– ಚಂದ್ರನ ಹೊಸ ಭೂಭಾಗ ಭೂಮಿಗೆ ದರ್ಶನ
– ಜ್ಯೋತಿರ್ವಿಜ್ಞಾನಿ ಪ್ರಕಾಶ್ ಅಮ್ಮಣ್ಣಾಯ ವಿವರಣೆ
ಉಡುಪಿ: ಕೊರೊನಾ ವೈರಸ್ ವಿಶ್ವದಾದ್ಯಂತ ಅಟ್ಟಹಾಸ ಮೆರೆಯುತ್ತಿರುವಾಗ ಖಗೋಳ ವಿಸ್ಮಯವಾಗಿದೆ. ಬಾನಿನಲ್ಲಿ ಚಂದಮಾಮ ಗುಲಾಬಿ ಬಣ್ಣದಲ್ಲಿ ಗೋಚರಿಸಿದ್ದಾನೆ. ಚಂದ್ರ ಭೂಮಿಯ ಸನಿಹ ತನ್ನ ಮತ್ತೊಂದು ಭೂಭಾಗವನ್ನು ಭೂಮಿಯ ಕಡೆ ಪ್ರದರ್ಶಿಸುತ್ತಾ ಹಾದು ಹೋಗುತ್ತಿದ್ದಾನೆ. ಚಂದ್ರ 14 ಪಟ್ಟು ದೊಡ್ಡದಾಗಿ ಕಾಣಿಸಿಕೊಂಡಿದ್ದಾನೆ. ಚಂದ್ರನಿಗೆ ಪಿಂಕ್ ಮೂನ್ ಅಂತ ಅಮೆರಿಕ ಹೆಸರಿಟ್ಟಿದ್ದು, ಭಾರತದಲ್ಲಿ ಈ ಹುಣ್ಣಿಮೆ ಸೂಪರ್ ಮೂನ್ ಎಂದೇ ಪ್ರಸಿದ್ಧವಾಗಿದೆ.
ಉಡುಪಿಯ ಹಿರಿಯ ಜ್ಯೋತಿರ್ವಿಜ್ಞಾನಿ ಪ್ರಕಾಶ್ ಅಮ್ಮಣ್ಣಾಯ ಈ ಬಗ್ಗೆ ವಿವರಣೆ ನೀಡಿದ್ದು, ಚಂದ್ರ ಭೂಮಿಗೆ ಬಹಳ ಹತ್ತಿರದಲ್ಲಿ ಇರುವಂತಹ ಗ್ರಹ. ಮನುಷ್ಯನಿಗೆ ಬಹಳ ಅಪ್ಯಾಯಮಾನವಾದ ಗ್ರಹನೂ ಹೌದು. ವಿಶ್ವಾದ್ಯಂತ ಕೊರೊನಾ ಅಟ್ಟಹಾಸ ಇರುವುದರಿಂದ ಚಂದ್ರ ಮನೋಕಾರಕ ಆಗಿರೋದರಿಂದ ಚಿತ್ರಾ ನಕ್ಷತ್ರದವರು, ಕೊರೊನಾ ರೋಗಿಗಳು, ಈ ಬಗ್ಗೆ ಆತಂಕ ಇರುವವರು ಮನಸ್ಸನ್ನು ಸ್ಥಿಮಿತದಲ್ಲಿ ಇಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು.
ಭೂಮಿಯ ಉತ್ತರ ಮತ್ತು ದಕ್ಷಿಣ ಧ್ರುವಕ್ಕೆ ಚಂದ್ರ ಸಂಚಾರ ಮಾಡುತ್ತಾ ಇರುತ್ತಾನೆ. ಚಂದ್ರ ಅತಿ ದೊಡ್ಡದಾಗಿ ಕಾಣುವ ಪ್ರಕ್ರಿಯೆಯನ್ನು ಸೂಪರ್ ಮೂನ್ ಎಂದು ಕರೆಯುತ್ತಾರೆ. ಬೇರೆ ಬೇರೆ ರಾಶಿಗಳ ಸಂಚಾರ ಸಂದರ್ಭ ಚಂದ್ರನ ಬಣ್ಣ ಬದಲಾಗುತ್ತದೆ. ಭೂಮಿಯ ಮೇಲೆ ಅದು ಬೇರೆ ಬೇರೆ ಬಣ್ಣಗಳಲ್ಲಿ ಬೇರೆ ಬೇರೆ ಆಕಾರಗಳಲ್ಲಿ ಕಾಣಿಸುತ್ತದೆ. ಚಂದಿರ ಈ ಬುಧವಾರ ಹದಿನಾರು ಸಾವಿರ ಕಿಲೋಮೀಟರುಗಳಷ್ಟು ಭೂಮಿಗೆ ಹತ್ತಿರ ಬಂದಿದ್ದಾನೆ.
