ಉಡುಪಿ: ಮದ್ಯವ್ಯಸನಿಗಳ ಹಿತ ಕಾಯ್ದು ಸರ್ಕಾರದ ಬೊಕ್ಕಸ ತುಂಬಿಸುವುದು ಅಬಕಾರಿ ಇಲಾಖೆಯ ಕೆಲಸ. ಆದರೆ ಕೊರೊನಾ ವೈರಸ್‍ನಿಂದ ಭಾರತ ಲಾಕ್‍ಡೌನ್ ಆಗಿರುವ ಈ ಸಂದಿಗ್ಧ ಸ್ಥಿತಿಯಲ್ಲಿ ಉಡುಪಿ ಅಬಕಾರಿ ಇಲಾಖೆ ಜನ ಮೆಚ್ಚುವ ಕೆಲಸ ಮಾಡಿದೆ.
ಉಡುಪಿ ಅಬಕಾರಿ ಇಲಾಖೆ ಮಹಾಮಾರಿ ರೋಗದ ವಿರುದ್ಧ ಹೋರಾಡುತ್ತಿರುವ ವೈದ್ಯರು ಮತ್ತು ಸರ್ಕಾರಿ ಸಿಬ್ಬಂದಿಗಾಗಿ 5 ಸಾವಿರ ಲೀಟರ್ ಸ್ಯಾನಿಟೈಸರ್ ತಯಾರು ಮಾಡಿದೆ. ಪೈಲೆಟ್ ಪ್ರಾಜೆಕ್ಟ್ ಆಗಿ ಉಡುಪಿಯಲ್ಲಿ ತಯಾರು ಮಾಡಿದ ಸ್ಯಾನಿಟೈಸರ್ ರಾಜ್ಯಕ್ಕೆ ಮಾದರಿಯಾಗಿದೆ. ದೇಶಾದ್ಯಂತ ಕೊರೊನಾ ವೈರಸ್ ವಿಪರೀತ ಹರಡಲು ಶುರುವಾದಾಗ ಸ್ಯಾನಿಟೈಸರ್ ಮತ್ತು ಮಾಸ್‍ಗಾಗಿ ಸರ್ಕಾರದ ಮೇಲೆ ಹೆಚ್ಚು ಒತ್ತಡ ಹಾಕಲಾಗಿತ್ತು. ಕಂಪನಿಗಳಲ್ಲೂ ಸ್ಟಾಕ್ ಸಂಪೂರ್ಣ ಖಾಲಿಯಾಯಿತು. ರಾಜ್ಯ ಸಂಪೂರ್ಣ ಲಾಕ್‍ಡೌನ್ ಆದ ಸಂದರ್ಭ ಅಬಕಾರಿ ಇಲಾಖೆಗೆ ಪರ್ಯಾಯ ಜವಾಬ್ದಾರಿಯೊಂದನ್ನು ಹೊತ್ತುಕೊಂಡಿತು. ತನ್ನ ಇಲಾಖೆಯ ಮೂಲಕ ವೈದ್ಯಕೀಯ ಮತ್ತು ಸರ್ಕಾರಿ ಅಧಿಕಾರಿಗಳಿಗೆ ಸ್ಯಾನಿಟೈಸರ್ ತಯಾರು ಮಾಡಿಕೊಡಲು ಇಲಾಖೆ ಪಣ ತೊಟ್ಟಿತ್ತು.
