ಬೆಂಗಳೂರು: ಕನ್ನಡ ಸಿನಿಮಾ ಇತಿಹಾಸವನ್ನೊಮ್ಮೆ ತಿರುಗಿ ನೋಡಿದರೆ ದೇಸಾಯಿ ತಮ್ಮ ಸಿನಿಮಾಗಳ ಮೂಲಕ ತಮ್ಮದೇ ಆದ ಸೊಗಡನ್ನು ಉಳಿಸಿಕೊಂಡುಬಂದವರು. ನಡುವೆ ಒಂದಷ್ಟು ಸಿನಿಮಾಗಳಲ್ಲಿ ಅದು ಘಮ ಕಳೆದುಕೊಂಡಿದ್ದನ್ನು ಸ್ವತಃ ದೇಸಾಯಿಯೇ ಒಪ್ಪಿಕೊಂಡಿದ್ದಾರೆ. ಇವತ್ತು ರಿಲೀಸಾಗಿರುವ ಉದ್ಘರ್ಷ ಸಿನಿಮಾವನ್ನು ನೋಡಿದ ಯಾರಿಗೇ ಆದರೂ ಸುನೀಲ್ ಕುಮಾರ್ ದೇಸಾಯಿ ಮತ್ತೊಂದು ಇನ್ನಿಂಗ್ಸ್ ಆರಂಭಿಸಿದ್ದಾರೆ ಅನ್ನಿಸದೇ ಇರಲಾರದು. ಯಾಕೆಂದರೆ, ಈ ಕಾಲಕ್ಕೆ ತಕ್ಕಂತೆ ಅಪ್‍ಡೇಟ್ ಆಗಿ, ರೋಚಕ ಸಿನಿಮಾಗಳನ್ನು ಇಷ್ಟಪಡುವ ವರ್ಗಕ್ಕೆಂದೇ ದೇಸಾಯಿ `ಉದ್ಘರ್ಷ’ವನ್ನು ಹೆಣೆದುಕೊಟ್ಟಿದ್ದಾರೆ.
ಕೊಲೆಯೊಂದರ ಸುತ್ತ ನಡೆಯುವ ಕಥೆ, ಅದಕ್ಕೊಂದು ಉಪಕತೆ ಸೇರಿಸಿ ಕ್ಷಣಕ್ಷಣಕ್ಕೂ ಗಾಬರಿ ಹುಟ್ಟಿಸುವ ಸನ್ನಿವೇಶಗಳನ್ನು ಸೃಷ್ಟಿಸಿ ಉದ್ಘರ್ಷವಾಗಿಸಿದ್ದಾರೆ ನಿರ್ದೇಶಕ ದೇಸಾಯಿ. ದಕ್ಷಿಣ ಭಾರತದ ಖ್ಯಾತ ಖಳನಟರೆಲ್ಲಾ ಇಲ್ಲಿ ಒಂದಾಗಿ ನಟಿಸಿದ್ದಾರೆ. ಠಾಕೂರ್ ಅನೂಪ್ ಸಿಂಗ್ ಬರೀ ವಿಲನ್ ಮಾತ್ರವಲ್ಲ, ಹೀರೋ ಆಗಿ ಕೂಡಾ ನೆಲೆ ನಿಲ್ಲಬಹುದು ಅನ್ನೋದು ಇಲ್ಲಿ ರುಜುವಾತಾಗಿದೆ.
ಇದು ಥ್ರಿಲ್ಲರ್ ಮತ್ತು ಆಕ್ಷನ್ ವರ್ಗಕ್ಕೆ ಸೇರಿದ ಸಿನಿಮಾ ಆಗಿರೋದರಿಂದ ಒಂದಿಷ್ಟು ರಕ್ತದ ಕಲೆ, ಹೊಡೆದಾಟಗಳು ಹೆಚ್ಚಿವೆ. ಆದರೆ ಅವು ಅತಿರಂಜಕವೆನಿಸದೇ ಸಂದರ್ಭಕ್ಕೆ ಸೂಕ್ತವಾಗಿರೋದು ಸಮಾಧಾನದ ವಿಷಯ. ಬಹುತೇಕ ಸಿನಿಮಾ ದಟ್ಟಾರಣ್ಯದಲ್ಲೇ ಸಾಗುತ್ತದೆ. ಒಬ್ಬರ ಬೆನ್ನಟ್ಟಿ ಒಬ್ಬರು ಸಾಗೋ ದಾರಿಯಲ್ಲಿ ಬೆಚ್ಚಿಬೀಳುವಂಥಾ ಘಟನೆಗಳು, ಅದರೊಳಗೊಂದು ಪ್ರೀತಿಯ ಎಳೆ, ದ್ವೇಷ, ಹಣಕ್ಕಾಗಿ ಏನನ್ನು ಬೇಕಾದರೂ ಮಾಡುವ ದುಷ್ಟರ ಜಾಡು ಎಲ್ಲವೂ ತೆರೆದುಕೊಳ್ಳುತ್ತಾ ಸಾಗುತ್ತದೆ.
ಹಿಂದೆ ಸುನೀಲ್ ಕುಮಾರ್ ದೇಸಾಯಿ ತರ್ಕ, ನಿಷ್ಕರ್ಷದಂಥಾ ಥ್ರಿಲ್ಲರ್ ಎಲಿಮೆಂಟುಗಳಿದ್ದ ಸಿನಿಮಾಗಳನ್ನು ಮಾಡಿದ್ದವರು. ಆಗ ಮೊಬೈಲ್ ಫೋನಿನ ಕಲ್ಪನೆಯೇ ಇರಲಿಲ್ಲ. ಆದರಿದು ಮೊಬೈಲ್ ಯುಗ. ಆ ಮೊಬೈಲೇ ಚಿತ್ರದ ಟರ್ನಿಂಗ್ ಪಾಯಿಂಟ್‍ಗಳಲ್ಲಿ ಒಂದಾಗಿರುವುದು ನಿರ್ದೇಶಕರು ಅಪ್‍ಡೇಟ್ ಆಗಿರೋದನ್ನು ಸೂಚಿಸುತ್ತದೆ. ಒಟ್ಟಾರೆಯಾಗಿ ಸಣ್ಣದೊಂದು ಕಥೆ ಮತ್ತು ಗಟ್ಟಿಯಾದ ಚಿತ್ರಕತೆಯನ್ನಿಟ್ಟುಕೊಂಡು ತಯಾರಿಸಿರುವ ದೇಸಾಯಿ ಬ್ರಾಂಡ್‍ನ ಈ ಸಿನಿಮಾ ಎಲ್ಲರಿಗೂ ರುಚಿಸಬಲ್ಲದು.