ಉಡುಪಿ: ಚೀನಾದ ಜನರ ನಿದ್ದೆ ಕೆಡಿಸಿರುವ ಕೊರೊನಾ ವೈರಸ್ ಉಡುಪಿ ಜನರನ್ನು ಕಳೆದೆರಡು ದಿನಗಳಿಂದ ಆತಂಕಕ್ಕೀಡು ಮಾಡಿದೆ. ಎರಡು ದಿನಗಳ ಹಿಂದೆ ಚೀನಾದಿಂದ ಆಗಮಿಸಿದ್ದ ನಾಲ್ವರು ಉಡುಪಿ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದರು. ಶೀತ, ಕಫದಿಂದ ಬಳಲುತ್ತಿದ್ದ ನಾಲ್ವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ನಾಲ್ವರು ಶಂಕಿತ ಕೊರೊನಾ ರೋಗಿಗಳ ಪೈಕಿ ಮಹಿಳೆಯೊಬ್ಬರು ಇಂದು ಡಿಸ್ಚಾರ್ಜ್ ಆಗಿದ್ದಾರೆ.
ದಾಖಲಾದ ನಾಲ್ವರು ರೋಗಿಗಳಲ್ಲಿ ಮೂವರು ಒಂದೇ ಕುಟುಂಬದವರು. ಬ್ರಹ್ಮಾವರ ನಿವಾಸಿಗಳಾದ ಪತಿ-ಪತ್ನಿ ಮತ್ತು ಮಗು ಚೀನಾ ಪ್ರವಾಸ ಮುಗಿಸಿ ಹದಿನೈದು ದಿನದ ಹಿಂದೆ ವಾಪಸ್ಸಾಗಿದ್ದರು. ಪತಿಗೆ ಶೀತ ಮತ್ತು ಕೆಮ್ಮದ ಬಾಧೆಯಿತ್ತು. ಮಗುವಿಗೂ ಅಲ್ಪ ಪ್ರಮಾಣದ ಶೀತವಾಗಿತ್ತು, ಮಹಿಳೆ ಸಂಪೂರ್ಣ ಚೇತರಿಸಿಕೊಂಡಿರುವ ಕಾರಣ ಸದ್ಯ ಅವರನ್ನು ಡಿಸ್ಚಾರ್ಜ್ ಮಾಡಲಾಗಿದೆ.
Advertisement
Advertisement
ಇನ್ನೋರ್ವ ರೋಗಿ ಕಾಪು ತಾಲೂಕಿನವರಾಗಿದ್ದು, ಜಪಾನ್ ಪ್ರವಾಸ ಮುಗಿಸಿ ಬಂದಿದ್ದರು. ಶೀತ, ಕೆಮ್ಮು ಉಂಟಾದ ಕಾರಣ ಅವರೇ ಬಂದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಒಂದೇ ಕುಟುಂಬದ ಮೂವರು ಮತ್ತು ಓರ್ವ ಸೋಂಕಿತನನ್ನು ಪ್ರತ್ಯೇಕ ವಾರ್ಡ್ ನಲ್ಲಿಟ್ಟು ಸಾಮಾನ್ಯ ಚಿಕಿತ್ಸೆ ನೀಡಲಾಗಿತ್ತು. ಈ ಪೈಕಿ ಮಹಿಳೆಯನ್ನು ಡಿಸ್ಚಾರ್ಜ್ ಮಾಡಲಾಗಿದೆ.
Advertisement
ಶಂಕಿತ ಮೂವರು ರೋಗಿಗಳ ಕಫ, ರಕ್ತವನ್ನು ಪರೀಕ್ಷೆಗಾಗಿ ಬೆಂಗಳೂರಿಗೆ ಕಳುಹಿಸಲಾಗಿದೆ. ಸೋಮವಾರ ಅಥವಾ ಮಂಗಳವಾರ ವರದಿ ಬರಲಿದೆ, ಕೊರೊನಾ ವೈರಸ್ ತಗಲಿರುವ ಸಾಧ್ಯತೆ ಕಡಿಮೆಯಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಚಿಕಿತ್ಸೆಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಮೂಲಗಳು ಮಾಹಿತಿ ನೀಡಿವೆ.
Advertisement
ಉಡುಪಿ ಜಿಲ್ಲಾಸ್ಪತ್ರೆಯ ವೈದ್ಯರ ಮಾಹಿತಿಯ ಪ್ರಕಾರ ಮುಂದಿನ ವಾರದಲ್ಲಿ ವರದಿ ಕೈಸೇರಲಿದೆ. ಮೂವರು ರೋಗಿಗಳಿಗೆ ಶೀತ ತಲೆನೋವು ಕಫ ಮತ್ತು ಜ್ವರಕ್ಕೆ ಸಂಬಂಧಪಟ್ಟ ಚಿಕಿತ್ಸೆಯನ್ನು ಕೊಟ್ಟಿದ್ದಾರೆ. ಮೂವರು ಕೂಡ ಶೇ.99ರಷ್ಟು ಗುಣಮುಖರಾಗಿದ್ದು ವರದಿಗಾಗಿ ಕಾಯುತ್ತಿದ್ದೇವೆ ಎಂದು ಜಿಲ್ಲಾ ಸರ್ಕಾರಿ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.