ಉಡುಪಿ: ಹಳಿಯ ಕಬ್ಬಿಣ ಕದ್ದ ಆರೋಪದಲ್ಲಿ ಬಾಲಕರಿಗೆ ಸ್ಥಳದಲ್ಲೇ ಏಟು ನೀಡಿದ್ದಕ್ಕೆ ಕೊಂಕಣ ರೈಲ್ವೇ ಸಿಬ್ಬಂದಿ (Konkan Railway Employee) ವಿರುದ್ಧ ಕೇಸ್ ದಾಖಲಾಗಿದೆ.
ಪಲಿಮಾರು ಗ್ರಾಮದ ಅವರಾಲು ಮಟ್ಟು ಎಂಬಲ್ಲಿರುವ ಅಜ್ಜನ ಮನೆಗೆ ಬಾಲಕನೋರ್ವ ತನ್ನ ಗೆಳೆಯನೊಂದಿಗೆ ಹೋಗಿದ್ದನು. ಫೆ.15ರಂದು ಮಧ್ಯಾಹ್ನದ ವೇಳೆಗೆ ಇವರಿಬ್ಬರು ರೈಲು ಹಳಿಯ (Railway Track) ಕಬ್ಬಿಣದ ಲಾಕ್ ಮತ್ತು ತುಂಡುಗಳನ್ನು ಕದಿಯುತ್ತಿದ್ದರು.
ಎಂದಿನಂತೆ ಪರೀಕ್ಷೆ ಮಾಡಲು ಹಳಿಯಲ್ಲಿ ಬರುತ್ತಿದ್ದಾಗ ರೈಲ್ವೇ ಗ್ಯಾಂಗ್‌ಮ್ಯಾನ್ ಶಾಲಾ ಸಮವಸ್ತ್ರದಲ್ಲಿರುವ ಇಬ್ಬರು ಬಾಲಕರನ್ನು ನೋಡಿದ್ದಾರೆ. ಸ್ಥಳದಲ್ಲಿ ಕಬ್ಬಿಣದ ತುಂಡುಗಳನ್ನು ನೋಡಿ ಶಾಕ್ ಆಗಿ “ಇಲ್ಲಿ ಏನು ಮಾಡುತ್ತಿದ್ದೀರಿ? ಹಳಿಯ ಕಬ್ಬಿಣವನ್ನು ಕಳ್ಳತನ ಮಾಡುತ್ತಿದ್ದೀರಾ? ಯಾವ ಶಾಲೆಯಲ್ಲಿ ಓದುತ್ತಿದ್ದೀರಿ? ನಿಮ್ಮ ತಂದೆ ತಾಯಿ ಯಾರು” ಎಂದು ಪ್ರಶ್ನಿಸಿ ಕೋಲಿನಿಂದ ಒಬ್ಬನ ತಲೆಗೆ ಹಾಗೂ ಮತ್ತೋರ್ವನ ಕಾಲಿಗೆ ಹೊಡೆದಿದ್ದರು. ಇದನ್ನೂ ಓದಿ: ಅಪಾರ್ಟ್‌ಮೆಂಟ್‌ನಲ್ಲಿ ನಾಲ್ವರ ಶವ ಪತ್ತೆ – I Am Sorry ಎಂದು ಬರೆದು ಪ್ರಾಣಬಿಟ್ಟ ಕುಟುಂಬ!
ಇಬ್ಬರು ಬಾಲಕರಿಗೆ ಗದರಿಸುತ್ತಿರುವ ದೃಶ್ಯವನ್ನು ಗ್ಯಾಂಗ್‌ಮ್ಯಾನ್ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದರು. ಈ ವಿಡಿಯೋ ಈಗ ಕರಾವಳಿ ಭಾಗದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕೇಸ್ ದಾಖಲು:
ಇಡೀ ಘಟನೆಯ ವೀಡಿಯೋವನ್ನು ಮಾಡಿ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ ಎಂದು ಆರೋಪಿಸಿ ಓರ್ವ ಬಾಲಕನ ತಂದೆ ರೈಲ್ವೇ ಸಿಬ್ಬಂದಿ ವಿರುದ್ಧ ಪಡುಬಿದ್ರೆ ಠಾಣೆಯಲ್ಲಿ ದೂರು ನೀಡಿದ್ದು ಈಗ ಪ್ರಕರಣ ದಾಖಲಾಗಿದೆ. ಪಡುಬಿದ್ರೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.