ಉಡುಪಿ: ಮುಂಗಾರು ಮಳೆ ಆರಂಭಕ್ಕೂ ಮುನ್ನವೇ ಜಿಲ್ಲೆಯ ನಗರದ ಕುಡಿಯುವ ನೀರಿನ ಮೂಲ ತುಂಬಿದೆ.
ಹಿರಿಯಡ್ಕದಲ್ಲಿರುವ ಬಜೆ ಅಣೆಕಟ್ಟು ತುಂಬಿ ತುಳುಕುತ್ತಿದೆ. ಮೆಕುನು ಚಂಡಮಾರುತ ಮತ್ತು ಅರಬ್ಬೀ ಸಮುದ್ರದ ವಾಯುಭಾರ ಕುಸಿತದಿಂದ ಉಡುಪಿ ಜಿಲ್ಲೆಯಾದ್ಯಂತ ಭಾರೀ ಮಳೆಯಾಗಿತ್ತು. ಎರಡು ದಿನಗಳ ಕಾಲ ಸುರಿದ ಬಿರುಸಿನ ಮಳೆಗೆ ಜಿಲ್ಲೆಯ ಎಲ್ಲಾ ನದಿಗಳು ತುಂಬಿ ತುಳುಕುತ್ತಿದೆ.
ಕಾರ್ಕಳ ತಾಲೂಕಿನಲ್ಲಿ ಭಾರೀ ಮಳೆಯಾಗಿದ್ದು, ಸ್ವರ್ಣಾ ನದಿ ತುಂಬಿ ಹರಿಯುತ್ತಿದೆ. ಹೀಗಾಗಿ ಬಜೆ ಅಣೆಕಟ್ಟು ಭರ್ತಿಯಾಗಿದೆ. ಮೇ ತಿಂಗಳ 15ರ ನಂತರ ಉಡುಪಿ ನಗರಕ್ಕೆ ಕುಡಿಯುವ ನೀರಿನ ಸಮಸ್ಯೆ ಪ್ರತೀ ವರ್ಷ ಎದುರಾಗುತಿತ್ತು. ಆದರೆ ಈ ಬಾರಿ ಸೂಕ್ತ ಸಮಯದಲ್ಲಿ ಮಳೆ ಬಂದಿರುವುದರಿಂದ ನೀರಿನ ಸಮಸ್ಯೆಯಾಗಿಲ್ಲ. ಅಣೆಕಟ್ಟಿನ ಎಲ್ಲಾ ಗೇಟುಗಳನ್ನು ತೆರೆಯಲಾಗಿದೆ.
ಮಳೆ ನೀರು ನೆರೆಯ ರೂಪದಲ್ಲಿ ಹರಿದು ಬರುತ್ತಿರುವುದರಿಂದ ನೀರನ್ನು ಸಮುದ್ರದ ಕಡೆ ಬಿಡಲಾಗುತ್ತಿದೆ. ಅಣೆಕಟ್ಟುವಿನಲ್ಲಿ ಭಾರೀ ಹೂಳು ತುಂಬಿಕೊಂಡಿದ್ದು, ಈ ಬಾರಿಯ ಬೇಸಿಗೆಯಲ್ಲಿ ಕೂಡಾ ಅದನ್ನು ತೆಗೆಯುವ ಕೆಲಸ ಉಡುಪಿ ನಗರಸಭೆ ಮಾಡಿಲ್ಲ. ಅಣೆಕಟ್ಟುವಿನಲ್ಲಿ ಬೇಸಿಗೆ ಅಂತ್ಯದವರೆಗೆ ನಗರಕ್ಕೆ ಬೇಕಾದಷ್ಟು ನೀರು ಹಿಡಿದಿರುವ ಸಾಮರ್ಥ್ಯವಿದೆ. ಆದರೆ ನಗರಸಭೆ ಹೂಳೆತ್ತದಕ್ಕೆ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.