ಉಡುಪಿ: ಆರೋಗ್ಯ ಸಚಿವ ಶ್ರೀರಾಮುಲು ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ವಾಸ್ತವ್ಯ ಹೂಡಿದ್ದಾರೆ. ಆಸ್ಪತ್ರೆ ಅಭಿವೃದ್ದಿ ಮತ್ತು ಕುಂದು ಕೊರತೆಗಳನ್ನು ಕೇಳುವುದಕ್ಕಿಂತಲೂ ಹೆಚ್ಚು ಸಮಯ ಪೂಜೆ ಪುನಸ್ಕಾರಗಳಲ್ಲೇ ಕಳೆದಿದ್ದಾರೆ.
ಶುಕ್ರವಾರ ಇಳಿಹೊತ್ತಿಗೆ ಬಂದ ಆರೋಗ್ಯ ಸಚಿವರು ರಾತ್ರಿ ಎಮರ್ಜೆನ್ಸಿ ವಾರ್ಡ್ ಪಕ್ಕದ ವೈದ್ಯರ ಕೊಠಡಿಯಲ್ಲಿ ವಿಶ್ರಾಂತಿ ಪಡೆದರು. ಬೆಳಗ್ಗೆ 4 ಗಂಟೆಗೆ ಎದ್ದು, ನಿತ್ಯಕರ್ಮ ಮುಗಿಸಿ 5 ಗಂಟೆಗೆ ನೇರವಾಗಿ ಕೃಷ್ಣಮಠಕ್ಕೆ ತೆರಳಿದರು. ಇಂದು ಮಹಾಲಯ ಅಮವಾಸ್ಯೆವಾದ ಹಿನ್ನೆಲೆಯಲ್ಲಿ ಕುಟುಂಬದ ಹಿರಿಯರಿಗೆ ಪಿಂಡಪ್ರಧಾನ ನೆರವೇರಿಸಿದರು. ಅಲ್ಲಿಂದ ಜಿಲ್ಲಾಸ್ಪತ್ರೆಯ ಕೊಠಡಿಗೆ ಬಂದು ಸುದೀರ್ಘ ಎರಡೂವರೆ ಗಂಟೆಗಳ ಕಾಲ ಶಿವಪೂಜೆ ನಡೆಸಿದರು. ಮುಚ್ಚಿದ ಕೋಣೆಯಲ್ಲಿ ಯಾರಿಗೂ ಪ್ರವೇಶವಿಲ್ಲದೆ ಈ ಖಾಸಗಿ ಪೂಜೆ ನಡೆಯಿತು.
ಪೂಜೆಗಾಗಿ ಅರ್ಚಕರು ರಾಮುಲು ಅವರ ಜೊತೆಗೆನೇ ಬಂದಿದ್ದರು. ಪೂಜೆಯ ನಂತರ ಎರಡನೇ ಬಾರಿ ಕೃಷ್ಣಮಠಕ್ಕೆ ತೆರಳಿದರು. ಉಡುಪಿ ಕೃಷ್ಣನ ದರ್ಶನ ಕೈಗೊಂಡು ಇತ್ತೀಚೆಗಷ್ಟೇ ಮಠದ ಗರ್ಭಗುಡಿಗೆ ಹೊದಿಸಲಾದ ಚಿನ್ನದ ಚಪ್ಪರವನ್ನು ವೀಕ್ಷಿಸಿದರು. ಒಂದು ಬಾರಿಯ ಕೃಷ್ಣದರ್ಶನದಿಂದ ತೃಪ್ತರಾಗದೆ ಎರಡೆರಡು ಬಾರಿ ಕೃಷ್ಣ ದರ್ಶನ ಮಾಡಿದ್ದು ವಿಶೇಷವಾಗಿತ್ತು. ಅಲ್ಲಿಂದ ನೇರವಾಗಿ ಆಸ್ಪತ್ರೆಗೆ ಮರಳಿದರು. ಇದನ್ನೂ ಓದಿ: ಚಾಮರಾಜನಗರದ ಬಳಿಕ ಮಡಿಕೇರಿಯ ಆಸ್ಪತ್ರೆಯಲ್ಲಿ ಶ್ರೀರಾಮುಲು ವಾಸ್ತವ್ಯ
ಕೇವಲ 15-20 ನಿಮಿಷಗಳಷ್ಟೇ ಕುಂದುಕೊರತೆ ಸಭೆ ನಡೆಸಿ, ಈ ಆಸ್ಪತ್ರೆಯನ್ನು ಜಿಲ್ಲಾ ಮಟ್ಟಕ್ಕೆ ಮೇಲ್ದರ್ಜೆಗೇರಿಸುವ ಭರವಸೆಕೊಟ್ಟು ಅಲ್ಲಿಂದ ತೆರಳಿದರು. ಗಮನಾರ್ಹ ಸಂಗತಿ ಎಂದರೆ ಶ್ರೀರಾಮುಲು ಅವರಿಂದ ಅಪರಾಹ್ನ ಮತ್ತೊಮ್ಮೆ ಕೃಷ್ಣದರ್ಶನ ಹಾಗೂ ಪರ್ಯಾಯ ಸ್ವಾಮಿಗಳ ಭೇಟಿ ನಿಗದಿಯಾಗಿದೆ. ಸಚಿವ ಸಂಪುಟ ವಿಸ್ತರಣೆ ವೇಳೆ ನೀವು ಡಿಸಿಎಂ ಆಗೋ ಸೂಚನೆ ಇದ್ಯಾ? ಎಂಬ ಉಡುಪಿ ಪತ್ರಕರ್ತರ ಪ್ರಶ್ನೆಗೆ ಕೃಷ್ಣನ ದಯೆ ಹೇಗಿದೆಯೋ ನೋಡೋಣ ಎಂದಿದ್ದ ಶ್ರೀರಾಮುಲು ಪದೇ ಪದೇ ಕೃಷ್ಣಮಠಕ್ಕೆ ಭೇಟಿ ನೀಡುತ್ತಿರುವುದು ಗಮನಸೆಳೆದಿದೆ. ಇದನ್ನೂ ಓದಿ: ಇದನ್ನೂ ಓದಿ:ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ವಾಸ್ತವ್ಯ ಹೂಡಿದ ಶ್ರೀರಾಮುಲು
ಇದನ್ನೂ ಓದಿ: ಅಪಘಾತಕ್ಕೊಳಗಾದವರನ್ನು ಆಸ್ಪತ್ರೆಗೆ ದಾಖಲಿಸಿದ ಸಚಿವ ಶ್ರೀರಾಮುಲು