ಉಡುಪಿ: ಜಿಲ್ಲೆಯ ಪಡುಬಿದ್ರಿ ಪ್ರಸಿದ್ಧ ಬಾಲ ಗಣಪತಿ ಗಣೇಶೋತ್ಸವ ಶೋಭಾಯಾತ್ರೆಯ ಸಂದರ್ಭದಲ್ಲಿ ಹಿಂದೂ ಸಂಘಟನೆಯ ಎರಡು ತಂಡಗಳ ಮಧ್ಯೆ ಹೊಡೆದಾಟ ನಡೆದಿದೆ.
ಜಗಳದಲ್ಲಿ ಕೃಷ್ಣ ಅವರ ತಲೆಗೆ ಕಲ್ಲೇಟು ತಗುಲಿದ್ದು, ಗಾಯಾಳುವನ್ನು ಪಡುಬಿದ್ರಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು ಶೋಭಾಯಾತ್ರೆ ಮೂಲಕ ಗಣೇಶನನ್ನು ವಿಸರ್ಜಿಸಲಾಗುತಿತ್ತು. ಈ ವೇಳೆ ನಾಸಿಕ್ ಬ್ಯಾಂಡ್ ಮತ್ತು ಚೆಂಡೆಯ ತಂಡಗಳ ನಡುವೆ ತಿಕ್ಕಾಟ ನಡೆದಿದೆ. ಜಗಳದಲ್ಲಿ ಕಲ್ಲು ತೂರಾಟವೂ ನಡೆದಿದ್ದು, ಈ ಹಿನ್ನೆಲೆ ಕೃಷ್ಣ ಅವರ ತಲೆಗೆ ಗಾಯವಾಗಿದೆ.
Advertisement
Advertisement
ನಾಸಿಕ್ ಬ್ಯಾಂಡ್ ತಂಡದ ಸದ್ದು ಜೋರಿತ್ತು. ಜೊತೆಗೆ ಯುವಕರ ಕುಣಿತ ಮೆರವಣಿಗೆಯಲ್ಲಿ ಗದ್ದಲ ಎಬ್ಬಿಸಿತ್ತು. ಈ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ದೊಡ್ಡ ಜಗಳವಾಗಿದೆ. ಸಾವಿರಾರು ಜನ ಜಮಾಯಿಸಿದ್ದ ಮೆರವಣಿಗೆಯಲ್ಲಿ ಗಲಾಟೆ ನಡೆದಿದ್ದು, ಪೊಲೀಸರು ಮಧ್ಯಪ್ರವೇಶ ಮಾಡಿದರೂ ಗಲಾಟೆ ತಣ್ಣಗಾಗಿಲ್ಲ. ಈ ಸಂದರ್ಭ ನಡೆದ ಘರ್ಷಣೆಯಲ್ಲಿ ಕೃಷ್ಣ ಅವರ ತಲೆಗೆ ಕಲ್ಲೇಟು ಬಿದ್ದಿದೆ. ಅಲ್ಲದೆ ಪೊಲೀಸ್ ಅಧಿಕಾರಿಗಳನ್ನೇ ಹಿಂದೂಪರ ಸಂಘಟನೆ ಯುವಕರು ಎಳೆದಾಡಿದ್ದಾರೆ. ಈ ಸಂಬಂಧ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement
ಬಾಲಗಣಪತಿ ಶೋಭಾಯಾತ್ರೆಯಲ್ಲಿ ಸಹಸ್ರಾರು ಮಂದಿ ಭಕ್ತರು ಭಾಗವಹಿಸಿದ್ದರು. ಹೀಗಾಗಿ ಮೆರವಣಿಗೆ ಸಂದರ್ಭ ಹೆದ್ದಾರಿಯನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿತ್ತು. ಇಷ್ಟಾದರೂ ಸಹ ಓರ್ವ ಎಸ್‍ಐ, ನಾಲ್ವರು ಪೇದೆಗಳು ಶೋಭಾಯಾತ್ರೆಯನ್ನು ನಿಯಂತ್ರಿಸುವಲ್ಲಿ ಹೈರಾಣಾಗಿ ಹೋಗಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.
Advertisement
ಗಣೇಶ ಚತುರ್ಥಿ ಅಂಗವಾಗಿ ಪಡುಬಿದ್ರೆಯಲ್ಲಿ ಗಣಪತಿ ಕೂರಿಸಲಾಗಿತ್ತು. ಒಂದೂವರೆ ತಿಂಗಳು ಈ ಗಣಪತಿಯನ್ನು ಕೂರಿಸಲಾಗುತ್ತದೆ. ಒಂದೂವರೆ ತಿಂಗಳುಗಳ ಕಾಲ ವಿಘ್ನ ನಿವಾರಕನಿಗೆ ಪೂಜೆ ಸಲ್ಲಿಸಲಾಗುತ್ತದೆ. ನಂತರ ವೈಭವದ ಶೋಭಾಯಾತ್ರೆ ಮೂಲಕ ಗಣೇಶ ವಿಸರ್ಜನೆಯನ್ನು ಮಾಡಲಾಗುತ್ತದೆ.