– ಚನ್ನಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ಪ್ರಕರಣದಲ್ಲಿ ರಾಜ್ಯಪಾಲರ ಮಧ್ಯ ಪ್ರವೇಶಕ್ಕೆ ವಿಜಯೇಂದ್ರ ಮನವಿ
– ಗ್ಯಾಂಗ್‌ಸ್ಟರ್‌ಗಳನ್ನ ಎಷ್ಟು ಗಂಟೆಯೊಳಗೆ ಬಲಿ ಹಾಕುತ್ತೀರಿ: ಸಿಎಂಗೆ ಸುನಿಲ್ ಕುಮಾರ್ ಪ್ರಶ್ನೆ
ಉಡುಪಿ: ಇಲ್ಲಿನ ನಡುರಸ್ತೆಯಲ್ಲಿ ಗ್ಯಾಂಗ್ ವಾರ್ ಮತ್ತು ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ದಾಂಧಲೆ ಪ್ರಕರಣ ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷ ನಾಯಕರು ಕಿಡಿಕಾರಿದ್ದಾರೆ.
Advertisement
ಪ್ರಕರಣ ಸಂಬಂಧ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಮಾಜಿ ಸಚಿವ ಸುನಿಲ್ ಕುಮಾರ್ (Sunil Kumar), ಶಿಕ್ಷಣ ಕ್ಷೇತ್ರ ಮಣಿಪಾಲದಲ್ಲಿ ರಾಜಾರೋಶವಾಗಿ ರೌಡಿಗಳು ಗ್ಯಾಂಗ್ ವಾರ್ ನಡೆಸಿದ್ದಾರೆ. ಸಿನಿಮೀಯ ರೀತಿಯಲ್ಲಿ ಕಾರುಗಳನ್ನು ಬಳಸಿ ಕಾದಾಡಿದ್ದಾರೆ. ಕ್ರಿಮಿನಲ್‌ಗಳಿಗೆ ಆಳುವ ಸರ್ಕಾರದ ಕಾನೂನಿನ ಭಯ ಇಲ್ಲದಂತಾಗಿದೆ ಎಂಬುದಕ್ಕೆ ಇದೊಂದು ಜ್ವಲಂತ ಉದಾಹರಣೆ. ಉಡುಪಿ, ದಕ್ಷಿಣ ಕನ್ನಡದಂಥ ಜಿಲ್ಲೆಗಳಲ್ಲಿ ಮಾತ್ರವಲ್ಲ ಇಡೀ ರಾಜ್ಯದಲ್ಲಿ ಈಗ ಕಾನೂನು ಸುವ್ಯವಸ್ಥೆ ಕುಸಿದು ಬಿದ್ದಿದೆ. ಪೊಲೀಸ್ ಠಾಣೆಗಳನ್ನು ರಾಜಕೀಯ ದ್ವೇಷ ತೀರಿಸಿಕೊಳ್ಳುವ ಅಸ್ತ್ರವಾಗಿ ಬಳಸಿಕೊಳ್ಳುವುದಕ್ಕೆ ಕಾಂಗ್ರೆಸ್ ಸರ್ಕಾರ ಮುಂದಾಗಿದ್ದರ ಪರಿಣಾಮವಾಗಿ ಇಂದು ಕ್ರಿಮಿನಲ್‌ಗಳು ವಿಜೃಂಭಿಸುವಂತಾಗಿದೆ. ಇದು ಗೃಹ ಇಲಾಖೆ ಹಾಗೂ ಗೃಹ ಸಚಿವರ ವೈಫಲ್ಯಕ್ಕೆ ಹಿಡಿದ ಕೈಗನ್ನಡಿ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಉಡುಪಿಯಲ್ಲಿ ಗರುಡ ಗ್ಯಾಂಗ್ ನಡುವೆ ವಾರ್- ಕಾರು ಗುದ್ದಿಸಿ ಯುವಕನ ಬೀಳಿಸಿದ ಕಿರಾತಕ
Advertisement