ಚಂದ್ರ ಶೀತ ಕಾರಕ. ಚಂದ್ರ ಮನೋಕಾರಕನೂ ಹೌದು. ಚಂದ್ರ ಮನುಷ್ಯನ ಆರೋಗ್ಯವನ್ನು ಸುಧಾರಿಸುವ ಮತ್ತು ಹದಗೆಡಿಸುವ ಶಕ್ತಿಯನ್ನು ಹೊಂದಿದ್ದಾನೆ. ಚಂದ್ರ ಭೂಮಿಗೆ ಹತ್ತಿರ ಬರುವುದು ಖಗೋಳದ ಒಂದು ಪ್ರಕ್ರಿಯೆ. ಆದರೆ ಈ ಬಾರಿ ಸೂಪರ್ ಮೂನ್ ಬೇರೆಯೇ ವಿಚಾರಕ್ಕೆ ಚರ್ಚೆಯ ವಿಷಯವಾಗಿದೆ. ವಿಶ್ವದ ಎಲ್ಲಾ ದೇಶಗಳಿಗೆ ಕೊರೊನಾ ಬಾಧಿಸಿದೆ. ಚಂದ್ರನಿಗೂ ಸಮುದ್ರಕ್ಕೂ ನೇರ ಸಂಪರ್ಕ ಇರುವುದರಿಂದ ಸಮುದ್ರದ ಅಲೆಗಳು ಜಾಸ್ತಿಯಾಗುತ್ತದೆ. ತೀರದ ಊರುಗಳಲ್ಲಿ ಮಳೆಯಾಗಬಹುದು ಎಂದು ಹೇಳಿದರು.
ಮನೋಕಾರಕನಾಗಿರುವ ಚಂದ್ರ ಮನಸ್ಸಿನಲ್ಲಿ ತಲ್ಲಣಗಳನ್ನು ಉಂಟು ಮಾಡಬಹುದು. ಕೊರೊನಾ ವ್ಯಾಧಿ ಬಾಧಿಸಿರುವವರು ಮತ್ತು ಜನಸಾಮಾನ್ಯರು ಈ ಸಂದರ್ಭದಲ್ಲಿ ಮಾನಸಿಕ ತಲ್ಲಣಗಳನ್ನು ನಿಯಂತ್ರಿಸಬೇಕು. ಸ್ಥಿಮಿತ ಕಳೆದುಕೊಂಡಲ್ಲಿ ಆತಂಕ ಹೆಚ್ಚಾಗುವ ಸಾಧ್ಯತೆ ಇದೆ. ಚಂದ್ರ ತನ್ನ ಕಕ್ಷೆಯಲ್ಲಿ ಸುತ್ತುತ್ತಾ ಈ ಬಾರಿ ಚಂದ್ರನ ಹೊಸ ಭೂಭಾಗ ಭೂಮಿಯ ಕಡೆ ದರ್ಶನ ಆಗುತ್ತದೆ. ಮುಂದೆ ಏನೆಲ್ಲ ಬದಲಾವಣೆಗಳು ಆಗಬಹುದು ಎಂಬ ಕುತೂಹಲ ಇದೆ ಎಂದು ಅಮ್ಮಣ್ಣಾಯ ಹೇಳಿದರು.
ಚಿತ್ರಾ ನಕ್ಷತ್ರದಲ್ಲಿ ಚಂದ್ರ ಸಂಚಾರ ಇರುವುದರಿಂದ ಈ ನಕ್ಷತ್ರದವರು ಮುನ್ನೆಚ್ಚರಿಕೆ ಮತ್ತು ಮುಂಜಾಗ್ರತೆ ವಹಿಸುವುದು ಒಳ್ಳೆಯದು. ಈ ನಕ್ಷತ್ರದವರಿಗೆ ಪ್ರಖರತೆ ಜಾಸ್ತಿ ಇರುವುದರಿಂದ ಆರೋಗ್ಯದ ಕಡೆಗೆ ಹೆಚ್ಚಿನ ಗಮನವನ್ನು ಕೊಡಬೇಕು ಎಂದರು.