ಉಡುಪಿ: ಈರುಳ್ಳಿ ಬೆಳೆದು ಸೂಕ್ತ ಬೆಲೆ ಸಿಗುತ್ತಿಲ್ಲವೆಂದು ವಿಡಿಯೋ ಮಾಡಿ ಅಳಲು ತೋಡಿಕೊಂಡಿದ್ದ ಚಿತ್ರದುರ್ಗದ ರೈತ ಮಹಿಳೆಗೆ ನ್ಯಾಯ ಸಿಕ್ಕಿದೆ. ಉಡುಪಿಯ ಪ್ರಗತಿಪರ ರೈತ ಸುರೇಶ್ ನಾಯ್ಕ್ ಅವರು ಕಷ್ಟದಲ್ಲಿರುವ ರೈತ ಕುಟುಂಬದ ನೋವಿಗೆ ಸ್ಪಂದಿಸಿದ್ದಾರೆ.
ರೈತ ಮಹಿಳೆ ಹಿರಿಯೂರಿನ ಕಾಟನಾಯಕಹಳ್ಳಿ ಗ್ರಾಮದ ವಸಂತ ಕುಮಾರಿ ಅವರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೇ ಫೋನ್ ಮಾಡಿ ಆತ್ಮಸ್ಥೈರ್ಯ ತುಂಬಿದ್ದು ರಾಜ್ಯಾದ್ಯಂತ ಸುದ್ದಿಯಾಗಿತ್ತು. ಈ ಮಹಿಳೆಯ ಕಷ್ಟಕ್ಕೆ ಉಡುಪಿಯ ರೈತ ಸುರೇಶ ನಾಯ್ಕ್ ಸ್ಪಂದಿಸಿ ಅವರು ಬೆಳೆದ ಈರುಳ್ಳಿಗೆ ಉತ್ತಮ ದರ ನೀಡಿ ಎಲ್ಲವನ್ನೂ ಖರೀದಿಸಿದ್ದಾರೆ.
Advertisement
Advertisement
ಪತಿ ಪ್ರತಾಪ್ ಜೊತೆಗೂಡಿ ವಸಂತಕುಮಾರಿ ಸುಮಾರು ಮೂರೂವರೆ ಎಕರೆಯಲ್ಲಿ ಈರುಳ್ಳಿ ಬೆಳೆದಿದ್ದರು. ಇವರಿಗೆ 130 ಚೀಲ ಇಳುವರಿ ಬಂದಿತ್ತು. ಆದರೆ ಕೊರೊನಾ ಲಾಕ್‍ಡೌನ್‍ನಿಂದ ಸರಿಯಾದ ಬೆಲೆ ಸಿಗದೆ ಮಾರಾಟ ಮಾಡಲಾಗದೆ ತಲೆ ಮೇಲೆ ಕೈ ಹೊತ್ತು ಕುಳಿತಿದ್ದರು. ಈ ಗ್ರಾಮದ ಬಹುತೇಕ ರೈತರು ಕೂಡ ಕಟಾವು ಮಾಡಿ ಬೆಲೆ ಸಿಗದೇ ಕಂಗಾಲಾಗಿದ್ದರು.
Advertisement
ಖರೀದಿದಾರರು ಕ್ವಿಂಟಾಲ್‍ಗೆ ಕೇವಲ 150ರಿಂದ 250 ರೂ.ಗೆ ಕೇಳುತ್ತಿದ್ದರು. ಅವರ ಗ್ರಾಮದ ರೈತನೊಬ್ಬ ತಾನು ಬೆಳೆದ 80 ಗೋಣಿ 40 ಚೀಲ ಕೊಳೆತಿತ್ತು. ಮಹಿಳೆ ರೈತರ ನಿಜವಾದ ತೊಂದರೆಯನ್ನು ವಿಡಿಯೋ ಮಾಡಿ ಹಂಚಿಕೊಂಡಿದ್ದರು. 70 ಸಾವಿರ ರೂ. ವೆಚ್ಚ ಮಾಡಿದ್ದೇವೆ. ಈಗ ನೋಡಿದರೆ 200 ರಿಂದ 300 ರೂ. ರೇಟಿಗೆ ಕೇಳುತ್ತಿದ್ದಾರೆ. ಹೀಗಾದರೆ ವೆಚ್ಚಕ್ಕೂ ಸಾಲುವುದಿಲ್ಲ. ಇದನ್ನೇ ನಂಬಿ ಸಾಲ ಸೂಲ ಮಾಡಿದ್ದೇವೆ. ಆದರೆ ಈ ಬೆಲೆಗೆ ನಮ್ಮ ಸಾಲ ಕೂಡ ತೀರುವುದಿಲ್ಲ. ರೈತರು ಆತ್ಮಹತ್ಯೆ ದಾರಿ ಹಿಡಿಯಬೇಕಾಗುತ್ತದೆ ಎಂದು ವಸಂತ ಕುಮಾರಿ ಒಂದು ವಿಡಿಯೋ ಮಾಡಿ ಬಿಟ್ಟಿದ್ದರು. ಈ ವಿಡಿಯೋ ಸಿಎಂ ಗಮನವನ್ನೂ ಸೆಳೆದಿತ್ತು.
