ಉಡುಪಿ: ಬೈಂದೂರು ತಾಲೂಕು ಜೋಡಮಕ್ಕಿ ಬಾಬು ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 13 ಮಂದಿ ಮೇಲೆ ಎಫ್‍ಐಆರ್ ದಾಖಲಾಗಿದೆ. ಮಂಗಳವಾರ ಸಂಜೆ ಬೈಂದೂರು ತಾಲೂಕಿನ ನೇರಳಕಟ್ಟೆ ಎಂಬಲ್ಲಿನ ರಸ್ತೆ ಬದಿಯಲ್ಲಿ ಬಾಬು ಶೆಟ್ಟಿ ರಕ್ತದ ಮಡುವಿನಲ್ಲಿ ಬಿದ್ದು ಪ್ರಾಣ ಕಳೆದುಕೊಂಡಿದ್ದರು. ಸಂಶಯವಿರುವ 13 ಮತ್ತು ಇತರೆ ಮಂದಿಯ ಮೇಲೆ ಎಫ್‍ಐಆರ್ ದಾಖಲಾಗಿದೆ.
ಬಾಬು ಶೆಟ್ಟಿ ಅವರನ್ನು ಮಾತುಕತೆಗೆ ಕರೆಸಿ ನಿರ್ಜನ ಪ್ರದೇಶದಲ್ಲಿ ದುಷ್ಕರ್ಮಿಗಳು ಇರಿದು, ಕೊಚ್ಚಿ ಕೊಲೆ ಮಾಡಿದ್ದರು ಎಂಬುದು ಮೇಲ್ನೋಟಕ್ಕೆ ಸಾಬೀತಾಗಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಕಂಡ್ಲೂರು ಪೊಲೀಸರು ಪರಿಶೀಲನೆ ನಡೆಸಿ ದೂರು ದಾಖಲಿಸಿಕೊಂಡಿದ್ದರು. ತನಿಖೆ ಆರಂಭಿಸಿರುವ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಧ ಮೂಲಗಳಿಂದ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
Advertisement
Advertisement
ಕೊಲೆಯಾದ ಬಾಬು ಶೆಟ್ಟಿ ಅಕ್ಕ ಮತ್ತು ಬಾವನ ಜಮೀನಿನ ಕುಮ್ಕಿಗೆ (ಸ್ವಂತ ಜಮೀನಿಗೆ ತಾಗಿಕೊಂಡಿರುವ ಸರ್ಕಾರಿ ಜಾಗ) ಸಂಬಂಧಿಸಿದಂತೆ ವ್ಯಾಜ್ಯವಿತ್ತು. ಮಂಗಳವಾರ ಈ ವಿಚಾರದಲ್ಲೇ ಜಗಳವಾಗಿ, ಸೇರಿದ್ದ ಗುಂಪು ಬಾಬು ಶೆಟ್ಟಿಗೆ ಹಲ್ಲೆ ಮಾಡಿ ಕೊಂದಿರುವ ಸಾಧ್ಯತೆಯಿದೆ. ಹೀಗಂತ ಆರೋಪಿಸಿ ಬಾಬು ಶೆಟ್ಟಿಯ ಸಹೋದರ ಪ್ರಕಾಶ್ ಶೆಟ್ಟಿ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು 13 ಮಂದಿಯನ್ನು ಆರೋಪಿಗಳೆಂದು ಕೇಸು ದಾಖಲಿಸಿಕೊಂಡಿದ್ದಾರೆ.
Advertisement
ಸ್ಥಳೀಯ ರಾಜೇಶ್ ಮಾತನಾಡಿ, ಈ ಘಟನೆಯ ಬಳಿಕ ಭಯದ ವಾತಾವರಣ ಶುರುವಾಗಿದೆ. ಇಲ್ಲಿ ರಸ್ತೆಯಿಲ್ಲ, ದಾರಿದೀಪ ಇಲ್ಲ. ಅಲ್ಲಲ್ಲಿ ಮನೆಗಳು ಇರುವುದರಿಂದ ಓಡಾಟ ಕೂಡ ಕಷ್ಟಕರ ಪರಿಸ್ಥಿತಿಯಾಗಿದೆ. ಪೊಲೀಸರು, ಜನಪ್ರತಿನಿಧಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದರು.
Advertisement
ಘಟನಾ ಸ್ಥಳಕ್ಕೆ ಶಾಸಕ ಸುಕುಮಾರ ಶೆಟ್ಟಿ ಬೇಟಿ ನೀಡಿ ಪರಿಶೀಲನೆ ನಡೆಸಿ, ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ. ಎಎಸ್‍ಪಿ ಹರಿರಾಮ್ ರಫ್ ಆಂಡ್ ಟಫ್ ಆಫೀಸರ್. ಅವರು ಕೂಡಲೇ ಆರೋಪಿಗಳನ್ನು ಬಂಧಿಸಬೇಕು. ಗ್ರಾಮಸ್ಥರು ಪೊಲೀಸರಿಗೆ ಪೂರ್ಣ ಸಹಕಾರ ನೀಡಲಿದ್ದಾರೆ ಎಂದು ಹೇಳಿದರು.
ಸಂಬಂಧಿ ಭಾಸ್ಕರ್ ಮಾತನಾಡಿ, ಬಾಬು ಶೆಟ್ಟಿ ಶ್ರಮ ಜೀವಿ. ಕೃಷಿ ಚಟುವಟಿಕೆಗಳ ಜೊತೆ ಟೆಂಪೋವನ್ನಿಟ್ಟುಕೊಂಡು ಬಾಡಿಗೆ ಮಾಡುತ್ತಿದ್ದರು. ಇನ್ನಿತರ ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. 15 ಸೆಂಟ್ಸ್ ಜಮೀನಿನ ವಿಚಾರದ ತಕರಾರು ಪರಿಹರಿಸಲು ಹೋಗಿ ಜಗಳವಾಗಿದೆ. ಯಾರು ಹೀಗೆ ಮಾಡಿದ್ದಾರೆ ಎಂಬೂದು ಗೊತ್ತಾಗುತ್ತಿಲ್ಲ. ಪೊಲೀಸರಿಗೆ ಸಣ್ಣಪುಟ್ಟ ಮಾಹಿತಿಗಳನ್ನು ನೀಡಿದ್ದೇವೆ ಎಂದು ಹೇಳಿದರು.