Connect with us

Latest

ಮಹಾರಾಷ್ಟ್ರದಲ್ಲಿ ಇಂದು ಉದ್ಧವ್ ಸರ್ಕಾರ ರಚನೆ – ಎನ್‍ಸಿಪಿಗೆ ಡಿಸಿಎಂ, ಕಾಂಗ್ರೆಸ್‍ಗೆ ಸ್ಪೀಕರ್ ಸ್ಥಾನ

Published

on

ಮುಂಬೈ: ಮಹಾರಾಷ್ಟ್ರದಲ್ಲಿಂದು ಉದ್ಧವ್ ಠಾಕ್ರೆ ನೇತೃತ್ವದ ‘ಮಹಾವಿಕಾಸ್ ಅಘಡಿ’ ಸರ್ಕಾರ ರಚನೆಯಾಗಲಿದೆ. ಸಂಜೆ 6.40ಕ್ಕೆ ಮುಂಬೈನ ಶಿವಾಜಿ ಪಾರ್ಕ್ ನಲ್ಲಿ ನಡೆಯಯುವ ಕಾರ್ಯಕ್ರಮದಲ್ಲಿ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಉದ್ಧವ್ ಠಾಕ್ರೆ ಜೊತೆಗೆ ಎನ್‍ಸಿಪಿಯ ಒಬ್ಬರು ಡಿಸಿಎಂ ಆಗಿ, ಕಾಂಗ್ರೆಸ್‍ನ ಇಬ್ಬರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಎನ್‍ಸಿಪಿಯ ಅಜಿತ್ ಪವಾರ್ ಬದಲು ಜಯಂತ್ ಪಾಟೀಲ್‍ಗೆ ಡಿಸಿಎಂ ಹುದ್ದೆ ಒಲಿಯುವ ಸಂಭವ ಇದೆ ಎನ್ನಲಾಗುತ್ತಿದೆ.

ಉದ್ಧವ್ ಠಾಕ್ರೆ ಪ್ರಮಾಣ ವಚನ ಸಮಾರಂಭಕ್ಕೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಪ್ರಧಾನಿ ಮೋದಿ, ಗೃಹ ಮಂತ್ರಿ ಅಮಿತ್ ಶಾ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಡಿಎಂಕೆಯ ಸ್ಟಾಲಿನ್ ಸೇರಿದಂತೆ ಹಲವು ಗಣ್ಯರನ್ನು ಆಹ್ವಾನಿಸಲಾಗಿದೆ. ಜೊತೆಗೆ ಮಹಾರಾಷ್ಟ್ರದ 400 ರೈತರನ್ನು ಪದಗ್ರಹಣ ಸಮಾರಂಭಕ್ಕೆ ಆಹ್ವಾನಿಸಲಾಗಿದೆ.

ಬುಧವಾರ ಸಂಜೆ ಸುಧೀರ್ಘ ಆರು ಗಂಟೆಗಳ ಕಾಲ ನಡೆದ ಮಹಾ ವಿಕಾಸ್ ಅಘಡಿ ಸಭೆಯಲ್ಲಿ ಅಧಿಕಾರ ಹಂಚಿಕೆಯ ಸೂತ್ರವನ್ನು ಫೈನಲ್ ಮಾಡಲಾಯ್ತು. ಇದರ ಅನ್ವಯ ಉದ್ಧವ್ ಠಾಕ್ರೆ ಐದು ವರ್ಷ ಸಿಎಂ ಆಗಲಿದ್ದಾರೆ. ಇಬ್ಬರು ಡಿಸಿಎಂಗಳ ಬದಲು ಎನ್‍ಸಿಪಿಯ ಒಬ್ಬರನ್ನು ಡಿಸಿಎಂ ಮಾಡಲು ತೀರ್ಮಾನಿಸಲಾಗಿದೆ. ಜೊತೆಗೆ ಕಾಂಗ್ರೆಸ್‍ಗೆ ಡಿಸಿಎಂ ಬದಲು ಸ್ಪೀಕರ್ ಹುದ್ದೆ ಕೊಡಲು ಸಭೆ ತೀರ್ಮಾನಿಸಿದೆ. ಡಿಸೆಂಬರ್ 3ರಂದು ಪೂರ್ಣ ಪ್ರಮಾಣದ ಸಂಪುಟ ಅಸ್ತಿತ್ವಕ್ಕೆ ಬರಲಿದೆ. ಇನ್ನು ಆದಿತ್ಯ ಠಾಕ್ರೆಗೆ ಮಂತ್ರಿ ಸ್ಥಾನ ಕೊಡದೇ, ಅವರನ್ನು ಶಾಡೋ ಸಿಎಂ ರೀತಿ ಬಿಂಬಿಸಲು ಶಿವಸೇನೆ ತೀರ್ಮಾನಿಸಿದೆ ಎಂದು ವರದಿಯಾಗಿದೆ.

ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರ ಬುಲೆಟ್ ರೈಲು ಯೋಜನೆಗೆ ಕೊಕ್ಕೆ ಹಾಕೋದು ಬಹುತೇಕ ಖಚಿತವಾಗಿದೆ. ನಮಗೆ ಬುಲೆಟ್ ರೈಲಿಗಿಂತ ರೈತರ ಹಿತ ಮುಖ್ಯ ಎಂದು ಸ್ಪಷ್ಟಪಡಿಸಿದೆ. ಸಭೆ ಬಳಿಕ ಮಾತನಾಡಿದ ಶಿವಸೇನೆಯ ದೀಪಕ್ ಕೆಸಾರ್ಕರ್, ನಮಗೆ ರೈತರ ಹಿತವೇ ಪ್ರಥಮ ಆದ್ಯತೆ. ಹಾಗಂತಾ ನಾವು ಬುಲೆಟ್ ರೈಲು ಯೋಜನೆಯನ್ನು ವಿರೋಧಿಸುತ್ತಿಲ್ಲ. ಮುಂಬೈ-ಅಹಮದಾಬಾದ್ ಸಂಪರ್ಕಿಸುವ ಈ ಯೋಜನೆ ಒಳ್ಳೆಯದು. ಆದ್ರೆ ಮೂರೂವರೆ ಸಾವಿರ ಖರ್ಚು ಮಾಡಿ ರೈಲಿನಲ್ಲಿ ಹೋಗುವ ಬದಲು ವಿಮಾನದಲ್ಲೇ ಪ್ರಯಾಣ ಮಾಡಬಹುದು. ಸದ್ಯಕ್ಕೆ ಬುಲೆಟ್ ರೈಲು ಯೋಜನೆ ಅಗತ್ಯವಿಲ್ಲ. ನಮ್ಮ ಸರ್ಕಾರಕ್ಕೆ ರೈತರು, ಮಹಿಳೆಯರು, ಕಾರ್ಮಿಕರ ಹಿತ ಮುಖ್ಯ. ನಿರುದ್ಯೋಗ ಹೋಗಲಾಡಿಸುವುದು ನಮ್ಮ ಆದ್ಯತೆ ಎಂದು ತಿಳಿಸಿದ್ದಾರೆ.

Click to comment

Leave a Reply

Your email address will not be published. Required fields are marked *