ಉಡುಪಿ: ರಾಜ್ಯದಲ್ಲಿ ಇದೇ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದರೆ ಎಲ್ಲಾ ಹಿಂದೂ ಮಠ ಮಂದಿರಗಳು, ಶ್ರದ್ಧಾಕೇಂದ್ರಗಳು ಸರ್ಕಾರೀಕರಣವಾಗಲಿದೆ ಎಂದು ವಿಶ್ವ ಹಿಂದೂ ಪರಿಷತ್ ಅಂತಾರಾಷ್ಟ್ರೀಯ ಅಧ್ಯಕ್ಷ ಸುರೇಂದ್ರ ಕುಮಾರ್ ಜೈನ್ ಕಳವಳ ವ್ಯಕ್ತಪಡಿಸಿದರು.
ಉಡುಪಿಯಲ್ಲಿ ನಡೆಯುತ್ತಿರುವ ಧರ್ಮ ಸಂಸದ್ ಉದ್ದೇಶಿಸಿ ಮಾತನಾಡಿದ ಸುರೇಂದ್ರ ಕುಮಾರ್ ಅವರು, ಕೇರಳದ ಪಾರ್ಥ ಸಾರಥಿ ದೇವಸ್ಥಾನವನ್ನು ಸರ್ಕಾರ ಈಗಾಗಲೇ ವಶಮಾಡಿಕೊಂಡಿದೆ. ಕರ್ನಾಟಕದಲ್ಲಿ ಚುನಾವಣೆ ನಂತರ ಒಂದೂ ದೇವಸ್ಥಾನ ಹಿಂದೂಗಳ ಬಳಿ ಉಳಿಯಲ್ಲ. ಚುನಾವಣೆ ಇರುವುದರಿಂದ ಸರ್ಕಾರ ಈಗ ಸುಮ್ಮನಿದೆ ಎಂದು ಆರೋಪಿಸಿದರು.
Advertisement
Advertisement
ದೇವಸ್ಥಾನಗಳನ್ನು ಸರ್ಕಾರ ಹಣ ಮಾಡುವ ಪಿಕ್ನಿಕ್ ಕೇಂದ್ರವಾಗಿ ಮಾಡುತ್ತಿದೆ. ಮಸೀದಿ-ಚರ್ಚ್‍ನಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದ್ದರೂ ಸರ್ಕಾರ ಅವುಗಳನ್ನು ಮುಟ್ಟುವ ಧೈರ್ಯ ಮಾಡುತ್ತಿಲ್ಲ. ಹಿಂದೂ ದೇವಸ್ಥಾನ ಮಾತ್ರ ನಿಮಗೆ ಯಾಕೆ ಬೇಕು? ಹಿಂದೂಗಳ ಹಣವೆಲ್ಲ ಸರ್ಕಾರದ ಖಜಾನೆ ಸೇರುತ್ತದೆ. ದೇವಸ್ಥಾನ ಅಭಿವೃದ್ಧಿಗೆ ಸರ್ಕಾರದ ಮುಂದೆ ಅನುದಾನಕ್ಕೆ ಮೊಣಕಾಲೂರಬೇಕಾ ಎಂದು ಪ್ರಶ್ನಿಸಿದರು.
Advertisement
ದೇಗುಲ ಅದೇ ಧರ್ಮದ ವಶದಲ್ಲಿ ಇರಬೇಕು. ಈ ಬಗ್ಗೆ ಕಾನೂನಿನಲ್ಲೂ ಉಲ್ಲೇಖವಿದೆ. ದೇವಸ್ಥಾನ ಸಾಮಾಜೀಕರಣವಾಗಬೇಕು. ದೇವಸ್ಥಾನ ಯಾರ ಸುಪರ್ದಿಗೆ ಬರಬೇಕೆಂದು ಮುಂದೆ ನಿರ್ಣಯಿಸುತ್ತೇವೆ ಎಂದು ಗುಡುಗಿದರು.
Advertisement
ಇದೇ ವೇಳೆ ಹಿಂದೂ ಧರ್ಮದಲ್ಲಿನ ಅಸ್ಪೃಶ್ಯತೆ ಬಗ್ಗೆ ಮಾತನಾಡಿದ ಅವರು ಅಂಬೇಡ್ಕರ್ ಕನಸು ಶೀಘ್ರ ನನಸಾಗಲಿದೆ. ಸಂವಿಧಾನದಲ್ಲಿ ಉಲ್ಲೇಖವಾಗಿರುವುದು ಕಾರ್ಯರೂಪಕ್ಕೆ ಬರಲಿದೆ ಎಂದರು. ಅಲ್ಲದೇ ಕಾರ್ಯಕ್ರಮದಲ್ಲಿ ಅಸ್ಪೃಶ್ಯತೆ ವಿರುದ್ಧ ಎಲ್ಲಾ ಸಂತರು ಅಭಿಪ್ರಾಯ ಮಂಡಿಸಿದರು.