ಉಡುಪಿ: ಇಲ್ಲಿನ (Udupi) ರಾಷ್ಟ್ರೀಯ ಹೆದ್ದಾರಿ 169ಎನಲ್ಲಿ ಶಾರದಾ ಮಂಟಪ ಜಂಕ್ಷನ್ ಬಳಿ ಲಾಂಗ್ ಹಿಡಿದು ಅಟ್ಟಹಾಸ ಮೆರೆದಿದ್ದ ಗರುಡ ಗ್ಯಾಂಗ್‍ನ (Garuda Gang) 6 ಪುಡಿ ರೌಡಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇಂದು ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಮೇ 25 ರಂದು ಮೂವರು ಆರೋಪಿಗಳನ್ನು ಪೊಲೀಸರು (Udupi Police) ಬಂಧಿಸಿದ್ದರು.
ಬಂಧಿತರನ್ನು ಮಜೀದ್, ಅಲ್ಫಾಝ್, ಶರೀಫ್ ಎಂದು ಉಡುಪಿ ಎಸ್‍ಪಿ ಡಾ. ಅರುಣ್ ಕುಮಾರ್ ಮಾಹಿತಿ ನೀಡಿದ್ದಾರೆ. ಪ್ರಮುಖ ಆರೋಪಿ ಕಾಪುವಿನ ಕೊಂಬಗುಡ್ಡೆಯ ಆಶಿಕ್ ತೋನ್ಸೆಯ ರಾಕೀಬ್, ಸಕ್ಲೈನ್ ಈಗಾಗಲೇ ಪೊಲೀಸರು ಬಂಧಿಸಿದ್ದರು. ಪ್ರಕರಣದಲ್ಲಿ ಇಲ್ಲಿಯವರೆಗೂ ಒಟ್ಟು ಆರು ಮಂದಿಯನ್ನು ಬಂಧಿಸಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳಿಗೆ ಪೊಲೀಸರು ಬಲೆ ಬೀಸಿದ್ದಾರೆ. ಇದನ್ನೂ ಓದಿ: ಉಡುಪಿಯಲ್ಲಿ ಗರುಡ ಗ್ಯಾಂಗ್ ನಡುವೆ ವಾರ್- ಕಾರು ಗುದ್ದಿಸಿ ಯುವಕನ ಬೀಳಿಸಿದ ಕಿರಾತಕ
ರಾಜ್ಯಾದ್ಯಂತ ಪ್ರಕರಣ ಭಾರೀ ಸದ್ದು ಮಾಡಿತ್ತು. ಈ ಹಿನ್ನೆಲೆ ಆರೋಪಿಗಳ ಬಂಧನಕ್ಕೆ ಪೊಲೀಸರು ತೀವ್ರ ಶೋಧ ನಡೆಸಿದ್ದರು. ಪ್ರಕರಣದಲ್ಲಿ ಭಾಗಿಯಾದ ಉಳಿದ ಆರೋಪಿಗಳನ್ನು ಶೀಘ್ರವಾಗಿ ಬಂಧಿಸಲಾಗುವುದು ಎಂದು ಪೊಲಿಸರು ತಿಳಿಸಿದ್ದಾರೆ.
ಏನಿದು ಪ್ರಕರಣ: ಉಡುಪಿ ನಗರದ ಶಾರದಾ ಮಂಟಪ ಜಂಕ್ಷನ್‍ನಲ್ಲಿ ಯುವಕರ ಗುಂಪಿನ ನಡುವೆ ಗ್ಯಾಂಗ್ ವಾರ್ ನಡೆದಿತ್ತು. ವ್ಯವಹಾರಕ್ಕೆ ಸಂಬಂಧಿಸಿದ ತಗಾದೆ ಮಾರಾಮಾರಿಯ ವರೆಗೆ ಬಂದಿತ್ತು. ರಾಷ್ಟ್ರೀಯ ಹೆದ್ದಾರಿ 169ಎ ಯಲ್ಲಿ ಸಾರ್ವಜನಿಕರು ಓಡಾಟ ಮಾಡುತ್ತಿದ್ದ ಸಂದರ್ಭದಲ್ಲೇ ತಲ್ವಾರ್ ಹಿಡಿದು ಯುವಕರು ಹೊಡೆದಾಟಕ್ಕೆ ಯತ್ನಿಸಿದ್ದರು. ಈ ವೇಳೆ ಓರ್ವನಿಗೆ ಕಾರು ಗುದ್ದಿಸಿದ್ದರು. ಅಪಾರ್ಟ್‍ಮೆಂಟ್‍ನಲ್ಲಿ ವ್ಯಕ್ತಿಯೊಬ್ಬ ಘಟನೆಯ ಸಂಪೂರ್ಣ ದೃಶ್ಯವನ್ನು ಸೆರೆಹಿಡಿದಿದ್ದ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ರಾಜ್ಯದ ಕಾನೂನು ಸುವ್ಯವಸ್ಥೆಯ ಬಗ್ಗೆ ತೀವ್ರ ಚರ್ಚೆಯಾಗಿತ್ತು.
ಈ ಸಂಬಂಧ ಎಸ್.ಪಿ ಡಾ. ಅರುಣ್ ಕುಮಾರ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದರು. ಈ ವೇಳೆ ಸಾರ್ವಜನಿಕ ಸ್ಥಳದಲ್ಲಿದ್ದ ದನಗಳ್ಳತನ, ಕಳ್ಳತನ, ರಾಬರಿ, ವಸೂಲಿ, ಹೊಡೆದಾಟ, ಅಮಲು ಪದಾರ್ಥ ಸಾಗಣೆ ಹೀಗೆ ಹಲವಾರು ಕಾನೂನುಬಾಹಿರ ಕೃತ್ಯಗಳಿಗೆ ಗರುಡ ಗ್ಯಾಂಗ್ ಕುಖ್ಯಾತಿ ಪಡೆದಿದೆ. ಈಗಾಗಲೇ ವಿವಿಧ ಠಾಣೆಗಳಲ್ಲಿ ಈ ಗ್ಯಾಂಗ್ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಆರೋಪಿಗಳ ಬಂಧನಕ್ಕೆ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದ್ದರು. ಇದನ್ನೂ ಓದಿ: ಉಡುಪಿಯಲ್ಲಿ ಗ್ಯಾಂಗ್ ವಾರ್ – ಸರ್ಕಾರದ ವಿರುದ್ಧ ಬಿಜೆಪಿ ನಾಯಕರ ಕಿಡಿ