Connect with us

ಕೃಷ್ಣ ಮಠದ ಸಂಪ್ರದಾಯ ಉಲ್ಲಂಘನೆ ಮಾಡಿದ್ರಾ ಪೇಜಾವರ ಶ್ರೀ?

ಕೃಷ್ಣ ಮಠದ ಸಂಪ್ರದಾಯ ಉಲ್ಲಂಘನೆ ಮಾಡಿದ್ರಾ ಪೇಜಾವರ ಶ್ರೀ?

ಉಡುಪಿ: ಧರ್ಮಸಂಸತ್ ಪ್ರಮುಖ ಅಂಗವಾದ ಹಿಂದೂ ವೈಭವಕ್ಕೆ ಅದ್ಧೂರಿ ಚಾಲನೆ ಸಿಕ್ಕಿದೆ. ನಗರದ ರಾಯಲ್ ಗಾರ್ಡನ್ ನಲ್ಲಿ ನಡೆಯುವ ಹಿಂದೂ ವೈಭವ ಪ್ರದರ್ಶನವನ್ನು ಪೇಜಾವರ ಶ್ರೀ ಉದ್ಘಾಟಿಸಿದರು.

ಈ ವೇಳೆ ಕೃಷ್ಣಮಠದ ವ್ಯಾಪ್ತಿ ಅಂದರೆ ರಥಬೀದಿಯಿಂದ ಹೊರವಲಯದಲ್ಲಿ ನಡೆಯುವ ಧರ್ಮ ಸಂಸತ್ತು ಕಾರ್ಯಕ್ರಮದಲ್ಲಿ ಪೇಜಾವರ ಶ್ರೀ ಭಾಗಿಯಾಗುವುದು ಎಷ್ಟು ಸರಿ ಎಂಬ ಚರ್ಚೆ ಸಣ್ಣಮಟ್ಟದಲ್ಲಿ ಶುರುವಾಗಿದೆ. ರಥಬೀದಿಯಿಂದ ಪರ್ಯಾಯ ಪೀಠದಲ್ಲಿರುವ ಸ್ವಾಮೀಜಿ ಹೊರಗೆ ಹೋಗುವಂತಿಲ್ಲ ಎಂಬುದು ಈವರೆಗೆ ನಂಬಿಕೊಂಡು ಬಂದ ಸಂಪ್ರದಾಯ. ಆದರೆ ಈಗ ಪೇಜಾವರ ಶ್ರೀ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದರೇ ಎನ್ನುವ ಪ್ರಶ್ನೆ ಸಾಂಪ್ರದಾಯಿಕರ ವಲಯದಲ್ಲಿ ಮೂಡಿದೆ.

ದ್ವೈತ ಮತದ ಸ್ಥಾಪಕ ಮದ್ವಾಚಾರ್ಯರರ ಸಹೋದರ ವಿಷ್ಣುತೀರ್ಥರ ಗ್ರಂಥದಲ್ಲಿ ಉಲ್ಲೇಖವಾದ ಪ್ರಕಾರ, ಕಾಲು ಯೋಜನಾ ದೂರ ಹೋದಲ್ಲಿ ಅಪಚಾರವಾಗಲ್ಲ ಎಂದಿದೆ. ಗ್ರಂಥದ ಉಲ್ಲೇಖದ ಅನುಸಾರ ಕಾಲು ಯೋಜನ ದೂರ ಹೋಗಲು ಅವಕಾಶ ಇರುವುದರಿಂದ ಇದು ಮಠದ ಸಂಪ್ರದಾಯ ಉಲ್ಲಂಘನೆ ಆಗುವುದಿಲ್ಲ ಎಂದು ಕೆಲವರು ಹೇಳಿದ್ದಾರೆ.