Advertisement
ಸಿದ್ದರಾಮಯ್ಯನವರೇ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿರುವ ನಿಮಗೆ ಸ್ವಾಗತ. ಆದರೆ ಇಲ್ಲಿಂದ ಹೊರಡುವುದಕ್ಕೆ ಮೊದಲು ಕೆಲ ಪ್ರಶ್ನೆಗಳಿಗೆ ಉತ್ತರಿಸಿ ಹೋಗಿ. ಕಾನೂನು-ಸುವ್ಯವಸ್ಥೆ ಕಾಪಾಡಲಾರದ ಗೃಹ ಸಚಿವರಿಂದ ಎಂದು ರಾಜೀನಾಮೆ ಪಡೆಯುತ್ತೀರಿ? ಪೊಲೀಸ್ ಠಾಣೆಯನ್ನು ಆಳುವ ಸರ್ಕಾರದ ಆಳಾಗಿಸಿಕೊಂಡಿರುವುದಕ್ಕೆ ಎಂದು ಮುಕ್ತಾಯ ಹಾಡುತ್ತೀರಿ? ಕ್ರಿಮಿನಲ್‌ಗಳಿಗೂ ನಿಮ್ಮ ಸರ್ಕಾರಕ್ಕೂ ಒಳ ಒಪ್ಪಂದ ಏರ್ಪಟ್ಟಿದ್ದರೆ ಮಾಸಿಕ ಹಫ್ತಾ ಎಷ್ಟು ನಿಗದಿ ಮಾಡಿದ್ದೀರಿ? ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಪೊಲೀಸರ ಕೈ ಕಟ್ಟಿ ಹಾಕಿದ್ದೀರಾ? ಜನರ ಶಾಂತಿ-ನೆಮ್ಮದಿ ಕಾಪಾಡಲಾರದ ಸರ್ಕಾರ ಅಧಿಕಾರದಲ್ಲಿದ್ದು ಪ್ರಯೋಜನವುಂಟೇ? ಕ್ರಿಮಿನಲ್‌ಗಳ ಅಟ್ಟಹಾಸ ನಿಲ್ಲಿಸದ ಪೊಲೀಸ್ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲು ಭಯವೇಕೆ ಎಂದು ಪ್ರಶ್ನಿಸಿದ್ದಾರೆ.
Advertisement
ಸಿದ್ದರಾಮಯ್ಯನವರೇ ನಿಮಗೊಂದು ನೇರ ಸವಾಲು. ಈ ಘಟನೆಗೆ ಕಾರಣವಾದ ಗ್ಯಾಂಗ್‌ಸ್ಟಾರ್‌ಗಳನ್ನು ಎಷ್ಟು ಗಂಟೆಯೊಳಗೆ ಬಲಿ ಹಾಕುತ್ತೀರಿ? ಸಣ್ಣ ಕಾರಣಕ್ಕೆ ಶಾಸಕರನ್ನು ಬಂದಿಸಲು ದಂಡು ಕಳುಹಿಸುವ ನಿಮ್ಮ ಸರ್ಕಾರಕ್ಕೆ ಪುಂಡರನ್ನು ಬಂದಿಸುವ ಗಂಡೆದೆ ಇಲ್ಲವೇ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಚನ್ನಗಿರಿಯಲ್ಲಿ ಲಾಕಪ್ ಡೆತ್ ಆರೋಪ- ಕುಟುಂಬಸ್ಥರಿಂದ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ
