ಉಡುಪಿ: ದೊಡ್ಡದೊಂದು ಬಲೂನ್, ಅದರ ಪಕ್ಕದಲ್ಲೇ ಒಂದು ರಿಸೀವರ್. ಅದರೊಳಗೊಂದು ಚಿಪ್ ತೋಟವೊಂದರಲ್ಲಿ ಕಾಣಿಸಿಕೊಂಡು ಗ್ರಾಮಸ್ಥರಲ್ಲಿ ಆತಂಕ ಉಂಟುಮಾಡಿದ ಘಟನೆ ಉಡುಪಿಯಲ್ಲಿ ನಡೆದಿದೆ.
ಕಾರ್ಕಳ ತಾಲೂಕಿನ ಬೋಳ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಬೋಳ ಗ್ರಾಮದ ಕಿಶೋರ್ ಮೂಲ್ಯ ಎಂಬವರ ಮನೆಯ ತೋಟದಲ್ಲಿ ಈ ಗಾಳಿ ಯಂತ್ರ ಪತ್ತೆಯಾಗಿದೆ. ಕಿಶೋರ್ ಅವರ ಮನೆಯ ತೋಟದಲ್ಲಿ ದೊಡ್ಡ ಬಿಳಿ ಬಣ್ಣದ ಬಲೂನ್ ನೇತಾಡುತ್ತಿತ್ತು. ರಿಸೀವರ್ ಹೋಲುವ ಉಪಕರಣ ನೆಲಕ್ಕೆ ಬಿದ್ದಿತ್ತು.
Advertisement
Advertisement
ಬೆಳ್ಳಂಬೆಳಗ್ಗೆ ಇದನ್ನೆಲ್ಲಾ ಕಂಡ ಮನೆ ಮಂದಿ ಶಾಕ್ ಆಗಿದ್ದಾರೆ. ಇದೆಲ್ಲ ಏನು ಅಂತ ಗೊತ್ತಾಗದೆ ಭಯಭೀತರಾಗಿದ್ದಾರೆ. ಕೂಡಲೇ ಪೋಲೀಸ್ ಠಾಣೆ ಮತ್ತು ಕಂದಾಯ ಅಧಿಕಾರಿಗಳಿಗೆ ಮಾಹಿತಿ ತಿಳಿಸಿದ್ದಾರೆ. ಎರಡೂ ಇಲಾಖಾ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಇದರ ನಿಜ ವಿಷಯ ಅನಾವರಣವಾಗಿದೆ.
Advertisement
ಬೋಳ ಗ್ರಾಮದ ಮನೆಯ ತೋಟದಲ್ಲಿ ಬಂದು ಬಿದ್ದಿದ್ದು ಆರ್ ಎಸ್ ಜಿ-20 ಎ ಯ ಜಿಪಿಎಸ್ ರೇಡಿಯೋ ಅನ್ವೇಷಕ ಎಂಬ ಸಾಧನ. ಗಾಳಿಯ ಗುಣಮಟ್ಟ ಅಳೆಯಲು ಹವಾಮಾನ ಇಲಾಖೆ ಬಳಕೆ ಮಾಡುತ್ತದೆ. ದೊಡ್ಡದಾದ ಗಾಳಿ ಬಲೂನಿಗೆ ಅನ್ವೇಷಕ ಉಪಕರಣವನ್ನು ಕಟ್ಟಿ ಗಾಳಿಯಲ್ಲಿ ತೇಲಿ ಬಿಡಲಾಗುತ್ತದೆ. ಇದು ನೆಲದಿಂದ ಮೇಲಕ್ಕೆ ಹಾರಾಡುತ್ತಾ ವಿವಿಧ ಸ್ಥರಗಳ ಹವಾಮಾನ, ಗಾಳಿಯ ವೇಗ, ಉಷ್ಣಾಂಶ, ಆದ್ರತೆ, ಗಾಳಿಯ ಒತ್ತಡವನ್ನು ಲೆಕ್ಕಾಚಾರ ಹಾಕಿ ತನ್ನ ಕೇಂದ್ರಕ್ಕೆ ಕಳುಹಿಸಿಕೊಡುತ್ತದೆ. ಕರ್ನಾಟಕದ ಎರಡು ಕಡೆ ಈ ಉಪಕರಣವನ್ನು ಹಾರಿ ಬಿಡಲಾಗುತ್ತದೆ.
Advertisement
ಮಂಗಳೂರು ಮತ್ತು ಬೆಂಗಳೂರಿನಲ್ಲಿ ಮಾತ್ರ ಈ ಉಪಕರಣ ಗಾಳಿಯಲ್ಲಿ ತೇಲಲು ಬಿಟ್ಟು ಹವಾಮಾನದ ಮಾಹಿತಿ ಸಂಗ್ರಹಿಸಲಾಗುತ್ತದೆ. ಈ ಎರಡು ಕೇಂದ್ರದಲ್ಲಿ ಹವಾಮಾನ ಇಲಾಖೆಗೆ ಸೇರಿದ ಕೇಂದ್ರವಿದೆ. ದೇಶವ್ಯಾಪಿಯಾಗಿ ಒಟ್ಟು 36 ಹವಾಮಾನ ಕೇಂದ್ರಗಳಿದ್ದು, ಏಕಕಾಲದಲ್ಲಿ ಬೆಳಗ್ಗೆ 4.30ಕ್ಕೆ ಈ ಉಪಕರಣವನ್ನು ಹಾರಿ ಬಿಡಲಾಗುತ್ತದೆ. ಈ ಮೂಲಕ ಮಾಹಿತಿ ಪಡೆದುಕೊಳ್ಳಲಾಗುತ್ತದೆ.
ಸಾಮಾನ್ಯವಾಗಿ ಈ ಉಪಕರಣಗಳು ಸಮುದ್ರ ಅಥವಾ ಜನವಸತಿ ರಹಿತ ಸ್ಥಳಗಳಲ್ಲಿ ಪತನಗೊಳ್ಳುತ್ತದೆ. ಹೀಗೆ ಜನವಸತಿ ಪ್ರದೇಶಗಳಲ್ಲಿ ಅಪರೂಪಕ್ಕೊಮ್ಮೊಮ್ಮೆ ಬೀಳುತ್ತದೆ. ಈ ಹಿಂದೆ ಮಂಗಳೂರಿನ ನಂತೂರು, ಎಡ್ತೂರಿನಲ್ಲೂ ಇದೇ ರೀತಿ ಜನವಸತಿ ಸ್ಥಳದಲ್ಲಿ ಪತನವಾಗಿ ಆತಂಕ ಸೃಷ್ಟಿಯಾಗಿತ್ತು. ಸ್ಥಳಕ್ಕೆ ಕಾರ್ಕಳ ಗ್ರಾಮಾಂತರ ಪೊಲೀಸರು, ಗ್ರಾಮ ಕಂದಾಯ ನಿರೀಕ್ಷಕರು ಭೇಟಿ ನೀಡಿದರು. ನಂತರ ಕಂದಾಯ ಇಲಾಖೆಗೆ ಇದನ್ನು ಹಸ್ತಾಂತರಿಸುವ ಮೂಲಕ ಜನ ನೆಮ್ಮದಿಯ ನಿಟ್ಟುಸಿರು ಬಿಟ್ಟರು.