ಉಡುಪಿ: ಕುಡಿದ ಮತ್ತಿನಲ್ಲಿದ್ದ ತಂದೆ ಮಗನ ಜೊತೆ ಕ್ಷುಲ್ಲಕ ಕಾರಣಕ್ಕೆ ಜಗಳವಾಡಿ ಚಾಕು ಇರಿದು ಕೊಲೆ ಮಾಡಿದ ಘಟನೆ ಕಾರ್ಕಳ ತಾಲೂಕು ಮಂಗಳಪಾದೆಯಲ್ಲಿ ನಡೆದಿದೆ.
ವಿಕ್ಟೋರ್ ಡಿಸೋಜಾ ಮದ್ಯ ವ್ಯಸನಿ. ದಿನಂಪ್ರತಿ ಕುಡಿದು ಮನೆ ಮನೆ ಮಂದಿ ಜೊತೆ ಜಗಳವಾಡುತ್ತಿದ್ದ. ತನ್ನ ಸ್ವಂತ ಮಗ ವಿವಿಯನ್‍ಗೆ ಇಂದು ಸಂಜೆ ಕುಡಿದ ಮತ್ತಿನಲ್ಲೇ ಚಾಕುವಿನಿಂದ ತೊಡೆಗೆ ಚುಚ್ಚಿದ್ದಾನೆ. ಬಳಿಕ ರಕ್ತದ ಮಡುವಿನಲ್ಲಿ ಬಿದ್ದಿದ್ದ ವಿವಿಯನ್ ಪ್ರಜ್ಞೆ ತಪ್ಪಿದ್ದಾನೆ.
ಮನೆಯಲ್ಲಿದ್ದ ಅಸ್ವಸ್ಥ ತಾಯಿ ಮತ್ತೊಬ್ಬ ಮಗನಿಗೆ ಫೋನ್ ಮಾಡಿದ್ದಾರೆ. ವಿವಿಯನ್‍ನ ಸಹೋದರ ಮನೆಗೆ ಬಂದು ಪೊಲೀಸರಿಗೆ ದೂರು ನೀಡಿ, ಆಸ್ಪತ್ರೆಗೆ ಸಾಗಿಸಿದ್ದಾನೆ. ಆಸ್ಪತ್ರೆ ತಲುಪಿ ವೈದ್ಯರು ಪರೀಕ್ಷೆ ನಡೆಸಿದಾಗ ವಿವಿಯನ್ ಕೊನೆಯುಸಿರೆಳೆದಿದ್ದ. ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ವಿಕ್ಟರ್ ಡಿಸೋಜನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮದ್ಯ ಸೇವನೆ ಮಾಡಿ ವಿಕ್ಟರ್ ಪ್ರತಿದಿನ ಮನೆಯಲ್ಲಿ ಜಗಳವಾಡುತ್ತಿದ್ದ. ಮಕ್ಕಳ ಜೊತೆ ಕ್ಷುಲ್ಲಕ ಕಾರಣಕ್ಕೆ ಕಾಲು ಕೆರೆದು ಜಗಳಕ್ಕಿಳಿಯುತ್ತಿದ್ದ ಎಂದು ಮನೆಯವರು ಮತ್ತು ಸ್ಥಳೀಯರು ಹೇಳಿದ್ದಾರೆ. ಮಂಗಳವಾರ ಸಂಜೆ ಜಗಳ ತಾರಕಕ್ಕೇರಿ ಚಾಕುವಿನಿಂದ ತೊಡೆಗೆ ಇರಿದಿದ್ದಾನೆ. ನಶೆಯಲ್ಲಿದ್ದ ವಿಕ್ಟರ್ ಗೆ ಮಗ ವಿವಿಯನ್ ಮೃತಪಟ್ಟಿರುವುದು ಇನ್ನೂ ಗೊತ್ತಿಗಿಲ್ಲ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆಂದು ಹೇಳುತ್ತಿರುವುದಾಗಿ ಪೊಲೀಸರು ಮಾಹಿತಿ ಕೊಟ್ಟಿದ್ದಾರೆ.
ರಕ್ತಸ್ರಾವದಿಂದ ಸಾವು
ವಿವಿಯನ್‍ಗೆ ಚಾಕು ಚುಚ್ಚಿದ್ದರಿಂದ ಆತ ರಕ್ತದ ನಡುವಿನಲ್ಲಿ ಬಿದ್ದು ಕೆಲಕಾಲ ಒದ್ದಾಡಿದ್ದಾನೆ. ಮನೆಯಲ್ಲಿ ತಾಯಿ ಇದ್ದರೂ ಅವರು ಕಾಲು ಮುರಿತಕ್ಕೆ ಒಳಗಾಗಿದ್ದರು. ಮತ್ತೊಬ್ಬ ಮಗನನ್ನು ಫೋನ್ ಮಾಡಿ ಕರೆಸಿದ ನಂತರ ಆತ ಬಂದಿದ್ದಾನೆ. ಬಂದವನೇ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಪೊಲೀಸರು ತುರ್ತು ಚಿಕಿತ್ಸಾ ವಾಹನಕ್ಕೆ ಕರೆಮಾಡಿದ್ದಾರೆ. ಇಷ್ಟೆಲ್ಲದರ ನಡುವೆ ವಿವಿಯನ್ ಕಾಲಿಗೆ ಬಟ್ಟೆಯನ್ನು ಕೂಡಾ ಯಾರೂ ಸುತ್ತಿಲ್ಲ. ತೀವ್ರ ರಕ್ತಸ್ರಾವಗೊಂಡು ವಿವಿಯನ್ ಮನೆಯಲ್ಲೇ ಪ್ರಾಣ ಕಳೆದುಕೊಂಡಿರಬಹುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.