ಉಡುಪಿ: ಜಿಲ್ಲೆಯ ಕಾಪುವಿನಲ್ಲಿರುವ ಸಾಯಿರಾಧಾ ರೆಸಾರ್ಟ್ ನಲ್ಲಿ ಪಂಚಕರ್ಮ ಚಿಕಿತ್ಸೆ ಪಡೆಯುತ್ತಿರುವ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಿಗೆ ಸದ್ಯ ಮಂಡ್ಯದ್ದೇ ಚಿಂತೆಯಾಗಿದೆ.
ಉಡುಪಿಯ ರೆಸಾರ್ಟ್ ನಲ್ಲಿ ರಿಲ್ಯಾಕ್ಸ್ ಮೂಡ್ ನಲ್ಲಿದ್ದರೂ ಸಿಎಂ ಅವರಿಗೆ ತಮ್ಮ ಮಗ ನಿಖಿಲ್ ಫಲಿತಾಂಶ ಚಿಂತೆ ಕಾಡುತ್ತಿದೆ. ಹೀಗಾಗಿ ಮಂಗಳವಾರ ರಾತ್ರಿ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಾಜು ಅವರನ್ನು ಉಡುಪಿಗೆ ಕರೆಸಿಕೊಂಡು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ತಡರಾತ್ರಿಯವರೆಗೆ ಪುಟ್ಟರಾಜು ಜೊತೆಗೆ ಮಂಡ್ಯ ಚುನಾವಣಾ ಲೆಕ್ಕಾಚಾರದ ಮಾತುಕತೆ ನಡೆಸಿದ್ದು, ಚುನಾವಣೋತ್ತರ ಸಮೀಕ್ಷೆಗಳ ಬಗ್ಗೆ ಮಾಹಿತಿ ಕಲೆಹಾಕಿದ್ದಾರೆ. ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಬಗ್ಗೆ ಸುದೀರ್ಘ ಚರ್ಚೆ ಮಾಡಿದ್ದಾರೆ. ಸಚಿವ ಪುಟ್ಟರಾಜು ಕೂಡ ಸಿಎಂಗೆ ರಾಜಕೀಯ ಬೆಳವಣಿಗೆಗಳ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.
ರೆಸಾರ್ಟ್ ಸುತ್ತಲೂ ಹಸಿರು ಬೇಲಿ:
ಸಿಎಂ ಹಾಗೂ ಮಾಜಿ ಪ್ರಧಾನಿಗೆ ಎರಡನೇ ದಿನದ ಪಂಚಕರ್ಮ ಚಿಕಿತ್ಸೆ ನಿನ್ನೆ (ಮಂಗಳವಾರ) ಮುಂದುವರಿದಿತ್ತು. ಯೋಗ, ಧ್ಯಾನದಲ್ಲಿ ಜೆಡಿಎಸ್ ವರಿಷ್ಠರು ಮಗ್ನರಾಗಿದ್ದಾರೆ. ಹೀಗಾಗಿ ರೆಸಾರ್ಟ್ ಸುತ್ತ ಮಾಧ್ಯಮದವರಿಗೆ ನಿಷೇಧ ಹೇರಿದ್ದಾರೆ. ಕಾಪು ತಾಲೂಕಿನ ಮೂಳೂರಿನ ಸಾಯಿರಾಧಾ ಹೆಲ್ತ್ ರೆಸಾರ್ಟ್‍ನ ಬೀಚ್ ಆವರಣದಲ್ಲಿ ಸೋಮವಾರ ಶಾಸಕ ಭೋಜೇಗೌಡ ಹಾಗೂ ಸಚಿವ ಸಾರಾ ಮಹೇಶ್ ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ರೆಸಾರ್ಟ್ ಆವರಣ ಕಾಣದಂತೆ ಸುತ್ತಲೂ ಹಸಿರು ಪರದೆ ಬೇಲಿ ಹಾಕುವಂತೆ ರೆಸಾರ್ಟ್ ಸಿಬ್ಬಂದಿಗೆ ಮುಖ್ಯಮಂತ್ರಿಯವರು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.