ಉಡುಪಿ: ಇಲ್ಲಿನ ಶ್ರೀಕೃಷ್ಣ ಮಠದ ಆನೆ ಸುಭದ್ರೆ ಬಿಸಿಲಿನಿಂದ ಮತ್ತು ಜನರ ಜಂಟಾಟದಿಂದ ಬೇಸತ್ತು ಹೋಗಿದೆಯಂತೆ. ಈ ಮೂಲಕ ಆನೆ ಕೃಷ್ಣನ ಸೇವೆಯಿಂದ ನಿವೃತ್ತಿಯಾಗಿ ಕಾಡು ಸೇರಲಿದೆ.
23 ವರ್ಷಗಳ ಕಾಲ ಉಡುಪಿಯಲ್ಲಿದ್ದ ಸುಭದ್ರೆ ಈಗ ಸಕ್ರೆಬೈಲು ಕಾಡು ಸೇರುವ ಖುಷಿಯಲ್ಲಿದೆ. ಮೂರು ವರ್ಷದ ಹಿಂದೆ ಕಾಣಿಯೂರು ಪರ್ಯಾಯ ಸಂದರ್ಭ ಕಾಲಿನ ಗಾಯಕ್ಕೊಳಗಾಗಿದ್ದ ಆನೆಯನ್ನು ಸಕ್ರೆಬೈಲಿನಲ್ಲಿ ಚಿಕಿತ್ಸೆಗೆ ಒಳಪಡಿಸಲಾಗಿತ್ತು. ಮಠದಿಂದ ಆನೆಯನ್ನು ಸುರಕ್ಷಿತವಾಗಿ ಕಳುಹಿಸಿಕೊಡಲಾಗಿತ್ತು. ಎರಡು ವರ್ಷ ಕಾಡಿನಲ್ಲೇ ಕಳೆದ ಆನೆ ಸಂಪೂರ್ಣ ಗುಣಮುಖವಾಗಿತ್ತು. ನಂತರ ಪುನಃ ಉಡುಪಿ ಕೃಷ್ಣಮಠಕ್ಕೆ ಆನೆಯನ್ನು ಕರೆತರಲಾಗಿತ್ತು. ಇಲ್ಲಿ ಆನೆಗೆ ಅನಾರೋಗ್ಯವಾದಾಗ ಮತ್ತೆ ಸಕ್ರೆಬೈಲಿಗೆ ಶಿಫ್ಟ್ ಮಾಡಲಾಗಿತ್ತು.
Advertisement
Advertisement
ಈಗಿನ ಪಲಿಮಾರು ಪರ್ಯಾಯ ಮಹೋತ್ಸವಕ್ಕೆ ಆನೆಯನ್ನು ಕಾಡಿನಿಂದ ಮತ್ತೆ ಕರೆತರಲಾಗಿತ್ತು. ಮೆರವಣಿಗೆ, ಎರಡು ವಾರಗಳ ಉತ್ಸವದಲ್ಲಿ ಭಾಗಿಯಾಗಿತ್ತು. ಉಡುಪಿಯಲ್ಲಿ 20 ದಿನ ಕಳೆದ ಸುಭದ್ರೆಗೆ ಮತ್ತೆ ಕಾಡು ನೆನಪಾಗುತ್ತಿದೆಯಂತೆ. ನಾಡು ಕಾಡುತ್ತಿದೆ, ಕಾಡನ್ನು ಆನೆ ಬಯಸುತ್ತಿದೆ ಅಂತ ಮಠದ ಮಾವುತರಿಗೂ ಅನ್ನಿಸಿದೆ. ಮಠದ ಅಧಿಕಾರಿಗಳು ಆನೆಯನ್ನು ಮತ್ತೆ ಚಿಕಿತ್ಸೆಗಾಗಿ ಸಕ್ರೆಬೈಲಿಗೆ ಕಳುಹಿಸಲು ನಿರ್ಧರಿಸಿದ್ದಾರೆ.
Advertisement
Advertisement
ಪಶುವೈದ್ಯರು ಮತ್ತು ವನ್ಯ ಜೀವಿ ಇಲಾಖೆ ಕೂಡಾ ಸುಭಧ್ರೆಯನ್ನು ಕಾಡಿಗೆ ಬಿಟ್ಟುಬರುವ ಚಿಂತನೆ ನಡೆಸಿದೆ. ಈ ವಾರದಲ್ಲಿ ಆನೆಯನ್ನು ಬಿಟ್ಟು ಕಳುಹಿಸುವುದಾಗಿ ಮಠ ಹೇಳಿದೆ. ಸುಭದ್ರ ಸಕ್ರೆಬೈಲು ಸೇರಿದ ನಂತರ ಬೇರೊಂದು ಆನೆಯನ್ನು ಮಠಕ್ಕೆ ತರಿಸುವ ಆಲೋಚನೆ ಮಠಕ್ಕೆ ಇದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಚಿಂತನೆ ನಡೆಸಲಾಗುವುದು ಎಂದು ಪರ್ಯಾಯ ಪಲಿಮಾರು ಮಠ ಹೇಳಿದೆ.
ಪಲಿಮಾರು ಮಠದ ಆಡಳಿತಾಧಿಕಾರಿ ಪ್ರಹ್ಲಾದ್ ಪಿ.ಆರ್ ಮಾತನಾಡಿ, ಪರ್ಯಾಯ ಸಂದರ್ಭ ಗಜಪೂಜೆಗೆ ಆನೆಯನ್ನು ಅಪೇಕ್ಷಿಸಿದ್ದೆವು. ಅದರಂತೆ ಅರಣ್ಯಾಧಿಕಾರಿಗಳು ಸುಭದ್ರೆಯನ್ನು ಕಳುಹಿಸಿಕೊಟ್ಟಿದ್ದರು. ಈಗ ಆನೆಯ ಸ್ಥಿತಿಯನ್ನು ಪತ್ರ ಮುಖೇನ ವಿವರಿಸಿದ್ದೇವೆ. ಆನೆಯನ್ನು ಈ ವಾರದಲ್ಲಿ ಸಕ್ರೆಬೈಲ್ ಗೆ ಕಳುಹಿಸಲಾಗುತ್ತದೆ ಎಂದು ಹೇಳಿದರು.