ಕಾಲು ಯೋಜನಾ ಅಂದರೆ ಸುಮಾರು ನಾಲ್ಕು ಕಿಲೋಮೀಟರ್ ಗಿಂತ ಸ್ವಲ್ಪ ಜಾಸ್ತಿಯಾಗುತ್ತದೆ. ಹಾಗಾಗಿ ಇಂದು ನಡೆದ ಕಾರ್ಯಕ್ರಮ ಅರ್ಧ ಕಿಲೋಮೀಟರಷ್ಟೇ ಇದೆ. ಪರ್ಯಾಯ ಪೀಠದ ಯತಿ ಬೆಳಗ್ಗೆ ಪೂಜೆ ಮುಗಿಸಿ ರಾತ್ರಿ ಪೂಜೆಗೆ ಹಾಜರಾಗಬೇಕೆಂಬ ಷರತ್ತಿಗೆ ಅನುಸರವಾಗಿ ಈ ನಿಬಂಧನೆ ಹುಟ್ಟಿಕೊಂಡದ್ದೇ ಹೊರತು ವ್ಯಾಪ್ತಿ ಬಿಟ್ಟು ಹೋಗಬಾರದು ಎಂಬುದು ಸಂಪ್ರದಾಯವೇನಲ್ಲ ಎಂದು ಕೆಲ ಧಾರ್ಮಿಕ ವಿದ್ವಾಂಸರು ಹೇಳುತ್ತಾರೆ.

ಹಿಂದೂ ವೈಭವಕ್ಕೆ ಹೆಚ್ಚು ದಿನ ಬೇಡ:
ಕಾರ್ಯಕ್ರಮ ನಡೆಯುವ ರಾಯಲ್ ಗಾರ್ಡನ್ ಗೆ ಶ್ರೀಕೃಷ್ಣ ಮಠದಿಂದ ಪೇಜಾವರ ಶ್ರೀ ಅವರು ಗಾಲಿ ಕುರ್ಚಿ ಮತ್ತು ಪಾದಯಾತ್ರೆ ಮೂಲಕ ಆಗಮಿಸಿದರು. ಗೋವು ಮತ್ತು ಕರುವಿಗೆ ಪೂಜೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ವಿಶ್ವ ಹಿಂದೂ ಪರಿಷತ್ ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರವೀಣ್ ಭಾಯ್ ತೊಗಾಡಿಯಾ ಝೆಡ್ ಪ್ಲಸ್ ಸೆಕ್ಯೂರಿಟಿಯಲ್ಲಿ ಮೈದಾನವನ್ನು ಪ್ರವೇಶ ಮಾಡಿದರು. ಆರ್‍ಎಸ್‍ಎಸ್ ಸಹ ಕಾರ್ಯವಾಹಕ ಭಾಗಯ್ಯ ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು.

ಈ ವೇಳೆ ಮಾತನಾಡಿದ ಪೇಜಾವರ ಶ್ರೀ, ಧರ್ಮ ಸಂಸತ್ತು ಕಾರ್ಯಕ್ರಮದ ಮೂಲಕ ಹಿಂದೂ ಧರ್ಮದ ವೈಭವ ಮತ್ತೆ ದೇಶದಲ್ಲಿ ಮರುಕಳಿಸಬೇಕು. ಧರ್ಮ ಸಂಸತ್ತೇ ಇದಕ್ಕೆ ವೇದಿಕೆ. ಹಿಂದೂ ಧರ್ಮ ವೈಭವಕ್ಕೆ ಹೆಚ್ಚು ಕಾಯುವ ಅಗತ್ಯವಿಲ್ಲ ಎಂದರು.

ಇದನ್ನೂ ಓದಿ: ಏನಿದು ಧರ್ಮ ಸಂಸದ್? ಈ ಬಾರಿ ಏನು ಚರ್ಚೆ ಆಗುತ್ತೆ? ಕರ್ನಾಟಕದ ಮೇಲೆ ಪರಿಣಾಮ ಬೀರುತ್ತಾ?

ಭಾಗಯ್ಯ ಮಾತನಾಡಿ, ದೇಶದ ಹಿಂದೂಗಳಿಗೆ ಆತಂಕ ಬೇಡ ಹಿಂದೂ ಧರ್ಮದ ವೈಭವ ಮತ್ತೆ ದೇಶದಲ್ಲಿ ಮರುಕಳಿಸುತ್ತದೆ. ಹಿಂದೂಗಳ ಸಾಧನೆ ವಿಶ್ವಕ್ಕೇ ಶ್ರೇಷ್ಠ. ಅದನ್ನು ಸಂತರು ಪ್ರಚಾರಪಡಿಸುತ್ತಾರೆ. ನಮ್ಮ ಋಷಿ ಮತ್ತು ಸಂತರ ಛಾಪು ವಿಶ್ವದ ಮುಂದೆ ಪ್ರದರ್ಶನವಾಗಲಿದೆ ಎಂದರು.

Advertisement
Advertisement