Advertisement
ಸಿಎಂ ಸೂಚನೆಯಂತೆ ತೋಟಗಾರಿಕಾ ಅಧಿಕಾರಿಗಳು ಕ್ರಮ ಕೈಗೊಂಡು ಉಡುಪಿಯ ಸುರೇಶ್ ನಾಯ್ಕ್ ಅವರಲ್ಲಿ ಈರುಳ್ಳಿ ಮಾರಿಕೊಡುವಂತೆ ವಿನಂತಿಸಿದ್ದಾರೆ. ಸುರೇಶ್ ನಾಯ್ಕ್ ಅವರು ಲಾಕ್‍ಡೌನ್ ನಡುವೆಯೂ ಟನ್‍ಗಟ್ಟಲೆ ತರಕಾರಿ ಹಣ್ಣು ಹಂಪಲು ಮಾರಾಟ ಮಾಡಿ ಸೈ ಎನಿಸಿ ಕೊಂಡಿದ್ದರು. ಸುರೇಶ್ ನಾಯ್ಕ್ ಅವರು 172 ಚೀಲ ಈರುಳ್ಳಿಯನ್ನು ಚೀಲಕ್ಕೆ 550 ರೂಪಾಯಿಯಂತೆ ಕೊಟ್ಟು ಖರೀದಿಸಿದ್ದಾರೆ. ನೂರೈವತ್ತು ಇನ್ನೂರಕ್ಕೂ ಬೇಡವಾಗಿದ್ದ ಈರುಳ್ಳಿ 550 ರೂ.ಗೆ ಮಾರಾಟ ಆಗಿರೋದ್ರಿಂದ ರೈತ ಮಹಿಳೆಗೆ ನ್ಯಾಯ ಸಿಕ್ಕಂತಾಗಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಸುರೇಶ್ ನಾಯ್ಕ್ ಅವರು, ಮಾಧ್ಯಮಗಳಲ್ಲಿ ಈರುಳ್ಳಿ ಬೆಳೆದ ರೈತ ಮಹಿಳೆಯ ನೋವು ನೋಡಿ ಬಹಳ ಬೇಸರವಾಯಿತು. ಕೆವಿಕೆಯಿಂದ ಮಾಹಿತಿ ಕೂಡ ಬಂತು. ಒಬ್ಬ ರೈತರ ಈರುಳ್ಳಿ ಖರೀದಿಸಿದ್ದೇನೆ. ರಾಜ್ಯದ ಕೆಲವರು ಈ ರೀತಿ ಖರೀದಿ ಮಾಡಿದರೆ ಮಣ್ಣನ್ನು ನಂಬಿದವರಿಗೆ ಶಕ್ತಿ ಬರುತ್ತದೆ ಎಂದರು.
ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ಚೈತನ್ಯ ಕುಮಾರ್ ಮಾತನಾಡಿ, ಕೊರೋನಾ ಸಮಯದಲ್ಲಿ ಮಾರುಕಟ್ಟೆಯನ್ನು, ದಲ್ಲಾಳಿಗಳನ್ನು ನಂಬಿ ಕೂತರೆ ಕಷ್ಟ. ಸಂದಿಗ್ಧ ಸ್ಥಿತಿಯನ್ನು ನಿಭಾಯಿಸಬೇಕು. ಅದಕ್ಕೇನಾದರು ಹೊಸ ಹೊಸ ಐಡಿಯಾಗಳನ್ನು ಮಾಡಬೇಕು ಎಂದು ಹೇಳಿದರು.