ಉಡುಪಿ/ಮಂಗಳೂರು: ಕರಾವಳಿಯ ಸುಪ್ರಸಿದ್ಧ ಕಟೀಲು ದುರ್ಗಾಪರಮೇಶ್ವರಿ ದೇಗುಲಕ್ಕೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿ ನೀಡಿ ದೇವರ ದರ್ಶನ ಮಾಡಿದರು.
10 ದಿನಗಳ ಕಾಲ ಬ್ರಹ್ಮಕಲಶೋತ್ಸವ ನಡೆಯುತ್ತಿದ್ದು, ಆರನೇ ದಿನವಾದ ಸೋಮವಾರ ರಾಜನಾಥ್ ಸಿಂಗ್ ವಿಶೇಷ ಪೂಜೆ ಸಲ್ಲಿಸಿದರು. ರಕ್ಷಣಾ ಸಚಿವರ ಜೊತೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ದೇವರ ದರ್ಶನ ಮಾಡಿ ಕ್ಷೇತ್ರದ ವಿಶೇಷತೆ ಐತಿಹ್ಯ ವಿವರಿಸಿದರು.
Advertisement
Advertisement
ದೇಶದ ಸುಭದ್ರತೆಗಾಗಿ ಪ್ರಾರ್ಥನೆ:
ಕಟೀಲು ದುರ್ಗಾಪರಮೇಶ್ವರಿ ದೇವರ ಮುಂದೆ ರಕ್ಷಣಾ ಸಚಿವರು ಕೈಮುಗಿದು ಪ್ರಾರ್ಥನೆ ಮಾಡಿದರು. ದೇವಸ್ಥಾನಕ್ಕೆ ಆಗಮಿಸಿದ ಕೂಡಲೇ ವಾದ್ಯ ನಗಾರಿಯ ಮೂಲಕ ಸ್ವಾಗತ ಮಾಡಲಾಯ್ತು. ಕಟೀಲು ದುರ್ಗಾಪರಮೇಶ್ವರಿಗೆ ವಿಶೇಷ ಪೂಜೆ ಸಲ್ಲಿಕೆ ವೇಳೆ ದೇಶಕ್ಕಾಗಿ ಪ್ರಾರ್ಥಿಸಿ ಎಂದು ರಾಜನಾಥ್ ಸಿಂಗ್ ಹೇಳಿದರು. ದೇವಸ್ಥಾನದ ನಾಗ ದೇವರ ಗುಡಿಗೆ, ಸುತ್ತುಪೌಳಿಯಲ್ಲಿರುವ ಎಲ್ಲಾ ಗುಡಿಗೆ ಪೂಜೆ ಸಲ್ಲಿಸಿದರು. ಗರುಡಗಂಭಕ್ಕೆ ತಲೆಯಿಟ್ಟು ನಮಸ್ಕರಿಸಿದರು.
Advertisement
Advertisement
ಭಯೋತ್ಪಾದನೆ ವಿರುದ್ಧ ಹೋರಾಟದ ಶಕ್ತಿ ಸಿಗಲಿ:
ದೇಶದ ಜನ ನಿರ್ಭೀತವಾಗಿ ಜೀವನ ನಡೆಸುವಂತಾಗಲಿ. ದೇಶ ರಕ್ಷಣೆಗೆ ಹೆಚ್ಚಿನ ಶಕ್ತಿಯನ್ನು ದೇವಿ ಕರುಣಿಸಲಿ. ನಿಮಗೆ ನೂರುಕಾಲ ಆರೋಗ್ಯ ಸಿಗಲಿ ಎಂದು ಕಟೀಲು ಪ್ರಧಾನ ಅರ್ಚಕರು, ತಂತ್ರಿಗಳು ಪ್ರಾರ್ಥನೆ ಮಾಡಿದರು. ದೇವಿಗೆ ಮುಡಿಸಿದ ಮಲ್ಲಿಗೆ ಹೂವನ್ನುವ ಸಚಿವರಿಗೆ ನೀಡಲಾಯ್ತು. ಶಾಲು, ಪ್ರಸಾದ ನೀಡಿದ ಪ್ರಧಾನ ಅರ್ಚಕರು ಗೌರವ ಸಮರ್ಪಣೆ ಮಾಡಿದರು. ಕೆಲ ತಿಂಗಳ ಹಿಂದೆ ಪೊಳಲಿ ರಾಜರಾಜೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವದಲ್ಲೂ ರಾಜನಾಥ್ ಸಿಂಗ್ ಪಾಲ್ಗೊಂಡಿದ್ದರು.