ಉಡುಪಿ: ಸರ್ಕಾರ ಮೀನುಗಾರರಿಗೆ ಕೊಟ್ಟ ವಿನಾಯಿತಿ ಉಡುಪಿಯಲ್ಲಿ ದುರುಪಯೋಗವಾಗುತ್ತಿದೆ. ಬೈಂದೂರಲ್ಲಿ ಮೀನುಗಾರರು ಮತ್ತು ಸಾರ್ವಜನಿಕರು ಕಾನೂನನ್ನು ಗಾಳಿಗೆ ತೂರಿದ್ದಾರೆ.
ದೇಶಾದ್ಯಂತ ಕೊರೊನಾ ಎಮರ್ಜೆನ್ಸಿ ಇದ್ದರೂ ರಾಜ್ಯ ಮತ್ತು ಕೇಂದ್ರ ಸರ್ಕಾರ ಮೀನುಗಾರರಿಗೆ ಕಸುಬು ಮಾಡಲು ವಿನಾಯಿತಿಯನ್ನು ಕೊಟ್ಟಿತ್ತು. ನಾಡದೋಣಿ ಮೂಲಕ ಸಮುದ್ರಕ್ಕೆ ತೆರಳಿ ಕಸುಬು ಮಾಡಬಹುದು ಎಂದು ಆದೇಶ ನೀಡಲಾಗಿತ್ತು. ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಗಂಗೊಳ್ಳಿ ಮತ್ತು ತ್ರಾಸಿ ಭಾಗದಲ್ಲಿ ಈ ವಿನಾಯಿತಿಯನ್ನು ಕಡಲ ಮಕ್ಕಳು ದುರುಪಯೋಗ ಮಾಡಿಕೊಂಡಿದ್ದಾರೆ. ಸಾರ್ವಜನಿಕರು ಕೂಡ ಸಮುದ್ರ ತೀರಕ್ಕೆ ತೆರಳಿ ಮುಗಿಬಿದ್ದು ಮೀನು ಖರೀದಿ ಮಾಡುತ್ತಿದ್ದಾರೆ.
Advertisement
Advertisement
ಸಮುದ್ರ ತೀರದಲ್ಲಿ ಮೀನು ಮಾರಾಟ ಮಾಡುವಂತಿಲ್ಲ ಎಂಬುದು ಸರ್ಕಾರ ನಿಯಮ. ಸಾರ್ವಜನಿಕರು ಕಡಲ ತೀರಕ್ಕೆ ಹೋಗಬಾರದು. ಆದರೆ ಬೈಂದೂರಿನಲ್ಲಿ ಈ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತನ್ನು ಜನ ಕೊಡುತ್ತಿಲ್ಲ. ಕಂಟ್ರೋಲ್ ಮಾಡಬೇಕಾದ ಪೊಲೀಸರು ಅತ್ತ ಗಮನವನ್ನೇ ಕೊಡುತ್ತಿಲ್ಲ. ಸಾಮಾಜಿಕ ಶಿಸ್ತು ಕಾಪಾಡಬೇಕಾದ ಕಂದಾಯ ಇಲಾಖೆ ಅಧಿಕಾರಿಗಳು ಅಸಡ್ಡೆ ತೋರಿಸುತ್ತಿದ್ದಾರೆ.
Advertisement
Advertisement
ಕಡಲ ತಡಿಯಲ್ಲಿ, ಬಂದರಿನಲ್ಲಿ ಮೀನನ್ನು ಹರಾಜು ಹಾಕಬಾರದು. ಗ್ರಾಹಕರಿಗೆ ನೇರವಾಗಿ ಮನೆಗೆ ಮೀನನ್ನು ಸರಬರಾಜು ಮಾಡಬೇಕು. ಇಲ್ಲದಿದ್ದರೆ ಜನ ಮುಗಿ ಬೀಳದಂತೆ ಮಾರುಕಟ್ಟೆ ವ್ಯವಸ್ಥೆಯನ್ನು ಮಾಡಬೇಕು. ಇದು ಎರಡೂ ಕೂಡ ಬೈಂದೂರಿನಲ್ಲಿ ಪಾಲನೆ ಆಗುತ್ತಿಲ್ಲ. ಬೈಂದೂರಿನ ಶಾಸಕ ಸುಕುಮಾರ್ ಶೆಟ್ಟಿ ಏನು ಮಾಡುತ್ತಿದ್ದಾರೆ. ಮೀನುಗಾರಿಕಾ ಬಂದರು ಸಚಿವ ಕೋಟ ಶ್ರೀನಿವಾಸ ಪೂಜಾರಿ ಈ ಬಗ್ಗೆ ಗಮನ ಕೊಡಬೇಕಿದೆ ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.