Advertisement
Advertisement
ಕೊರೊನಾ ವಿರುದ್ಧ ಹೋರಾಡುವ ವೈದ್ಯರು, ನರ್ಸ್, ಆರೋಗ್ಯ ಸಹಾಯಕರು, ಕಂದಾಯ ಇಲಾಖೆ ಹೀಗೆ ಎಲ್ಲಾ ಸರ್ಕಾರಿ ಸಿಬ್ಬಂದಿಗೆ, ಪೊಲೀಸರಿಗೆ ಅಗತ್ಯವಾದ ಸ್ಯಾನಿಟೈಸರ್ ತಯಾರು ಮಾಡಿ ಉಡುಪಿಯ ಅಬಕಾರಿ ಇಲಾಖೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಉಡುಪಿ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಅಬಕಾರಿ ಇಲಾಖೆ ಔಷಧ ನಿಯಂತ್ರಣ ಇಲಾಖೆಯಿಂದ ಸ್ಯಾನಿಟೈಸರ್ ತಯಾರಿಸಲು ಐದು ವರ್ಷಕ್ಕೆ ಪರವಾನಗಿ ಪಡೆದುಕೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆ ಮತ್ತು ಉಡುಪಿ ಜಿಲ್ಲೆಗೆ ಈಗಾಗಲೇ 4,000 ಲೀಟರ್ ಸ್ಯಾನಿಟೈಸರನ್ನು ತಯಾರು ಮಾಡಿಕೊಟ್ಟಿದೆ. ದಕ್ಷಿಣ ಕನ್ನಡ ಜಿಲ್ಲೆಯಿಂದ ಇನ್ನೂ 2,000 ಲೀಟರ್ ಸ್ಯಾನಿಟೈಸರ್ ಗೆ ಬೇಡಿಕೆಯಿದೆ.
Advertisement
Advertisement
375 ml ಸ್ಯಾನಿಟೈಸರ್ ಬಾಟಲಿಗೆ ಮಾರುಕಟ್ಟೆಯಲ್ಲಿ 197.50 ರೂಪಾಯಿ ವೆಚ್ಚ ತಗುಲುತ್ತದೆ. ಆದರೆ ಅಬಕಾರಿ ಇಲಾಖೆ ಸ್ಯಾನಿಟೈಸರ್ ಬಾಟಲಿಗೆ 96 ರೂಪಾಯಿ ಮಾತ್ರ ನಿಗದಿ ಮಾಡಿದೆ. ಇದರ ಖರ್ಚನ್ನು ಉಡುಪಿ ಜಿಲ್ಲಾಡಳಿತವು ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ ಭರಿಸುತ್ತಿದೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅಬಕಾರಿ ಇಲಾಖೆಯ ಉಪ ಆಯುಕ್ತ ನಾಗೇಶ್ ಕುಮಾರ್, ಪಡುಬಿದ್ರೆಯ ಡಿಸ್ಟಿಲರಿ ಘಟಕದಲ್ಲಿ ನಾವು ಸ್ಯಾನಿಟೈಸರ್ ತಯಾರು ಮಾಡುತ್ತಿದ್ದೇವೆ. ಸರ್ಕಾರಿ ಇಲಾಖೆಗೆ ನಾವು ನಿಗದಿತ ಪ್ರಮಾಣದಲ್ಲಿ ಇದನ್ನು ಪೂರೈಕೆ ಮಾಡುತ್ತಿದ್ದೇವೆ. ಕಳ್ಳಬಟ್ಟಿ ಸಾರಾಯಿ ಮತ್ತು ಅಕ್ರಮ ಮದ್ಯ ಮಾರಾಟವನ್ನು ತಡೆಯುವ ಜವಾಬ್ದಾರಿ ಜೊತೆ ಸರ್ಕಾರಿ ಎಂಎಸ್‍ಐಎಲ್‍ಗೆ ರಕ್ಷಣೆ ಕೊಡುತ್ತಿದ್ದೇವೆ. ಈ ನಡುವೆ ಜನ ಹಿತವಾದ ಕೆಲಸ ಮಾಡುತ್ತಿದ್ದೇವೆ ಎಂಬ ತೃಪ್ತಿ ಇಲಾಖೆಗೆ ಇದೆ. ಯಾವುದೇ ಕಾರಣಕ್ಕೂ ಇದನ್ನು ದುರುಪಯೋಗ ಮಾಡಬಾರದು. ಸ್ಯಾನಿಟೈಸರ್ ನಲ್ಲಿ ವಿಷಕಾರಿ ಅಂಶಗಳು ಇವೆ ಎಂದು ಅವರು ಮಾಹಿತಿ ನೀಡಿದರು.