ಉಡುಪಿ: ಸಾವಿನ ಹೊಂಡದಲ್ಲಿ ಆರು ಗಂಟೆ ಒದ್ದಾಡಿ, ಕೊನೆಗೂ ಮೃತ್ಯುಂಜಯನಾಗಿ ರೋಹಿತ್ ಖಾರ್ವಿ ಬದುಕಿ ಬಂದಿದ್ದಾರೆ.
ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಮರವಂತೆಯಲ್ಲಿ ಬೆಳಗ್ಗೆ 8:30ರ ವೇಳೆಗೆ ಬೋರ್‌ವೆಲ್ ಪಕ್ಕದ ಮಣ್ಣು ಕುಸಿದಿತ್ತು. ಪರಿಣಾಮ ಅಲ್ಲೇ ಕೆಲಸ ಮಾಡುತ್ತಿದ್ದ ರೋಹಿತ್ 15 ಅಡಿ ಆಳಕ್ಕೆ ಜಾರಿ ಬಿದ್ದಿದ್ದರು. ಆರಂಭದಲ್ಲಿ ಸ್ಥಳದಲ್ಲಿದ್ದ ಕಾರ್ಮಿಕರು ಕಾರ್ಯಾಚರಣೆ ನಡೆಸಿ, ತಕ್ಷಣ ಅಗ್ನಿಶಾಮಕ ದಳ, ಆರೋಗ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹಗ್ಗದ ಮೂಲಕ 15 ಅಡಿ ಆಳಕ್ಕೆ ಇಳಿದು ರೋಹಿತ್‍ನನ್ನು ಸಂಪರ್ಕಿಸಿದ್ದರು.
ಅಷ್ಟರೊಳಗೆ ಕುತ್ತಿಗೆ ಮಟ್ಟದವರೆಗೆ ಮಣ್ಣಿನ ಒಳಗೆ ರೋಹಿತ್ ಹುದುಗಿ ಹೋಗಿದ್ದರು. ತಕ್ಷಣವೇ ಆರೋಗ್ಯ ಇಲಾಖೆಯ ಮೂಲಕ ಹೊಂಡಕ್ಕೆ ಆಮ್ಲಜನಕದ ವ್ಯವಸ್ಥೆಯನ್ನು ಮಾಡಲಾಯಿತು. 11 ಗಂಟೆ ಸುಮಾರಿಗೆ ಅಗ್ನಿಶಾಮಕ ದಳದ ಅಧಿಕಾರಿಗಳು ರೋಹಿತ್‍ನನ್ನು ಮೇಲಕ್ಕೆತ್ತಲು ಆರಂಭಿಸಿದರು. ಮಣ್ಣು ತಲೆಯ ಮೇಲೆ ಕುಸಿಯದಂತೆ ದೊಡ್ಡದಾದ ಡ್ರಮ್ ಒಂದನ್ನು ಆತನ ಸುತ್ತಲೂ ಅಳವಡಿಸಿದರು. ರೋಹಿತ್ ಭೂಮಿಯೊಳಗೆ ಹುದುಗಿ ಹೋಗಿದ್ದರಿಂದ ಪಕ್ಕದಲ್ಲಿ ಜೆಸಿಬಿ ಮೂಲಕ ಮತ್ತೊಂದು ಹೊಂಡವನ್ನು ಕೊರೆಯಲಾಯಿತು.
ಸುಮಾರು 3 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕ ಸಿಬ್ಬಂದಿ, ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ರೋಹಿತ್‍ನನ್ನು ಮೇಲಕ್ಕೆತ್ತಿದರು. ಘಟನೆ ಮಾಧ್ಯಮಗಳ ಮೂಲಕ ತಿಳಿಯುತ್ತಿದ್ದಂತೆ ಸ್ಥಳದಲ್ಲಿ ಸಾವಿರಾರು ಮಂದಿ ಜಮಾಯಿಸಿದ್ದರು. ರೋಹಿತ್ ಜೀವಂತವಾಗಿ ಮೇಲಕ್ಕೆ ಬರುತ್ತಿದ್ದಂತೆ ಸ್ಥಳದಲ್ಲಿ ಸೇರಿದ್ದ ಜನ ಹರ್ಷಾಚರಣೆ ಮಾಡಿದರು. ಹೊಂಡದಿಂದ ಮೇಲಕ್ಕೆತ್ತಿದ ಕೂಡಲೇ ರೋಹಿತ್‍ನನ್ನು ಪಕ್ಕದ ಆದರ್ಶ ಆಸ್ಪತ್ರೆಗೆ ರವಾನಿಸಲಾಯಿತು.
ಆಸ್ಪತ್ರೆಗೆ ರೋಹಿತ್‍ನನ್ನು ಕರೆತರುವ ಮೊದಲೇ ತಜ್ಞ ವೈದ್ಯರು ಎಲ್ಲ ತಯಾರಿ ಮಾಡಿಕೊಂಡು ಐಸಿಯುನಲ್ಲಿ ರೋಹಿತ್‍ಗಾಗಿ ಕಾಯುತ್ತಿದ್ದರು. ಸುಮಾರು 6 ಗಂಟೆಗಳ ಕಾಲ ಭೂಮಿಯ ಒಳಗಿದ್ದ ರೋಹಿತ್ ಗೆ ಆರಂಭಿಕ ಅಗತ್ಯ ಚಿಕಿತ್ಸೆಗಳನ್ನು ನೀಡಲಾಯಿತು. ಸದ್ಯ ದೇಹದ ಸಂಪೂರ್ಣ ಪರೀಕ್ಷೆಯನ್ನು ಮಾಡಿದ ವೈದ್ಯರು ಡ್ರಿಪ್ಸ್ ಅಳವಡಿಸಿದ್ದಾರೆ. ರೋಹಿತ್ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಕೆಲ ಚಿಕಿತ್ಸೆ ನೀಡಬೇಕೆಂದು ವೈದ್ಯರು ತಿಳಿಸಿದ್ದಾರೆ. ಸಾವು ಬೆನ್ನತ್ತಿ ಬಂದಿದ್ದರೂ ರೋಹಿತ್ ಆಯಸ್ಸು ಗಟ್ಟಿಯಿತ್ತು. 6 ಗಂಟೆಗಳ ಕಾಲ ಸಾವು ಬದುಕಿನ ನಡುವೆ ಹೋರಾಟ ಮಾಡಿದ ರೋಹಿತ್ ಸಾವು ಗೆದ್ದ ವೀರನಾಗಿ ಹೊರಬಂದಿದ್ದಾರೆ ಎಂದು ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದಾರೆ.