ಉಡುಪಿ: ನನ್ನ ಮೌನವೇ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿಗೆ ತೊಂದರೆಯಾಗಿದ್ದರೆ ನಾನೇನು ಮಾಡಲು ಸಾಧ್ಯವಿಲ್ಲ. ಅವರಿಬ್ಬರ ಹಾಗೆ ಓಲೈಕೆ ರಾಜಕಾರಣ ಮಾಡಿ ನನಗೆ ಗೊತ್ತಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿಗೆ ಬಹಳ ತೊಂದರೆಯಾಗಿದೆ. ನನ್ನ ಮೌನ ತೊಂದರೆ ಆದರೆ ನಾನೇನು ಮಾಡಲಿ? ಸಿದ್ದರಾಮಯ್ಯ, ಕುಮಾರಸ್ವಾಮಿ ಬಾಯಿಗೆ ಬಂದಂಗೆ ಮಾತನಾಡುತ್ತಾರೆ. ಮಾತಿಗೆ ಬೆಲೆ ಬರಬೇಕಾದರೆ ಭಾಷೆ ಬಹಳ ಮುಖ್ಯ. ನಾವು ಸರ್ಕಾರದಲ್ಲಿರುವವರು, ಕೆಲಸ ಮಾಡುವ ಸ್ಥಳದಲ್ಲಿ ಇದ್ದೇವೆ. ಯಾವ-ಯಾವ ಸಂದರ್ಭ ಯಾವ ಕ್ರಮ ತೆಗೆದುಕೊಳ್ಳಬೇಕು ಅದನ್ನು ತೆಗೆದುಕೊಂಡಿದ್ದೇವೆ ಎಂದು ಹೇಳಿದ್ದಾರೆ.
ಶಿವಮೊಗ್ಗ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಮ ತೆಗೆದುಕೊಂಡಿದ್ದೇವೆ. ಧಾರವಾಡದಲ್ಲಿ ಕಲ್ಲಂಗಡಿ ಅಂಗಡಿ ಒಡೆದು ಹಾಕಿ ಗಲಾಟೆ ಆದಾಗ ಕ್ರಮ ತೆಗೆದುಕೊಂಡಿದ್ದೇವೆ. ಕೋಲಾರದಲ್ಲಿ ಶ್ರೀರಾಮ ಶೋಭಾಯಾತ್ರೆ ವೇಳೆ ಕಲ್ಲುತೂರಾಟ ನಡೆದ ಸಂದರ್ಭದಲ್ಲಿ ಸೂಕ್ತ ಕ್ರಮ ತೆಗೆದುಕೊಂಡಿದ್ದೇವೆ. ಇವರ ಹಾಗೆ ಓಲೈಸುವ ರಾಜಕಾರಣ ಮಾಡಿಲ್ಲ, ಮಾಡೋದು ಇಲ್ಲ ಎಂದು ಮಾತಿನೇಟು ನೀಡಿದರು.