ಉಡುಪಿ: ಮಹಾಲಯ ಸಮುದ್ರ ಸ್ನಾನದ ವೇಳೆ ಅರಬ್ಬಿ ಸಮುದ್ರದ ದೊಡ್ಡ ಅಲೆಗೆ ಸಿಕ್ಕಿ ಬೈಂದೂರು ಶಾಸಕ ಜಾರಿ ಬಿದ್ದಿದ್ದಾರೆ. ಉಡುಪಿಯಲ್ಲಿ ಇಂದು ಮಧ್ಯಾಹ್ನ ಸಮುದ್ರ ಪ್ರಕ್ಷುಬ್ಧವಾಗಿರುವಾಗಲೇ ಬೈಂದೂರು ಶಾಸಕ ಸುಕುಮಾರ ಶೆಟ್ಟಿ ಸಮುದ್ರಕ್ಕೆ ಇಳಿದಿದ್ದರಿಂದ ಈ ಘಟನೆ ನಡೆದಿದೆ.
ಇವತ್ತು ಮಹಾಲಯ ಅಮವಾಸ್ಯೆ. ಮಹಾಲಯ ಅಮವಾಸ್ಯೆಯಂದು ಸಮುದ್ರ ಸ್ನಾನ ಮಾಡಬೇಕು ಎಂಬ ನಂಬಿಕೆ ಕರಾವಳಿ ಭಾಗದಲ್ಲಿದೆ. ಸಾವಿರಾರು ಜನ ಬೆಳಗ್ಗೆಯಿಂದ ಸಾಗರತೀರದಲ್ಲಿ ಸಮುದ್ರಸ್ನಾನ ಮಾಡಿದ್ದಾರೆ. ಉಡುಪಿ ಜಿಲ್ಲೆ ಬೈಂದೂರು ಬಿಜೆಪಿ ಶಾಸಕ ಸುಕುಮಾರ ಶೆಟ್ಟಿ ಕೂಡಾ ಸಮುದ್ರಕ್ಕಿಳಿದಿದ್ದಾರೆ. ಜನರೆಲ್ಲಾ ಬೆಳಗ್ಗೆಯೇ ಸಮುದ್ರಸ್ನಾನ ಮುಗಿಸಿದ್ದರು. ಆದರೆ ಶಾಸಕರು ಕಾರ್ಯಕ್ರಮಗಳನ್ನೆಲ್ಲ ಮುಗಿಸಿ ತ್ರಾಸಿ ಎಂಬಲ್ಲಿನ ಬೀಚ್ ಗೆ ಮಧ್ಯಾಹ್ನ ಬಂದಿದ್ದರು.
Advertisement
Advertisement
ಬಿಜೆಪಿ ಶಾಸಕರ ಜೊತೆಗಿದ್ದವರು ಸಮುದ್ರಕ್ಕೆ ಇಳಿದು ಹೋಗಬೇಡಿ. ಮಧ್ಯಾಹ್ನ 12 ಗಂಟೆ ನಂತರ ಸಮುದ್ರ ಪ್ರಕ್ಷುಬ್ಧವಾಗಿರುತ್ತದೆ. ದಡದಲ್ಲೇ ಮುಳುಗುಹಾಕಿ ಅಂತ ಮನವಿ ಮಾಡಿಕೊಂಡರೂ ಶಾಸಕರು ಯಾರ ಮಾತನ್ನು ಲೆಕ್ಕಿಸದೇ, ಪುಣ್ಯಸ್ನಾನಕ್ಕೆ ಇಳಿದಿದ್ದರು. ಪರಿಣಾಮ ಅರಬ್ಬಿ ಸಮುದ್ರದ ಭಾರೀ ಅಲೆ ಸುಕುಮಾರ ಶೆಟ್ಟಿ ಅವರನ್ನು ಪಲ್ಟಿ ಹೊಡೆಸಿದೆ.
Advertisement
ಕೂಡಲೇ ಜೊತೆಗಿದ್ದವರ ಸಹಾಯದಿಂದ ಶಾಸಕರು ಸುರಕ್ಷಿತವಾಗಿ ವಾಪಾಸ್ಸಾಗಿದ್ದಾರೆ. ಪ್ರತಿ ವರ್ಷ ಸುಕುಮಾರ ಶೆಟ್ಟಿ ಸಮುದ್ರಸ್ನಾನ ಮಾಡುತ್ತಾ ಬಂದಿದ್ದು, ಈ ಬಾರಿ ಮೊದಲ ಸಲ ಶಾಸಕನಾಗಿ ಸಮುದ್ರಸ್ನಾನ ಮಾಡಿದ್ದಾರೆ. ಸುತ್ತಮುತ್ತಲಿನ ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಕೆ ಮಾಡಿದ್ದಾರೆ.
Advertisement
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಶಾಸಕ ಸುಕುಮಾರ ಶೆಟ್ಟಿ, ಸಮುದ್ರಕ್ಕೆ ಇಳಿದವರು ಅಲೆಯ ಹೊಡೆತಕ್ಕೋ ಅಥವಾ ಕಾಲ ಬುಡದಲ್ಲಿರುವ ಮರಳು ಜಾರಿದಾಗ ಬೀಳಲೇಬೇಕು. ಕಾಲು ಜಾರಿದರೆ ಆನೆಯೇ ಬೀಳುತ್ತೆ ಸ್ವಾಮಿ. ನಾನೊಬ್ಬ ಸಾಮಾನ್ಯ ಮನುಷ್ಯ. ನನಗೇ ಟೆನ್ಶನ್ ಇಲ್ಲ. ನಿಮಗೆ ಯಾಕೆ ಸ್ವಾಮಿ ಇಷ್ಟೊಂದು ಟೆನ್ಶನ್ ಅಂತ ಹೇಳಿದರು. 20 ವರ್ಷದಿಂದ ಸಮುದ್ರದಲ್ಲಿ- ಕೆರೆಯಲ್ಲಿ ಸ್ನಾನ ಮಾಡುವುದನ್ನು ರೂಢಿಸಿಕೊಂಡಿದ್ದೇನೆ. ಶಿವನಿಗೆ ಪ್ರತಿದಿನ ಪೂಜೆ- ಅಭಿಷೇಕ ಮಾಡುವದರಿಂದ ದೇವರ ಆಶೀರ್ವಾದ ನನ್ನ ಜೊತೆಗಿದೆ. ಜನಸೇವೆ ಬಹಳ ಮಾಡುವುದಿದೆ ಎಂದು ತಿಳಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://youtu.be/e7Tv2PnnOig