ಚನ್ನಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ಪ್ರಕರಣದಲ್ಲಿ ರಾಜ್ಯಪಾಲರ ಮಧ್ಯಪ್ರವೇಶಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಆಗ್ರಹಿಸಿದ್ದಾರೆ. ರಾಜ್ಯದಲ್ಲಿ ಪೋಲೀಸರು ನಿಷ್ಪಕ್ಷಪಾತವಾಗಿ ಕರ್ತವ್ಯ ನಿರ್ವಹಿಸಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಪರಿಣಾಮವಾಗಿ ರಾಜ್ಯವನ್ನು ಉಗ್ರರು ಅಡಗುತಾಣವನ್ನಾಗಿ ಮಾಡಿಕೊಂಡಿದ್ದಾರೆ. ಮಾಫಿಯಾಗಳು-ರೌಡಿಗಳ ಅಟ್ಟಹಾಸ ಮೇರೆ ಮೀರಿದೆ, ಅಕ್ರಮ ರೇವ್ ಪಾರ್ಟಿಗಳು ಎಗ್ಗಿಲ್ಲದೆ ನಡೆಯುತ್ತಿವೆ. ಕ್ರಿಮಿನಲ್‌ಗಳನ್ನು ಬಂಧಿಸಲು ಹೊರಟರೆ ಮತೀಯ ಅಲ್ಪಸಂಖ್ಯಾತರ ಹೆಸರಿನಲ್ಲಿ ಪೋಲಿಸ್ ಠಾಣೆಗಳಿಗೆ ಬೆಂಕಿಹಾಕಲು ಈ ನೆಲದ ಕಾನೂನಿನ ಬಗ್ಗೆ ಕಿಂಚಿತ್ತು ಭಯವಿಲ್ಲದ ವಿಧ್ವಂಸಕ ಶಕ್ತಿಗಳು ಗುಂಪುಗೂಡಿ ಪೋಲಿಸ್ ಠಾಣೆಗಳಿಗೇ ದಾಳಿ ಮಾಡಿ ಬೆಂಕಿ ಹಚ್ಚಲು ಮುಂದಾಗುತ್ತಿವೆ. ಇದಕ್ಕೆಲ್ಲ ರಾಜ್ಯವಾಳುತ್ತಿರುವ ಕಾಂಗ್ರೆಸ್ ಸರ್ಕಾರವೇ ಕಾರಣವಾಗಿದೆ. ಮುಸ್ಲಿಂ ಮತ ಓಲೈಕೆ ಈ ರಾಜ್ಯವನ್ನು ಅರಾಜಕತೆಯತ್ತ ಕೊಂಡೊಯ್ಯುತ್ತಿದೆ ಎಂದು ಆರೋಪಿಸಿದ್ದಾರೆ.
ರಾಮೇಶ್ವರಂ ಕೆಫೆ ಬಾಂಬ್ ಪ್ರಕರಣದಲ್ಲಿ ಬಂಧಿಯಾಗುತ್ತಿರುವ ಭಯೋತ್ಪಾದಕ ಶಕ್ತಿಗಳು ಈ ಘಟನೆಗಳ ಹಿಂದಿರುವ ಸಾಧ್ಯತೆ ತಳ್ಳಿಹಾಕುವಂತಿಲ್ಲ. ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಕಲ್ಪಿಸಬೇಕಾದ ಪೊಲೀಸರು ಹಾಗೂ ಪೊಲೀಸ್ ಠಾಣೆಗೇ ರಕ್ಷಣೆ ಇಲ್ಲದ ಪರಿಸ್ಥಿತಿ ಉದ್ಭವಿಸಿದೇ ಎಂದರೆ ಪರಿಸ್ಥಿತಿ ಯಾವ ಹಂತ ತಲುಪುತ್ತಿದೆ ಎಂದು ಅಂದಾಜಿಸಬಹುದಾಗಿದೆ. ಅಂದು ಡಿಜೆ ಹಳ್ಳಿ, ಮೊನ್ನೆ ಉಡುಪಿ, ಇಂದು ದಾವಣಗೆರೆಯ ಚೆನ್ನಗಿರಿಯಲ್ಲಿ ಪೊಲೀಸ್ ಠಾಣೆಗಳಿಗೆ ನುಗ್ಗಿ ಧ್ವಂಸಗೊಳಿಸುವ ಮಟ್ಟಿಗೆ ದಾಳಿ ನಡೆಸುವಷ್ಟು ಮೂಲಭೂತವಾದ ಶಕ್ತಿಗಳು ಸಂಘಟಿತರಾಗಿದ್ದಾರೆ ಎಂದರೆ ನಾವು ಯಾವ ರಾಜ್ಯದಲ್ಲಿದ್ದೇವೆ? ಯಾವ ಸಮಾಜದಲ್ಲಿ ಇದ್ದೇವೆ ಎನ್ನುವ ಆತಂಕ ಕಾಡುತ್ತಿದೆ.
