ಉಡುಪಿ: ದಕ್ಷಿಣ ಕನ್ನಡ ಜಿಲ್ಲೆ ಮತ್ತು ಉಡುಪಿ ಜಿಲ್ಲೆಯ ಗಡಿ ಎರಡು ದೇಶಗಳ ನಡುವೆ ಗಡಿಯಂತೆ ಆಗಿದೆ. ಮಹಾಮಾರಿ ಕಿಲ್ಲರ್ ಕೊರೊನಾ ಅವಳಿ ಜಿಲ್ಲೆಗಳನ್ನು ಭೌಗೋಳಿಕವಾಗಿ ಮತ್ತು ಮಾನಸಿಕವಾಗಿ ಬೇರ್ಪಡಿಸುತ್ತಿದೆ.
ಅಗತ್ಯ ವಸ್ತುಗಳನ್ನು ಬಿಟ್ಟರೆ ಒಂದೇ ಒಂದು ವಾಹನಗಳನ್ನು ಪೊಲೀಸರು ದಕ್ಷಿಣ ಕನ್ನಡದಿಂದ ಉಡುಪಿ ಜಿಲ್ಲೆಯ ಒಳಗೆ ಬಿಡುತ್ತಿಲ್ಲ. ಸರಿಯಾದ ದಾಖಲಾತಿ ಇಲ್ಲದ ಉಡುಪಿ ಜಿಲ್ಲೆಯ ವಾಹನಗಳು ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರವೇಶ ಮಾಡದಂತೆ ಮೂಲ್ಕಿ ಪೊಲೀಸರು ದಿಗ್ಬಂಧನ ಹಾಕಿದ್ದಾರೆ. ಥರ್ಮಲ್ ಮೀಟರ್‍ನ ಮೂಲಕ ಪ್ರತಿಯೊಬ್ಬರನ್ನು ಪರಿಶೀಲಿಸಿ ಜಿಲ್ಲೆಯ ಗಡಿಯಿಂದ ಒಳಗೆ ಕಲಿಸುವ ಪ್ರಕ್ರಿಯೆ ನಡೆಯುತ್ತಿದೆ. ರೆಸಿಡೆನ್ಷಿಯಲ್ ಶಾಲೆಯಲ್ಲಿ ಮಕ್ಕಳನ್ನು ಹಾಕಿರುವ ದಕ್ಷಿಣ ಕನ್ನಡ ಜಿಲ್ಲೆಯ ಪೋಷಕರು ಉಡುಪಿ ಜಿಲ್ಲಾ ಪ್ರವೇಶ ಮಾಡಲು ಪರದಾಡುತ್ತಿದ್ದಾರೆ.
ಪೋಷಕರನ್ನು ಯಾವುದೇ ಕಾರಣಕ್ಕೂ ಜಿಲ್ಲೆಯ ಒಳಗೆ ಪೊಲೀಸರು ಪ್ರವೇಶಿಸಲು ಅನುಮತಿ ಕೊಡುತ್ತಿಲ್ಲ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಗಡಿಯಲ್ಲಿ ಪೊಲೀಸರು ಚೆಕ್ ಪೋಸ್ಟ್ ಹಾಕಿರುವುದರಿಂದ ಟೋಲ್ ಅನ್ನು ಸಂಪೂರ್ಣವಾಗಿ ತೆರೆದು ಬಿಡಲಾಗಿದೆ. ಟೋಲ್ ಸಿಬ್ಬಂದಿಗೆ ರಜೆ ಘೋಷಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ದಿನದ 24 ಗಂಟೆ ದುಡಿಯುವ ಪೊಲೀಸರು ಹೈರಾಣಾಗಿ ಹೋಗಿದ್ದಾರೆ.
ಕರಾವಳಿ ಜಿಲ್ಲೆ ಉಡುಪಿಯ ಉರಿ ಬಿಸಿಲು ಪೊಲೀಸರನ್ನು ಸುಸ್ತು ಮಾಡಿ ಹಾಕಿದೆ. ಧೂಳು ಬಿಸಿಲು ಪ್ರಯಾಣಿಕರ ಒತ್ತಡ ಸರ್ಕಾರದ ಖಡಕ್ ಆದೇಶದ ನಡುವೆ ಬಹಳ ಸವಾಲಿನಿಂದ ಪೊಲೀಸರು ಕೆಲಸ ಮಾಡುತ್ತಿದ್ದಾರೆ. ವಾಹನಗಳನ್ನು ಮಾನವೀಯತೆ ದೃಷ್ಟಿಯಿಂದ ಬಿಟ್ಟರೆ ಹಿರಿಯ ಅಧಿಕಾರಿಗಳಿಂದ ಬೈಸಿಕೊಳ್ಳಬೇಕಾಗುತ್ತದೆ. ಹಾಗಂತ ಆರೋಗ್ಯ, ಅಗತ್ಯ ವಸ್ತುಗಳನ್ನು ಸಾಗಾಟದ ಕಾರಣ ಹೇಳಿಕೊಂಡು ಬರುವ ಸಾರ್ವಜನಿಕರ ಹಿತಕಾಪಾಡುವ ಸವಾಲು ನಮ್ಮ ಮೇಲಿದೆ ಎಂದು ಪೊಲೀಸರು ತಮ್ಮ ಅಸಹಾಯಕತೆಯನ್ನು ತೋಡಿಕೊಳ್ಳುತ್ತಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಪೊಲೀಸ್ ಸಿಬ್ಬಂದಿ, ಲಾಕ್ ಡೌನ್ ಆದ್ರೂ ಜನ ಮನೆಯಲ್ಲಿ ಕುಳಿತುಕೊಳ್ಳಲು ಕೇಳುತ್ತಿಲ್ಲ. ಅನಿವಾರ್ಯ ಕಾರಣ ಇದ್ದರೆ ಬಿಡಬಹುದು. ಅತೀ ಅಗತ್ಯ ಇಲ್ಲದ ವಿಷಯಕ್ಕೂ ಜನ ರಸ್ತೆಗೆ ಬರುತ್ತಾರೆ. ಜನರೇ ತಿಳಿದುಕೊಳ್ಳದಿದ್ದರೆ ನಾವು, ಜನಪ್ರತಿನಿಧಿಗಳು ಏನೂ ಮಾಡಲು ಸಾಧ್ಯವಿಲ್ಲ ಎಂದು ನಿರಾಶಾದಾಯಕವಾಗಿ ಹೇಳಿದರು.