣಿಕ ವರ್ಷದಿಂದ ಇಲಾಖೆ ಮೂಲಕ ಶಾಲೆಗಳಿಗೆ ಸಂಬಂಧಿಸಿದಂತೆ ನಾಲ್ಕು ನಿರ್ಣಯ ತೆಗೆದುಕೊಂಡಿದ್ದೇವೆ. ವಾರಕ್ಕೊಂದು ದಿನ ಪಠ್ಯೇತರ ಚಟುವಟಿಕೆಗಳು ಕಡ್ಡಾಯ ಮಾಡುತ್ತೇವೆ. ಪಠ್ಯಪುಸ್ತಕ ಬಿಟ್ಟು ಏನಾದರೂ ಮಾಹಿತಿ, ಚಟುವಟಿಕೆ ಮಕ್ಕಳಿಗೆ ಶಿಕ್ಷಕರು, ಶಿಕ್ಷಕೇತರರಿಂದ ಸಿಗುವಂತಾಗಲಿದೆ. ಇದಕ್ಕೆ ಈಗಾಗಲೇ ರೂಪುರೇಷೆ ನಿರ್ಮಾಣ ಮಾಡಿದ್ದೇವೆ ಎಂದರು.
Advertisement
2020 ಶೈಕ್ಷಣಿಕ ವರ್ಷದಿಂದ ಸ್ಕೂಲ್ ಬ್ಯಾಗ್ ಹೊರೆ ಕಡಿಮೆಯಾಗಲಿದೆ. ಸರಕಾರಿ ಮತ್ತು ಖಾಸಗಿ ಶಾಲೆಗಳಿಗೂ ವಿಸ್ತರಣೆ ಮಾಡುತ್ತೇವೆ. ಮಕ್ಕಳ ಶಿಕ್ಷಣ ಎಷ್ಟು ಮುಖ್ಯವೋ ಅದಕ್ಕಿಂತ ಅವರ ಆರೋಗ್ಯವೂ ಮುಖ್ಯ. ಖಂಡಿತಾ ಮುಂದಿನ ವರ್ಷಕ್ಕೆ ಪುಸ್ತಕಗಳ ಸಂಖ್ಯೆಯಲ್ಲಿ ಇಳಿಮುಖವಾಗಲಿದೆ ಎಂದರು.
Advertisement
ಶಿಕ್ಷಕರಲ್ಲದ ವಿಷಯ ತಜ್ಞರು ಮಕ್ಕಳಿಗೆ ಪಾಠ ಮಾಡುವ ಅವಕಾಶ ಕಲ್ಪಿಸಲು ಆ್ಯಪ್ ಮಾಡಿರುವುದಾಗಿ ಸುರೇಶ್ ಕುಮಾರ್ ಹೇಳಿದರು. ರಜೆಯ ದಿನ ಹತ್ತಿರದ ಸರ್ಕಾರಿ ಶಾಲೆಗೆ ತೆರಳಿ ಅಲ್ಲಿ ಇಂಗ್ಲೀಷ್, ಹಿಂದಿ ಮತ್ತಿತರ ಯಾವುದಾದರೂ ಸಾಮಾನ್ಯ ಜ್ಞಾನದ ವಿಚಾರದಲ್ಲಿ ಪಾಠ ಮಾಡುವ ಅವಕಾಶ ಜನಸಾಮಾನ್ಯರಿಗೆ ಕಲ್ಪಿಸಲಾಗುವುದು. ಶಿಕ್ಷಕರು, ಪೋಷಕರು ಮತ್ತು ಮಕ್ಕಳ ಉಪಯೋಗಕ್ಕೆ ಮಾರ್ಚ್ ತಿಂಗಳಿನಲ್ಲಿ ಸಹಾಯವಾಣಿ ತೆರೆಯುತ್ತೇವೆ. ಅವರ ಸಮಸ್ಯೆ ಹಾಗೂ ಗೊಂದಲಗಳನ್ನು ವಿಚಾರಣೆ ಮಾಡೋದು ನಮ್ಮ ಉದ್ದೇಶ ಎಂದರು.