ಬಿಹಾರದಲ್ಲಿ ಲಾಲು ಪ್ರಸಾದ್ ಯಾದವ್ ಆಡಳಿತ ನಡೆಸಿದ ದಿನಗಳು ಕರ್ನಾಟಕದಲ್ಲಿ ಮತ್ತೆ ತಲೆ ಎತ್ತುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ‘ಸರ್ವ ಜನಾಂಗದ ಶಾಂತಿಯ ತೋಟ’ ಎಂದು ಕರೆದ ಕುವೆಂಪು ಕಲ್ಪನೆಯನ್ನು ಕೊಲ್ಲಲು ಹೊರಟಿರುವ ಕಾಂಗ್ರೆಸ್ ಸರ್ಕಾರ ಕರುನಾಡನ್ನು ಅಭದ್ರತೆಯ ಅಶಾಂತಿಯ ಕೊಂಪೆ ಮಾಡಲು ಹೊರಟಿದೆ. ಪೊಲೀಸರ ನೈತಿಕ ಶಕ್ತಿ ಸಂಪೂರ್ಣವಾಗಿ ಕುಗ್ಗಿಸುವ ವ್ಯವಸ್ಥೆಯ ಜಾಲ ಕೆಲಸ ಮಾಡುತ್ತಿದೆ. ಪೊಲೀಸರು ಹಾಗೂ ಪೊಲೀಸ್ ಠಾಣೆಗಳೇ ರಕ್ಷಣೆಗೆ ಮೊರೆ ಇಡುವ ಪರಿಸ್ಥಿತಿ ಇರುವಾಗ ರಕ್ಷಣೆಗಾಗಿ ಜನರು ಯಾರ ಮೊರೆ ಹೋಗಬೇಕು ಎನ್ನುವುದು ತಿಳಿಯದಾಗಿದೆ. ಇದನ್ನೂ ಓದಿ: ಮಗನ ಸಾವಿನ ಬಗ್ಗೆ ನಮಗೆ ಯಾವುದೇ ಅನುಮಾನವಿಲ್ಲ: ಆದಿಲ್ ತಂದೆ ಸ್ಪಷ್ಟನೆ
‘ಬೇಲಿಯೇ ಎದ್ದು ಹೊಲ ಮೇಯ್ದಂತೆ’ ಪೊಲೀಸ್ ಬೇಲಿಯನ್ನೇ ಅಸ್ಥಿರಗೊಳಿಸಲು ಹೊರಟಿರುವ ಕಾಂಗ್ರೆಸ್ ಸರ್ಕಾರ ಮೂಲಭೂತವಾದಿ ಅಲ್ಪಸಂಖ್ಯಾತರಿಗಾಗಿಯೇ ನಾವು ಆಡಳಿತ ನಡೆಸುವುದು, ಅವರ ಪರವಾಗಿ ನಿಲ್ಲುವುದು ಹಾಗೂ ಅವರ ಚಟುವಟಿಕೆಗಳಿಗೆ ಮುಕ್ತ ಸ್ವಾತಂತ್ರ್ಯ ಕಲ್ಪಿಸುವುದೇ ತಮ್ಮ ಧ್ಯೇಯ ಎಂದು ಘೋಷಿಸಿಬಿಡಲಿ. ಆಗ ಈ ಸರ್ಕಾರವನ್ನು ನೆಚ್ಚಿಕೊಳ್ಳದೇ ಜನ ಸ್ವಯಂ ರಕ್ಷಣೆ ಮಾಡಿಕೊಳ್ಳುತ್ತಾರೆ. ರಾಜ್ಯದ ಸದ್ಯದ ಬೆಳವಣಿಗೆಗಳು ಜನತೆಯ ಆತಂಕ ದಿನದಿಂದ ದಿನಕ್ಕೆ ಹೆಚ್ಚಿಸುತ್ತಿದೆ. ಗೌರವಾನ್ವಿತ ರಾಜ್ಯಪಾಲರು ಈ ಕೂಡಲೇ ಮಧ್ಯ ಪ್ರವೇಶಿಸಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುರಿತು ಸರ್ಕಾರದಿಂದ ವರದಿ ಪಡೆಯಲಿ. ಅಂತೆಯೇ ಪೊಲೀಸ್ ಠಾಣೆಗಳಿಗೆ ದಾಳಿ ಮಾಡುತ್ತಿರುವ ಪರಿಸ್ಥಿತಿಯ ಹಿನ್ನೆಲೆಯಲ್ಲಿ ರಾಜ್ಯದ ಕಾನೂನು ಸುವ್ಯವಸ್ಥೆ ಸರಿ ದಾರಿಗೆ ಬರಲು ರಾಜ್ಯಪಾಲರು ಮಧ್ಯಪ್ರವೇಶಿಸುವಂತೆ ಮನವಿ ಮಾಡಿದ್ದಾರೆ.